ಸದಸ್ಯರಿಗೆ ಶೇ.10 ಲಾಭಾಂಶ: 12ನೇ ಮಹಾಸಭೆಯಲ್ಲಿ ಅಧ್ಯಕ್ಷ ಬಿ.ಸಿ ಉಮಾಪತಿ ಘೋಷಣೆ
ದಾವಣಗೆರೆ,ಸೆ.17- ಅಭಿವೃಧ್ದಿ ಪಥದಲ್ಲಿ ಸಾಗಿರುವ ಹರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ 79.40 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 10ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಬಿ.ಸಿ.ಉಮಾಪತಿ ತಿಳಿಸಿದರು.
ನಗರದ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕಿನ ಸಹಕಾರ ಸಮುದಾಯ ಭವನದಲ್ಲಿ ಜರುಗಿದ ಸಹಕಾರಿಯ 12ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಠೇವಣಿ ಸಂಗ್ರಹ ಹಾಗೂ ಸಾಲ ವಸೂಲಾತಿಯಲ್ಲಿ ಗಮನಾರ್ಹ ಪ್ರಗತಿ ಕಂಡಿದ್ದು, ಇದಕ್ಕೆ ಸದಸ್ಯರ ಸಹಕಾರ ಪ್ರಮುಖ ಕಾರಣ ಎಂದು ತಿಳಿಸಿದರು.
ಷೇರು ಸಂಗ್ರಹಣೆಯಲ್ಲಿಯೂ ಸಹ ಗಮನಾರ್ಹ ಪ್ರಗತಿ ಕಂಡಿದ್ದು, ಸಹಕಾರಿಯು ಆರ್ಥಿಕ ವರ್ಷಾಂತ್ಯಕ್ಕೆ 1.64 ಕೋಟಿ ಷೇರು ಬಂಡವಾಳವನ್ನು ಹೊಂದಿದೆ. ಕಳೆದ ಸಾಲಿನಲ್ಲಿ 12.05 ಕೋಟಿ ರೂ ಗಳ ಠೇವಣಿ ಸಂಗ್ರಹವಾಗಿದ್ದು, ಆರ್ಥಿಕ ವರ್ಷಾಂತ್ಯಕ್ಕೆ 13.20 ಕೋಟಿ ರೂ ಗಳ ಠೇವಣಿ ಸಂಗ್ರಹವಾಗಿದೆ. ಪ್ರಸ್ತುತ ಸಹಕಾರಿಯು 13.53 ಕೋಟಿ ರೂಗಳ ಸಾಲವನ್ನು ಸದಸ್ಯರಿಗೆ ವಿತರಿಸಿದೆ ಎಂದು ತಿಳಿಸಿದರು.
ಸಹಕಾರಿಯ ಉಪಾಧ್ಯಕ್ಷ ಎಂ. ದೊಡ್ಡಪ್ಪ ಲಾಭ ವಿಲೇವಾರಿ ಬಗ್ಗೆ ಸಭೆಯ ಮುಂದೆ ವಿವರ ಮಂಡಿಸಿದರು. ನಿರ್ದೇಶಕ ಹೆಚ್.ಎಂ. ನಾಗರಾಜ್ ಆಹ್ವಾನ ಪತ್ರಿಕೆ ಮಂಡಿಸಿದರೆ, ಅಂದನೂರು ಮುರುಗೇಶಪ್ಪ ಸಾಮಾನ್ಯ ಸಭೆಯ ನಡಾವಳಿ ಓದಿದರು. ಕೈದಾಳ ಶಿವಶಂಕರ್ ಆಡಳಿತ ವರದಿಯನ್ನು, ಕಾರ್ಯದರ್ಶಿ ಕೆ.ಚನ್ನಮಲ್ಲಿಕಾರ್ಜುನ ಲಾಭ-ನಷ್ಟ ಮತ್ತು ಅಢಾವೆ ಪತ್ರಗಳನ್ನು ಹಾಗೂ ಸಹ ಕಾರ್ಯದರ್ಶಿ ಎಂ.ಮಲ್ಲಿಕಾರ್ಜುನ್ ಆಡಳಿತ ಮಂಡಳಿಯ ಪಾಲನಾ ವರದಿಗಳನ್ನು ಮಂಡಿಸಿದರು.
ವಿಶೇಷ ಆಹ್ವಾನಿತರಾದ ಕೆ.ಶಿವಕುಮಾರ್, ಮುಂಗಡ ಪತ್ರ ಮಂಡಿಸಿ ದರು.. ಬಾದಾಮಿ ಜಯಣ್ಣ, ಪ್ರಸಕ್ತ ವರ್ಷ ಸಹಕಾರಿಯೂ 16 ಕೋಟಿ ರೂ. ಠೇವಣಿ ಸಂಗ್ರಹಣೆ ಗುರಿ ಹೊಂದಿದ್ದು, 85 ಲಕ್ಷ ರೂ. ಲಾಭ ಗಳಿಕೆ ಗುರಿ ಹೊಂದಿದೆ ಎಂದರು.
ಸಹಕಾರಿಯ ಪ್ರವರ್ತಕ ಮಹಾಂತೇಶ ಒಣರೊಟ್ಟಿ, ಲೆಕ್ಕ ಪರಿಶೋಧಕ ಕೆ. ಎಸ್ ಮುರುಗೇಂದ್ರಪ್ಪ, ಆಸ್ತಿ ಮೌಲ್ಯಮಾಪಕ ಇಂಜಿನಿ ಯರ್ ಕೆ. ಆರ್ ರವಿಂದ್ರನಾಥ್, ಕಾನೂನು ಸಲಹೆಗಾರ ಬಿ. ಬಸವರಾಜ ಉಚ್ಚಂಗಿದುರ್ಗ, ಆಭರಣ ಮೌಲ್ಯಮಾಪಕ ಕೆ. ಕೊಟ್ರೇಶ್, ಹಿರಿಯ ಸಹಕಾರಿ ಡಿ.ವಿ ಪ್ರಕಾಶ್, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್ ಅವರುಗಳನ್ನು ಗೌರವಿಸಲಾಯಿತು.
ನಿರ್ದೇಶಕರಾದ ಹೆಚ್.ವಿ ಪುಷ್ಪಾವತಿ, ಅನಿತಾ ಸಿ. ಪಿ, ಹಾಲೇಶ ಅಂಗಡಿ, ಚೈತನ್ಯಕುಮಾರ್ ಸಿ. ಬಿ ಅವರುಗಳು ಮಹಾಸಭೆಯ ವಿವಿಧ ಸ್ಥರಗಳಲ್ಲಿ ಕಾರ್ಯನಿರ್ವಹಿಸಿದರು.
ನಿರ್ದೇಶಕರುಗಳಾದ ಹೆಚ್.ಎಸ್. ಅವ್ವಣ್ಣಪ್ಪ, ಎಸ್.ಮಲ್ಲನಗೌಡ್ರು, ಎಸ್.ಎಂ. ಸ್ವಾಮಿ (ವಾಣಿ ಶಿವಣ್ಣ) ಉಪಸ್ಥಿತರಿದ್ದರು. ಯೋಗೇಶ ಹೆಚ್. ಎಸ್ ಸ್ವಾಗತಿಸಿದರು. ಹಾಲೇಶ್ ಅಂಗಡಿ ನಿರೂಪಿಸಿದರು. ಕೆ.ಮಲ್ಲಿಕಾರ್ಜುನ್ ವಂದಿಸಿದರು.