ಕಲಾ ವಿವಿಯ `ವಜ್ರ ಮಹೋತ್ಸವ’ ಸಮಾರಂಭದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ ವಿವಿಯ ಕುಲಪತಿಗಳು ಹಾಗೂ ಸಂಸದರು ಕಲಾ ಶಾಲೆಯ ಶಿಕ್ಷಕರನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು.
-ಚಿ.ಸು. ಕೃಷ್ಣಶೆಟ್ಟಿ
ಡಿಸಿ, ಎಸ್ಪಿ ಮನೆಗೆ ಅವಕಾಶವಿಲ್ಲ
ದೃಶ್ಯಕಲಾ ಮಹಾವಿದ್ಯಾಲಯದ ಜಾಗದಲ್ಲಿ ಡಿಸಿ ಹಾಗೂ ಎಸ್ಪಿ ಅವರ ಮನೆ ನಿರ್ಮಾಣ ಆಗದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆದೇಶಿಸಿದ್ದಾರೆ. ಅದರ ಬಗ್ಗೆ ಆತಂಕ ಬೇಡ.
-ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸದರು
ದಾವಣಗೆರೆ, ಸೆ.22- ದೃಶ್ಯಕಲಾ ಮಹಾ ವಿದ್ಯಾಲಯದ ಜೊತೆ ನಾವಿದ್ದೇವೆ, ಈ ಕಲಾ ಶಾಲೆಯ ಅಭಿವೃದ್ಧಿಗೆ ಪೂರಕವಾದ `ರೋಡ್ ಮ್ಯಾಪ್’ ನಮಗೆ ಕೊಟ್ಟರೆ ರಾಜ್ಯದಲ್ಲೇ ಮಾದರಿ ದೃಶ್ಯಕಲಾ ಮಹಾ ವಿದ್ಯಾಲಯ ಮಾಡಲು ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.
ಇಲ್ಲಿನ ದೃಶ್ಯಕಲಾ ಮಹಾ ವಿದ್ಯಾಲಯದ 60ನೇ ವಾರ್ಷಿಕೋತ್ಸವದ ಪ್ರಯುಕ್ತ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ `ವಜ್ರ ಮಹೋತ್ಸವ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಅಭಿವೃದ್ಧಿಯಲ್ಲಿ ಹಳೇ ವಿದ್ಯಾರ್ಥಿಗಳ ಜವಾಬ್ದಾರಿ ಅಧಿಕ. ಕಾಲೇಜಿನ ಪ್ರತಿಯೊಂದು ಮಹೋತ್ಸವದ ನೆನಪಿಗಾಗಿ ಕಲಾ ಭವನ ನಿರ್ಮಿಸುವುದು ಚಿ.ಸು. ಕೃಷ್ಣ ಶೆಟ್ಟಿ ಅವರ ಕನಸಾಗಿದೆ. ಹಾಗಾಗಿ ಹಳೇ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಾರ್ಷಿಕ ಸಭೆ ನಡೆಸಿ ಅಭಿವೃದ್ಧಿಯ ಬಗ್ಗೆ ಯೋಜನೆ ರೂಪಿಸುವಂತೆ ತಿಳಿಸಿದರು.
ಕಲಾವಿದರು ಸಮಾಜದ ಕನ್ನಡಿ ಆಗಿದ್ದಾರೆ. ಇಂದಿನ ಮಕ್ಕಳು ಮೊಬೈಲ್ ಗೀಳಿಗೆ ಅಂಟಿ ಕೊಂಡಿದ್ದರಿಂದ ಅವರ ದೈನಂದಿನ ಚಟುವಟಿಕೆಯಲ್ಲಿ ವ್ಯತ್ಯಾಸವಾಗಿದ್ದು, ಇದನ್ನು ಸರಿ ಪಡಿಸಲು ಕಲಾ ಅಭಿರುಚಿ ಬೆಳೆಸಬೇಕು ಎಂದರು.
ಮಕ್ಕಳ ಭಾವನಾತ್ಮಕ ಸ್ವಾಸ್ಥ್ಯ ಸದೃಢವಾಗಿರಿಸಲು ಕಲೆ ಸಹಾಯಕವಾಗಿದೆ. ಈ ನಿಟ್ಟಿನಲ್ಲಿ ಕಲಾ ವಿದ್ಯಾರ್ಥಿಗಳು ಸಮಾಜದ ಆಸ್ತಿ ಆಗಲಿದ್ದಾರೆ ಎಂದರು.
ಸದೃಢ ಸಮಾಜ ಕಟ್ಟಲು ಕಲಾವಿದರ ಅವಶ್ಯವಿದೆ ಹಾಗಾಗಿ ಯುವಕರು ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿ ಸಾಮಾಜಿಕ ಜವಾಬ್ದಾರಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ದಾವಣಗೆರೆ ವಿವಿಯ ಕುಲಪತಿ ಬಿ.ಡಿ. ಕುಂಬಾರ್ ಮಾತನಾಡಿ, ಹಳೇ ವಿದ್ಯಾರ್ಥಿಗಳು ಕಾಲೇಜಿನ ಬ್ರ್ಯಾಂಡ್ ಅಂಬಾ ಸಿಡರ್ ಆಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಕಾಲೇಜು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯ ಎಂದರು.
ಅಲ್ಯುಮ್ನಿ ಅಸೋಸಿಯೇಷನ್ನಿಂದ ಕಾಲೇಜಿನ ಅಭಿವೃದ್ಧಿ ಸಾಧ್ಯ. ಆದ್ದರಿಂದ ಕಲಾ ಕಾಲೇಜಿನ ಪ್ರಾಧ್ಯಾಪಕರನ್ನು ಖಾಯಂ ಗೊಳಿ ಸಲು ಹಳೇ ವಿದ್ಯಾರ್ಥಿಗಳು ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಬೇಕು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಿಂದ ಕಲಾ ಶಾಲೆಯ 4 ಎಕರೆ ಜಾಗ ಕಾಲೇಜಿಗೆ ಮರಳಲಿದೆ ಎಂದರು.
ವಜ್ರ ಮಹೋತ್ಸವ ಸಮಿತಿಯ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಕಲಾ ಕಾಲೇಜಿಗೆ ಬಹಳ ಅನ್ಯಾಯವಾಗಿದೆ. ಈ ಹಿಂದೆ ಇದ್ದ ಪ್ರಾಚಾರ್ಯರಿಂದ ಕಾಲೇಜು ತನ್ನ ಜಾಗ ಕಳೆದು ಕೊಂಡಿತು ಎಂದು ದೂರಿದರು. ಕಾಲೇಜು ಅಭಿವೃದ್ಧಿ ಪಡಿಸಲು ದಾವಣಗೆರೆ ಜನ ಈ ಹಿಂದೆ ಮಾಡಿದ್ದ ಪ್ರಮಾಣವನ್ನು ಈ ದಿನ ನೆನಪಿಸಿಕೊಂಡು ಕಾರ್ಯ ಪ್ರವೃತ್ತರಾಗಬೇಕು. ಇದಕ್ಕೆ ಸಂಸದರು ನೆರವು ಬೇಕು ಎಂದರು. ವಿದ್ಯಾಲಯದ ಆಸ್ತಿಯಲ್ಲಿ ಕಾಲೇಜಿಗೆ ಸಂಬಂಧಿಸಿದ ಕಟ್ಟಡವಷ್ಟೇ ನಿರ್ಮಾಣವಾಗಬೇಕು. ಮುಂದಿನ ದಿನಗಳಲ್ಲಿ ನಮ್ಮ ಒಂದಿಂಚು ಜಾಗವೂ ಹೋಗದಂತೆ ಸಂಕಲ್ಪ ಮಾಡಬೇಕು ಎಂದರು.
ಈ ವೇಳೆ ಕಾಲೇಜಿನ ಪ್ರಾಚಾರ್ಯ ಡಾ. ಜೈರಾಜ್ ಎಂ. ಚಿಕ್ಕಪಾಟೀಲ್, ಗಣಪತಿ ಎಸ್. ಹೆಗಡೆ, ಸುರೇಶ್ ವಾಗ್ಮೋರೆ, ಗೋಪಾಲ್ ಕೃಷ್ಣ, ಶ್ವೇತಾ ನಿರೂಪಿಸಿದರು. ಇಂದ್ರ ಕುಮಾರ್ ಪ್ರಾರ್ಥನೆ ಮಾಡಿದರು.