ಸತ್ಯ ಶೋಧನಾ ಸಮಿತಿ ಸಭೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ
ದಾವಣಗೆರೆ, ಸೆ.24- ಇಲ್ಲಿನ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ಸಿನ ಮತಗಳನ್ನು ಕಬಳಿಸಿದ್ದರೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಘಟಿತರಾಗಿ ಪಕ್ಷ ಗೆಲ್ಲಿಸಿರುವುದನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಶ್ಲ್ಯಾಘಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ `ಸತ್ಯ ಶೋಧನಾ ಸಮಿತಿಯ ಸಭೆ’ಯಲ್ಲಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿಗಳಿಂದ ವಿಧಾನಸಭಾ ಚುನಾವಣೆ ಯಲ್ಲಿ 135 ಸ್ಥಾನ ಗೆದ್ದೆವು. ಆದರೆ ಲೋಕಸಭಾ ಚುನಾವಣೆ ಯಲ್ಲಿ ಗ್ಯಾರಂಟಿಗಳು ಕೆಲಸ ಮಾಡಲಿಲ್ಲ. ಇದಕ್ಕೆ ಕಾರಣವೇ, ಬಿಜೆಪಿ ಅಸ್ತಿತ್ವದಲ್ಲಿರುವ ಗ್ರಾಮ್ ಒನ್ ಕೇಂದ್ರದ ವ್ಯಕ್ತಿಗಳು, ಅವರು ಗ್ಯಾರಂಟಿ ಯೋಜನೆ ಕುರಿತು ಮಾಡಿದ ಅಪಪ್ರಚಾರದಿಂದ ಪಕ್ಷಕ್ಕೆ ಹಿನ್ನಡೆ ಆಯಿತು ಎಂದರು.
ಕಳೆದ 25 ವರ್ಷಗಳಲ್ಲಿ ಹಿಂದಿನ ಸಂಸದರಿಂದ ಪಾರ್ಲಿಮೆಂಟ್ನಲ್ಲಿ ದಾವಣಗೆರೆ ಸಮಸ್ಯೆಗಳ ಬಗ್ಗೆ ಧ್ವನಿ ಕೇಳಿಸಿದ್ದಿಲ್ಲ. ಆದರೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಗೆಲುವು ಸಾಧಿಸಿದ ಕೆಲವೇ ದಿನಗಳಲ್ಲಿ ಪಾರ್ಲಿಮೆಂಟ್ನಲ್ಲಿ ಈ ಕ್ಷೇತ್ರದ ಸಮಸ್ಯೆ ಕುರಿತು ಮಾತನಾಡಿದ್ದಾರೆ ಎಂದು ಹೆಮ್ಮೆ ಪಟ್ಟರು.
ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೆ ಪಕ್ಷಕ್ಕೆ ಫಲ ದೊರೆತಿದ್ದು, ದಾವಣಗೆರೆಯಲ್ಲಿ ಹೊಸ ಶಕೆ ಪ್ರಾರಂಭವಾಗಿದೆ ಎಂದ ಅವರು, ಶೋಧನೆ ಸಮಿತಿಗೆ ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ವರದಿ ಮಂಡನೆ ಮಾಡಲಿದ್ದೇವೆ ಎಂದು ಹೇಳಿದರು.
ಕೆಪಿಸಿಸಿ ಸತ್ಯ ಶೋಧನಾ ಸಮಿತಿಯ ಸದಸ್ಯ ಎಂ.ವೈ. ಘೋರ್ಪಡೆ ಮಾತನಾಡಿ, ಡಿಸಿಸಿ ಮತ್ತು ಎಂಎಲ್ಎ ಗಳ ಮಟ್ಟದಲ್ಲಿ ಪಕ್ಷ ಬಲಿಷ್ಠ ಪಡಿಸಿಕೊಂಡು, ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಫಲಿತಾಂಶ ಲಭಿಸುವಂತೆ ಕೆಲಸ ಮಾಡಲು ಸೂಚಿಸಿದರು.
ಹೆಣದ ಮೇಲೆ ರಾಜಕೀಯ..
ಬಿಜೆಪಿಯವರು ಹಿಂದುತ್ವದ ವಿಚಾರದಲ್ಲಿ ಬಡವರ ಮಕ್ಕಳನ್ನು ಮುಂದೆ ಬಿಟ್ಟು, ಅವರ ಹೆಣದ ಮುಂದೆ ಭಾಷಣ ಬಿಗಿಯುತ್ತಾ ರಾಜಕೀಯ ಮಾಡುತ್ತಾರೆ.
ನಗರದಲ್ಲಿ ಮೊನ್ನೆ ನಡೆದ ಕೋಮು ಗಲಭೆಯು ನಾಗಮಂಗಲ ಸ್ವರೂಪ ಪಡೆಯುತ್ತಿತ್ತು. ಪೊಲೀಸ್ ಇಲಾಖೆಯ ನಿಯಂತ್ರಣದಿಂದ ಗಲಭೆ ಹತೋಟಿಗೆ ಬಂದಿತು.
– ದಿನೇಶ್ ಕೆ. ಶೆಟ್ಟಿ, ದೂಡಾ ಅಧ್ಯಕ್ಷ
ನ್ಯೂಸ್ ಚಾನೆಲ್ ಹಾಗೂ ವ್ಯಾಟ್ಸ್ಆಪ್ ನಿಯಂತ್ರಣಕ್ಕೆ ಸೂಚನೆ..!
ಸರ್ಕಾರಗಳು ಸುದ್ದಿ ಚಾನೆಲ್ಗಳನ್ನು ನಿಯಂತ್ರಣ ಮಾಡಬೇಕು. ಇವರಿಂದಲೇ ಜನರು ಹಾಳಾಗುತ್ತಿದ್ದಾರೆ. ಆದ್ದರಿಂದ ಈ ಚಾನಲ್ಗಳು ಮತ್ತು ವ್ಯಾಟ್ಸ್ಆಪ್ ಬಿಗಿ ಮಾಡಿದ್ರೆ ಯಾವ ಊರಲ್ಲೂ ಗಲಾಟೆಗಳು ಸಂಭವಿಸುವುದಿಲ್ಲ ಎಂದು ದಿನೇಶ್ ಕೆ. ಶೆಟ್ಟಿ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತಗಳಿಂದ ಗೆದ್ದಿದ್ದೇವೆ. ಹಾಗಾಗಿ ಮುಂದಿನ ದಿನಗಳಲ್ಲಿ 1ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪಕ್ಷ ಬಲಿಷ್ಠ ಪಡಿಸುವ ಬಗ್ಗೆ ಚರ್ಚಿಸಬೇಕು ಎಂದು ತಿಳಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಆಗಿರುವುದು ನಿಜ. ಆದರೆ ಉತ್ತಮ ಕಾರ್ಯ ಮಾಡಿದ ಎಂಎಲ್ಎ ಕ್ಷೇತ್ರಗಳಲ್ಲಿ ಪಕ್ಷದ ಬಾವುಟ ತಲೆ ಎತ್ತಿ ನಿಂತಿದೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷದ ಶಾಸಕರಿಂದ ಅಭಿವೃದ್ಧಿ ಕಾರ್ಯಗಳು ನಡೆದ ಕಾರಣ ಲೋಕಸಭಾ ಚುನಾವಣೆಯಲ್ಲಿ ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುವ ನಿರೀಕ್ಷೆ ಹೊಂದಿದ್ದೆವು ಆದರೆ ಪ್ರಚಾರದ ಕೊರತೆಯಿಂದ ಅಲ್ಪ ಮತಗಳಿಂದ ಜಯ ಸಿಕ್ಕಿದೆ ಎಂದು ಹೇಳಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಯ ನಾಯಕರು ತಮ್ಮ ವಾರ್ಡ್ಗಳಲ್ಲಿ ವಿಶೇಷ ಕಾರ್ಯಕ್ರಮ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಸೆಳೆಯುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ, 1 ಲಕ್ಷ ಮತಗಳಿಂದ ಗೆಲ್ಲುವ ನಂಬಿಕೆ ಇತ್ತು. ಆದರೆ ಪಕ್ಷದಲ್ಲೇ ನಡೆದ ಕುತಂತ್ರದಿಂದ ಪಕ್ಷಕ್ಕೆ ಅಲ್ಪ ಮತಗಳು ಬಂದಿವೆ ಎಂದರು.
ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಪಕ್ಷದ ಅಸ್ತಿತ್ವಕ್ಕೆ ಪ್ರಾಮಾಣಿಕ ಸೇವೆ ಮಾಡುತ್ತೇವೆ. ಮತ್ತು ಪಕ್ಷದ ತೊಡಕಿಗೆ ಕಾರಣರಾದ ಕೆಲವರ ಹೆಸರನ್ನು ಶಿಸ್ತು ಸಮಿತಿಗೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಈ ವೇಳೆ ಮುಖಂಡ ನಂದಿಗಾವಿ ಶ್ರೀನಿವಾಸ್, ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಬಸಣ್ಣ, ಜವಾಹರ ಲಾಲ್ ಬಾಲ್ ಮಂಚ್ನ ಮೈನುದ್ದಿನ್, ಎಸ್ಟಿ ಅಧ್ಯಕ್ಷ ಮಂಜುನಾಥ್, ಹದಡಿ ನಿಂಗಣ್ಣ, ಅನಿತಾ ಬಾಯಿ, ಶಂಷಿದ್, ಡೋಲಿ ಚಂದ್ರು, ರಾಘವೇಂದ್ರ ಹುಲಿಕಟ್ಟಿ, ದ್ರಾಕ್ಷಾಯಿಣಿ, ಮಂಗಳಮ್ಮ, ಅಕ್ಕಿ ರಾಮಚಂದ್ರ, ಸುರೇಶ್ ಕೋಗುಂಡೆ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.