ಗಲಾಟೆಗೆ ನಿಮಿಷ, ಚೇತರಿಕೆಗೆ 15 ವರ್ಷ

ಗಲಾಟೆಗೆ ನಿಮಿಷ, ಚೇತರಿಕೆಗೆ 15 ವರ್ಷ

1991ರ ಘಟನೆಯಲ್ಲಿ ಭಾಗಿಯಾದ ಯಾರೂ ಉದ್ಧಾರ ಆಗಿಲ್ಲ : ಸೌಹಾರ್ದ ಸಭೆಯಲ್ಲಿ ಎಸ್ಸೆಸ್ಸೆಂ

ದಾವಣಗೆರೆ, ಸೆ. 24 –  1991ರಲ್ಲಿ ಒಂದು ಕ್ಷಣದ ಘಟನೆಯಿಂದ ಗಲಾಟೆಯಾಗಿ ನಗರದ ವ್ಯವಹಾರಕ್ಕೆ ವರ್ಷಗಳ ಕಾಲ ನಷ್ಟವಾಗಿತ್ತು. ಈಗ ಮತ್ತೆ ಗಲಾಟೆಯಾದರೆ ವ್ಯವಹಾರಗಳು ಬೇರೆ ಊರುಗಳ ಪಾಲಾಗಿ ಬಡವರು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಎಚ್ಚರಿಸಿದ್ದಾರೆ.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನಡೆದ ದಾವಣಗೆರೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

1991ರ ಘಟನೆಯಿಂದ ನಗರದ ದೊಡ್ಡ ಪಾಲಿನ
ವ್ಯವಹಾರ ರಾಣೇಬೆನ್ನೂರಿಗೆ ವರ್ಗಾವಣೆಯಾಯಿತು. ಚೇತರಿಸಿ ಕೊಳ್ಳಲು 15 ವರ್ಷಗಳೇ ಬೇಕಾ ಯಿತು. ಇದರಿಂದಾಗಿ ಬಡವರೇ ಕಷ್ಟ ಎದುರಿಸಬೇಕಾಯಿತು ಎಂದು ಸಚಿವರು ಹೇಳಿದರು.

1991ರಲ್ಲಿ ಆದ ಘಟನೆ ಹಾಗೂ ಅದರ ಪರಿಣಾಮಗಳನ್ನು ನೋಡಿದ್ದೇನೆ. ಆಗಿನ ಗಲಾಟೆಯಲ್ಲಿ ಭಾಗಿಯಾದ ಹುಡುಗರನ್ನು ಬಂಧಿಸಿದಾಗ, ನೆರವಿಗೆ ಯಾರೂ ಬರಲಿಲ್ಲ. ಬಂಧಿತರು ವರ್ಷಗಟ್ಟಲೇ ಬಳ್ಳಾರಿ ಜೈಲು ಸೇರಿದರು. ಅವರು ಹಾಗೂ ಅವರ ಕುಟುಂಬದ ಯಾರೂ ಉದ್ಧಾರ ಆಗಿಲ್ಲ ಎಂದು ಮಲ್ಲಿಕಾರ್ಜುನ್ ಹೇಳಿದರು.

ಮೊನ್ನೆ ಅರಳೀಮರದ ವೃತ್ತದಲ್ಲಿ ನಡೆದ ಘಟನೆಯಲ್ಲೂ ಏನೂ ಗೊತ್ತಿರದ ಹುಡುಗರನ್ನು ಗಲಾಟೆ ಮಾಡಲು ಬಿಟ್ಟಿದ್ದರು. ಇವರು ಕಷ್ಟಕ್ಕೆ ಸಿಲುಕಿದಾಗ ಬಿಡಿಸಲು ಯಾರೂ ಬರುವುದಿಲ್ಲ ಎಂದು ಸಚಿವರು ತಿಳಿಸಿದರು.

ಕೆಲವು ಕಿಡಿಗೇಡಿಗಳಿಂದ ಸಮಸ್ಯೆಯಾಗುತ್ತಿದೆ.  ಇಂತಹ  ಕಿಡಿಗೇಡಿಗಳಿಗೆ ಸ್ಥಳೀಯ ಮುಖಂಡರು ಕಡಿವಾಣ ಹಾಕಬೇಕು. ಈ ಹಿಂದಿನಂತೆ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದವರು ಕಿವಿಮಾತು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಕಾನೂನು ಸುವ್ಯಸ್ಥೆಗೆ ಧಕ್ಕೆ ತರುವ ಯಾವುದೇ ವ್ಯಕ್ತಿಗಳಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.

ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಮೊನ್ನೆ ನಡೆದ ಘಟನೆಯಲ್ಲಿ 6 ಪ್ರಕರಣಗಳನ್ನು ದಾಖಲು ಮಾಡಿ 50 ಜನರನ್ನು ಬಂಧಿಸಲಾಗಿದೆ ಎಂದರು.

ಮುಖಂಡರಾದ ಡಿ.ಬಸವರಾಜ್, ಎಸ್.ಟಿ.ವೀರೇಶ್, ವೈ.ಮಲ್ಲೇಶ್, ನಜೀರ್ ಅಹಮದ್, ಸೋಮ್ಲಾಪುರ ಹನುಮಂತಪ್ಪ, ಸೈಯದ್ ಸೈಫುಲ್ಲಾ, ಅಮ್ಜದ್ ಖಾನ್,  ಜಯಂತ್, ಟಿ.ಅಜ್ಗರ್ ಸೇರಿದಂತೆ ಅನೇಕ ಮುಖಂಡರು ಮಾತನಾಡಿ ಸಲಹೆಗಳನ್ನು ನೀಡಿದರು.

ವೇದಿಕೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್ ಉಪಸ್ಥಿತರಿದ್ದರು.

error: Content is protected !!