ಮಲೇಬೆನ್ನೂರಿನಲ್ಲಿ ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್ ಭರವಸೆ
ಮಲೇಬೆನ್ನೂರು, ಸೆ.23- ಪೌರ ಕಾರ್ಮಿಕರ ಬೇಡಿಕೆಗಳಿಗೆ ಸರ್ಕಾರಗಳು ಪೂರಕವಾಗಿ ಸ್ಪಂದಿಸುತ್ತಾ ಬಂದಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಪ್ಪ ಭಜಕ್ಕನವರ್ ಹೇಳಿದರು.
ಅವರು, ಸೋಮವಾರ ಪಟ್ಟಣದ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಲ ಹೋರುವ ಪದ್ಧತಿ ನಿರ್ಮೂಲನೆ, ಪ್ರತಿ ಮನೆಗೂ ಶೌಚಾಲಯ ಕಡ್ಡಾಯಗೊಳಿಸಿರುವುದು, ಪೌರ ಕಾರ್ಮಿಕರನ್ನು ದಿನಗೂಲಿ ನೌಕರರನ್ನಾಗಿ ಮಾಡಿರುವ ಜೊತೆಗೆ ಸಮಾನ ವೇತನಕ್ಕೆ ಒಳಪಡಿಸಿರುವುದೂ ಕೂಡಾ ಸರ್ಕಾರಗಳ ಕ್ರಾಂತಿಕಾರಿ ಬದಲಾವಣೆಗಳಾಗಿವೆ ಎಂದರು.
ಎಲ್ಲಾ ಕಡೆ ಪೌರ ಕಾರ್ಮಿಕರು ಶ್ರದ್ಧೆ, ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇವರನ್ನು ಗೌರವದಿಂದ ಕಾಣಬೇಕೆಂದು ಹೇಳಿದ ಭಜಕ್ಕನವರ್, ಜನಸಂಖ್ಯಾ ಆಧಾರದ ಮೇಲೆ ಮಲೇಬೆನ್ನೂರು ಪುರಸಭೆಗೆ 35 ಕಾರ್ಮಿಕರ ಅವಶ್ಯಕತೆ ಇದೆ.
ಆದರೆ, ಇಲ್ಲೀಗ 18 ಜನ ಮಾತ್ರ ಇದ್ದಾರೆ. ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಳ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ನಾಳೆ ದಿನಾಂಕ 25 ರಂದು ನಡೆಯುವ ಪುರಸಭೆಯ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಿ, ಜಿಲ್ಲಾಧಿಕಾರಿಗಳ ಅನುಮತಿ ಕೋರಲಾಗುವುದೆಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುರಸಭೆಯ ಪ್ರಭಾರಿ ಅಧ್ಯಕ್ಷರಾದ ಶ್ರೀಮತಿ ನಪ್ಸೀಯಾ ಬಾನು ಮಾತನಾಡಿ, ನಮ್ಮ ಪಟ್ಟಣವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರನ್ನು ಗೌರವದಿಂದ ಕಾಣೋಣ ಎಂದು ಪೌರ ಕಾರ್ಮಿಕರಿಗೆ ಶುಭಾಶಯ ಕೋರಿದರು.
ಪುರಸಭೆ ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್, ಕೆ.ಜಿ.ಲೋಕೇಶ್, ನಯಾಜ್, ಗೌಡ್ರ ಮಂಜಣ್ಣ, ಶ್ರೀಮತಿ ಸುಧಾ ಪಿ.
ಆರ್.ರಾಜು, ಶ್ರೀಮತಿ ವಿಜಯಲಕ್ಷ್ಮಿ ಕೆ.ಪಿ.ಗಂಗಾಧರ್, ಸಾಬೀರ್ ಅಲಿ, ಚಮನ್ ಷಾ, ಭಾನುವಳ್ಳಿ ಸುರೇಶ್, ಯುಸೂಫ್, ಪುರಸಭೆ ನಾಮಿನಿ ಸದಸ್ಯ ಎ.ಆರೀಫ್ ಅಲಿ ಮಾತನಾಡಿದರು.
ಪರಿಸರ ಇಂಜಿನಿಯರ್ ಉಮೇಶ್, ಸಮುದಾಯ ಸಂಘಟಣಾಧಿಕಾರಿ ದಿನಕರ್, ಆರೋಗ್ಯ ನಿರೀಕ್ಷಕರಾದ ನವೀನ್, ಶಿವರಾಜ್, ಇಮ್ರಾನ್, ಮಂಜುನಾಥ್ ಅವರು, ಪೌರ ಕಾರ್ಮಿಕರಿಗೆ ಶುಭಾಶಯ ಕೋರಿ, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಪೌರ ನೌಕರರ ಸಂಘದ ಅಧ್ಯಕ್ಷ ಕೀಜರ್ ಅಲಿಖಾನ್, ಉಪಾಧ್ಯಕ್ಷ ಹೆಚ್.ಹಾಲೇಶಪ್ಪ ಮಾತನಾಡಿ, ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ವಿಶೇಷ ನಿಗಾ ವಹಿಸಬೇಕೆಂದು ಮನವಿ ಮಾಡಿದರು.
ಪುರಸಭೆ ಸದಸ್ಯರಾದ ಟಿ.ಹನುಮಂತಪ್ಪ, ಷಾ ಅಬ್ರಾರ್, ಖಲೀಲ್, ಬಿ.ರಫೀಕ್ ಸಾಬ್, ಬಸವರಾಜ್ ದೊಡ್ಮನಿ, ಶ್ರೀಮತಿ ಸುಮಯ್ಯ ಬಾನು ಎಂ.ಬಿ.ರುಸ್ತುಂ, ಜಿಗಳೇರ ಹಾಲೇಶಪ್ಪ, ಓ.ಜಿ.ಕುಮಾರ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಈ ವೇಳೆ ಎಲ್ಲಾ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಕೊಡುಗೆಗಳನ್ನು ನೀಡಲಾಯಿತು.
ಪುರಸಭೆ ಸದಸ್ಯ ದಾದಾಪೀರ್, ಆರೋಗ್ಯ ನಿರೀಕ್ಷಕ ಶಿವರಾಜ್ ಅವರು ಪೌರ ಕಾರ್ಮಿಕರ ಕುರಿತಾಗಿ ಬರೆದಿರುವ ಕವಿತೆಯನ್ನು ವಾಚನ ಮಾಡಿ, ಎಲ್ಲರ ಗಮನ ಸೆಳೆದರು.