ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಪಂಪಾಪತಿ ಹೆಸರು: ಎಸ್ಸೆಸ್ಸೆಂ
ನವೀಕೃತ ಬಸ್ ನಿಲ್ದಾಣದಿಂದ ವಾಹನಗಳ ಕಾರ್ಯಾಚರಣೆಗೆ ಚಾಲನೆ
ದಾವಣಗೆರೆ, ಸೆ. 22 – ನಗರದ ಕೆ.ಎಸ್.ಆರ್.ಟಿ.ಸಿ. ನವೀಕೃತ ಬಸ್ ನಿಲ್ದಾಣಕ್ಕೆ ಕಮ್ಯುನಿಸ್ಟ್ ನಾಯಕ ಪಂಪಾ ಪತಿ ಅವರ ಹೆಸರಿಡುವ ಬಗ್ಗೆ ಸೂಚನೆ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ನವೀಕೃತ ಬಸ್ ನಿಲ್ದಾಣದಿಂದ ವಾಹನಗಳ ಕಾರ್ಯಾಚರಣೆ ಹಾಗೂ ನೂತನ ಮಾರ್ಗಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
1985ರಲ್ಲಿ ಪಂಪಾಪತಿ ಅವರು ಈ ಬಸ್ ನಿಲ್ದಾಣ ಸ್ಥಾಪನೆಗೆ ಆಮರಣಾಂತ ಉಪವಾಸ ಮಾಡಿದ್ದರು. ಬಸ್ ನಿಲ್ದಾಣ ಹಾಗೂ ಬಸ್ ಡಿಪೋ ಸ್ಥಾಪನೆಯಾಗಲು ಅವರೇ ಮೂಲ ಕಾರಣೀಭೂತರು. ಅವರ ಹೆಸರನ್ನು ಬಸ್ ನಿಲ್ದಾಣಕ್ಕೆ ಇಡುವಂತೆ ಹಲವು ಸಂಘ ಸಂಸ್ಥೆಗಳು ಒತ್ತಾಯಿಸಿವೆ. ಈ ಬಗ್ಗೆ ನಾನು ಪಾಲಿಕೆಯ ಮೇಯರ್ ಹಾಗೂ ಪಾಲಿಕೆ ಸದಸ್ಯರಿಗೆ ಈಗಾಗಲೇ ಸೂಚನೆ ನೀಡಿ ದ್ದೇನೆ ಎಂದು ಸಚಿವರು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಬಡವರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇನ್ನೂ ಹೆಚ್ಚು ಕಾಮಗಾರಿಗಳನ್ನು ಆರಂಭಿ ಸಬೇಕಿದೆ. ನನ್ನ ಮನಸ್ಸು ಒಪ್ಪುವಷ್ಟು ಕಾಮಗಾರಿ ಆಗಿಲ್ಲ. ಇನ್ನೂ ಹೆಚ್ಚು ಸುಂದರ ನಗರ ಮಾಡಲು ಕ್ರಮಗಳನ್ನು ತೆಗೆದುಕೊಳ್ಳ ಲಾಗುವುದು ಎಂದರು.
ಬಿಜೆಪಿಯವರಿಗೆ ಹಣದ ಬಳಕೆ ಗೊತ್ತಿಲ್ಲ
ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನವೀಕರಣಕ್ಕೆ ಸ್ಮಾರ್ಟ್ ಸಿಟಿ ಹಣ ಪಡೆಯುವ ಅಗತ್ಯವಿರಲಿಲ್ಲ. ಸರ್ಕಾರದಿಂದಲೇ ಹಣ ಪಡೆಯಬಹುದಿತ್ತು. ಸ್ಮಾರ್ಟ್ ಸಿಟಿ ಹಣವನ್ನು ನಗರದ ಬೇರೆ ಅಭಿವೃದ್ಧಿ ಯೋಜನೆಗಳಿಗೆ ಬಳಸಬಹುದಿತ್ತು. ಆದರೆ, ಬಸ್ ನಿಲ್ದಾಣಕ್ಕೆ ಸ್ಮಾರ್ಟ್ ಸಿಟಿ ಹಣ ಬಳಕೆ ಮಾಡಿದ ಬಿಜೆಪಿಯವರು ಮೂರ್ಖರು, ಹಣ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದು ಗೊತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು. ಆದರೂ, ಈ ಯೋಜನೆಯಲ್ಲಿ ಎಲ್ಲೂ ಕಳಪೆ ಕಾಮಗಾರಿಗಳಾಗಿಲ್ಲ. ದಾವಣಗೆರೆ ಜನತೆ ಹಾಗೂ ಹೊರಗಿನಿಂದ ಬರುವವರಿಗೆ ಸುಸಜ್ಜಿತ ಬಸ್ ನಿಲ್ದಾಣ ಸಿದ್ಧವಾಗಿದೆ ಎಂದವರು ತಿಳಿಸಿದರು. ಖಾಸಗಿ ಬಸ್ ನಿಲ್ದಾಣದ ನವೀಕರಣಕ್ಕೆ ಬಹಳ ಚೆನ್ನಾಗಿ ಯೋಜನೆ ರೂಪಿಸಿದ್ದೆವು. ಆದರೆ, ಬಿಜೆಪಿ ಆಡಳಿತದಲ್ಲಿ ಅದನ್ನು ಮೊಟಕುಗೊಳಿಸಲಾಯಿತು. ಈಗ ಅಲ್ಲಿ ಬಸ್ ಟರ್ನ್ ಹಾಗೂ ರಿವರ್ಸ್ ಹೋಗಲು ಸಾಧ್ಯವಿಲ್ಲದಂತಾಗಿದೆ. ಈಗ ಯೋಜನೆಯನ್ನು ಬದಲಿಸಿದ್ದೇವೆ ಎಂದೂ ಸಚಿವರು ಹೇಳಿದರು.
ಹೆಚ್ಚು ಅನುದಾನ ತರುವ ಮೂಲಕ ನೀರಾವರಿ, ರಸ್ತೆ ಸೇರಿದಂತೆ ಮೂಲ ಭೂತ ಸೌಲಭ್ಯಗಳನ್ನು ಒದಗಿಸಲು ಕಾರ್ಯೋನ್ಮುಖರಾ ಗುತ್ತೇವೆ. ಅನ್ನ, ಸೂರು, ವಿದ್ಯಾಭ್ಯಾಸ ಹಾಗೂ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವರು ಹೇಳಿದರು.
ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸಿಬ್ಬಂದಿಗೆ ಕ್ವಾರ್ಟರ್ಸ್ ಸೌಲಭ್ಯ ಕಲ್ಪಿಸುವಂತೆ ಸಚಿವರಿಗೆ ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಲಾಯಿತು. ದೂಡಾ ಮೂಲಕ ಜಾಗ ಒದಗಿಸಿ ಕ್ವಾರ್ಟರ್ಸ್ಗೆ ನೆರವು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇದೇ ವೇಳೆ ದಾವಣಗೆರೆ – ಶಿವಮೊಗ್ಗ ಮಾರ್ಗಕ್ಕೆ ಎರಡು ರಾಜಹಂಸ, ದಾವಣಗೆರೆ – ಕುಕ್ಕೆ ಸುಬ್ರಹ್ಮಣ್ಯ ಮತ್ತು ದಾವಣಗೆರೆ – ಸಿರಿಗೆರೆ ಮಠಕ್ಕೆ ವೇಗದೂತ ಬಸ್ಗಳಿಗೆ ಸಚಿವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ, ಮೇಯರ್ ವಿನಾಯಕ್ ಪೈಲ್ವಾನ್, ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್, ವಿಭಾಗೀಯ ಯಾಂತ್ರಿಕ ಅಭಿಯಂತರ ಕೆ. ವೆಂಕಟೇಶ್, ವಿಭಾಗೀಯ ಸಂಚಾಲನಾಧಿಕಾರಿ ಫಕೃದ್ದೀನ್ ಮತ್ತಿತರರು ಉಪಸ್ಥಿತರಿದ್ದರು.