ರೈತರಿಗೆ ಸಮಗ್ರ ಯೋಜನೆ ಜಾರಿ ತರಲಿದ್ದೇನೆ

ರೈತರಿಗೆ ಸಮಗ್ರ ಯೋಜನೆ ಜಾರಿ ತರಲಿದ್ದೇನೆ

ಜನ್ಮ ದಿನದ ಸಂಭ್ರಮಾಚರಣೆ ಹಾಗೂ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಜಿಲ್ಲಾ ಸಚಿವ ಎಸ್ಸೆಸ್ಸೆಂ

ದಾವಣಗೆರೆ, ಸೆ.22- ಜಿಲ್ಲೆಯ ರೈತರಿಗಾಗಿ ಸಮಗ್ರ ಯೋಜನೆ ಜಾರಿ ತರುವ ಮೂಲಕ ಕೆರೆ-ಕಟ್ಟೆಗಳನ್ನು ತುಂಬಿಸುವ ನೀರಾವರಿ ಯೋಜನೆಗಳನ್ನು ತರಲಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಭರವಸೆ ನೀಡಿದರು.

ನಗರದ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ 57ನೇ ಜನ್ಮ ದಿನದ ಸಂಭ್ರಮಾಚರಣೆ ಮತ್ತು ಮತದಾರರಿಗೆ ಸಂಸದರಿಂದ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

2ರಿಂದ 3 ವರ್ಷಗಳ ಕಾಲ ಬರಗಾಲ ಬಂದರೂ ರೈತರು ಪರಿತಪಿಸದಂತೆ ಈ ಸಮಗ್ರ ಯೋಜನೆಯು ಕಾಪಾಡಲಿದೆ. ಈ ಬಗ್ಗೆ ಡಿ.ಕೆ ಶಿವಕುಮಾರ್‌ ಸೇರಿದಂತೆ ಪಕ್ಷದ ಮುಖಂಡರ ಸಮ್ಮುಖದಲ್ಲಿ ಸಭೆ ಮಾಡಿದ್ದೇನೆ ಎಂದು ತಿಳಿಸಿದರು.

ಆನಗೋಡಿನಲ್ಲಿ ರೈತರ ಸ್ಮಾರಕ ಅಭಿವೃದ್ಧಿ ಪಡಿಸಲು ಎಪಿಎಂಸಿ ಯಿಂದ ತುರ್ತಾಗಿ 60ಲಕ್ಷ ರೂ. ಅನುದಾನ ನೀಡಲು ಸೂಚಿಸಿದ್ದೇನೆ ಎಂದು ಹೇಳಿದರು. ಸಾರ್ವಜನಿಕ ಚಿಗಟೇರಿ ಜಿಲ್ಲಾಸ್ಪತ್ರೆಗೆ ನೂತನ ವಾರ್ಡ್‌ ನಿರ್ಮಿಸಲು 20 ಕೋಟಿ ಮಂಜೂರು ಮಾಡಿಸಿದ್ದು, ನಮ್ಮ ಯೋಜನೆಗಳು ಕಳಪೆಯಾಗಲು ನಾವು ಬಿಡುವುದಿಲ್ಲ ಎಂದರು.

ಕ್ಷೇತ್ರದಲ್ಲಿ 25 ವರ್ಷ ಆಡಳಿತ ನಡೆಸಿದವರನ್ನು ಕಡೆಗಣಿಸಿ, ಕಾಂಗ್ರೆಸ್‌ ಪಕ್ಷ ಹಾಗೂ ಸಂಸದೆ ಡಾ. ಪ್ರಭಾ ಅವರ ಗೆಲುವಿಗೆ ಕಾರಣರಾದ ಎಲ್ಲರಿಗೂ ಶಾಮನೂರು ಕುಟುಂಬ ಋಣಿಯಾಗಿ ಇರಲಿದೆ ಎಂದು ಹೇಳಿದರು. 

ಕಾರ್ಯಕರ್ತರ ಶ್ರಮದಿಂದಲೇ ಜನ ಪ್ರತಿನಿಧಿಗಳಾಗಲು ಸಾಧ್ಯ. ಹಾಗಾಗಿ ಪಕ್ಷದ ಕಾರ್ಯಕರ್ತರು ಬರುವ ದಿನಗಳಲ್ಲಿ ಜಿ.ಪಂ, ತಾ.ಪಂ ಹಾಗೂ ಪಾಲಿಕೆಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ದಾವಣಗೆರೆಯ ಇತಿಹಾಸವನ್ನೇ ಬದಲಿಸುವ ಸಂಸದರನ್ನು ಆಯ್ಕೆ ಮಾಡಿದ್ದಿರೀ. ರಾಜ್ಯದ ಹಿತಕ್ಕೆ ದಕ್ಕೆ ಬರದಂತೆ ಅವರು ಜನ ಸೇವೆ ಮಾಡಲಿದ್ದಾರೆ ಎಂದರು.

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಮಾತನಾಡಿ, ಚುನಾವಣೆ ಪೂರ್ವದಲ್ಲಿ ನಾವು 1ಲಕ್ಷ ಬಹುಮತದಿಂದ ಗೆಲ್ಲುತ್ತೇವೆ ಎಂದು ನಿರೀಕ್ಷಿಸಿದ್ದೆವು ಆದರೆ ಕೇವಲ 28 ಸಾವಿರ ಮತಗಳಿಂದಷ್ಟೇ ಗೆದ್ದಿದ್ದೇವೆ. ಹಾಗಾಗಿ ಈ ಕ್ಷೇತ್ರವನ್ನು ಕಾಂಗ್ರೆಸ್ಸಿನ ಭದ್ರ ಕೋಟೆಯಾಗಿಸಲು ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಜನರ ಮನವೊಲಿಸಲು ಇನ್ನಷ್ಟು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಮಲ್ಲಿಕಾರ್ಜುನ್‌ ಅವರ ಜನ್ಮದಿನದ ಪ್ರಯುಕ್ತ ರಕ್ತದಾನದ ದೊಡ್ಡ ಯೋಜನೆ ಹಾಕಿಕೊಂಡಿದ್ದೆವು ಇದರಲ್ಲಿ 3 ಸಾವಿರ ಜನ ರಕ್ತದಾನ ಮಾಡಿದ್ದು, ಅವಶ್ಯ ಇರುವ ರೋಗಿಗಳಿಗೆ ಉಚಿತವಾಗಿ ರಕ್ತ ನೀಡಲಾಗುವುದು ಎಂದು ಹೇಳಿದರು.

ಈ ವೇಳೆ ಶಾಸಕರಾದ ದೇವೆಂದ್ರಪ್ಪ, ಕೆ.ಎಸ್‌. ಬಸವಂತಪ್ಪ, ಶಾಂತನಗೌಡ, ಮಾಜಿ ಶಾಸಕ ಎಸ್‌. ರಾಮಪ್ಪ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ಮೇಯರ್‌ ವಿನಾಯಕ ಪೈಲ್ವಾನ್‌, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್‌.ಬಿ. ಮಂಜಪ್ಪ, ಅನಿತಾ ಬಾಯಿ, ರೇವಣಸಿದ್ದಪ್ಪ,ಎಂ.ಜಿ. ರಾಜಶೇಖರಪ್ಪ, ಡಿ. ಬಸವರಾಜ್‌, ಚಮನ್‌ಸಾಬ್‌, ದಿನೇಶ್‌ ಕೆ. ಶೆಟ್ಟಿ, ಹೆಚ್‌. ಆಂಜನೇಯ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

error: Content is protected !!