ಶ್ರೀ ಪಂಚಾಕ್ಷರಿ ಗವಾಯಿ, ಪಂ.ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೆಯಲ್ಲಿ ಓಂಕಾರ ಶ್ರೀ
ವೀರೇಶ್ವರ ಪುಣ್ಯಾಶ್ರಮದಲ್ಲಿ ವರ್ಷ ಪೂರ್ತಿ ದಾಸೋಹಕ್ಕೆ ದಾನಿಗಳು ಸಹಾಯ ಮಾಡುತ್ತಿದ್ದಾರೆ.
– ಡಾ. ಅಥಣಿ ವೀರಣ್ಣ, ಆಶ್ರಮದ ಅಧ್ಯಕ್ಷ
ದಾವಣಗೆರೆ, ಸೆ.17- ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಭಿವೃದ್ಧಿಗೆ ಭಕ್ತರ ಸಹಕಾರ ಕಾರಣ. ಭಕ್ತರು, ದಾನಿಗಳ ನೆೇರವಿನಿಂದ ಆಶ್ರಮ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದು ಆವರಗೊಳ್ಳ ಪುರವರ್ಗಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಹೊರವಲಯ ಬಾಡಾ ಕ್ರಾಸ್ ಬಳಿ ಇರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶ್ರೀ ಪಂಚಾಕ್ಷರಿ ಗವಾಯಿಗಳವರ 80ನೇ ಹಾಗೂ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 14 ನೇ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದಾವಣಗೆರೆ, ಗದಗ, ಶಿವಮೊಗ್ಗದ ವೀರೇಶ್ವರ ಪುಣ್ಯಾಶ್ರಮಗಳು ಸಂಗೀತ ಸಾರಸ್ವತ ಲೋಕದ ಕಣ್ಣುಗಳಾಗಿವೆ. ಪಂಚಾಕ್ಷರಿ ಗವಾಯಿಗಳು ಮತ್ತು ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಕೃಪಾಶೀರ್ವಾದ ದಿಂದ ಸಾವಿರಾರು ಕಲಾವಿದರು ಮಹಾನ್ ಪಂಡಿ ತರಾಗಿ ಹೊರಹೊಮ್ಮಿದ್ದಾರೆಂದು ಹೇಳಿದರು.
ಆಶ್ರಮ ಇನ್ನಷ್ಟು ಅಭಿವೃದ್ಧಿ ಹೊಂದುವ ಮೂಲಕ ನಾಡಿನ ಅಂಧ, ಅನಾಥರು ಸಂಗೀತ, ಸಾಹಿತ್ಯ ಕಲಿತು ಉಭಯ ಗುರುಗಳ ಕೀರ್ತಿ ಬೆಳಗಿಸುವಂತಾಗಲಿ ಎಂದು ಆಶಿಸಿದರು.
ಹಾನಗಲ್ ಕುಮಾರಸ್ವಾಮಿಗಳವರ ಕೃಪಾಶೀ ರ್ವಾದದಿಂದ ಶ್ರೀ ಪಂಚಾಕ್ಷರಿ ಗವಾಯಿಗಳು ಈ ನಾಡಿನಾದ್ಯಂತ ಸಂಗೀತ ಪ್ರಚಾರ ಮಾಡಿದರು. ಪುಟ್ಟರಾಜ ಕವಿ ಗವಾಯಿಗಳು ಕೂಡ ಹೆಚ್ಚು ಹೆಚ್ಚು ಸಂಗೀತ ಕಾರ್ಯಕ್ರಮಗಳ ಪ್ರಚಾರ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾದರು ಎಂದರು.
ಪುಣ್ಯಾಶ್ರಮದ ಆರಂಭದ ದಿನದಿಂದ ನಿರಂತರವಾಗಿ ತಾವು ಇಲ್ಲಿ ನಡೆಯುವ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸುತ್ತಾ ಬರುತ್ತಿದ್ದು, ಹಾನಗಲ್ ಕುಮಾರಸ್ವಾಮಿಗಳು, ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಕವಿ ಗವಾಯಿ ಗಳ ಕೃಪಾಶೀರ್ವಾದದಿಂದ ಆಶ್ರಮ ಹೆಚ್ಚು ಅಭಿ ವೃದ್ಧಿ ಹೊಂದುತ್ತಾ ಬರುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಶ್ರಮದ ಅಧ್ಯಕ್ಷರೂ, ಲೆಕ್ಕಪರಿಶೋಧಕರೂ ಆದ ಡಾ. ಅಥಣಿ ಎಸ್. ವೀರಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಶ್ರಮ ಸಾಕಷ್ಟು ಬದಲಾವಣೆಯನ್ನು ಸಹ ಕಂಡಿದೆ. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಪ್ರಸಾದ ನಿಲಯ, ಸೇರಿದಂತೆ ಆಶ್ರಮ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ವರ್ಷದ 365 ದಿನಗಳ ಕಾಲ ದಾಸೋಹಕ್ಕೆ ದಾನಿಗಳು ಸಹಾಯ ಮಾಡುತ್ತಾ ಬಂದಿದ್ದಾರೆ. ದಾವಣಗೆರೆ ಸೇರಿದಂತೆ ನಾಡಿನ ಭಕ್ತರು ಇನ್ನಷ್ಟು ತನು, ಮನ, ಧನದಿಂದ ಸಹಕರಿಸಿ ಆಶ್ರಮದ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.
ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್, ಶಿವಬಸಯ್ಯ ಚರಂತಿಮಠ, ಆಶ್ರಮದ ಕಾರ್ಯದರ್ಶಿ ಜಾಲಿಮರದ ಕರಿಬಸಪ್ಪ, ಅಮರಯ್ಯಸ್ವಾಮಿ, ಸುರೇಶ್ ಕೊಪ್ಪಳ, ಬಸವನಗೌಡ, ಚನ್ನವೀರಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ಇದೇ ವೇಳೆ ಮೃತ್ಯುಂಜಯ ಶೆಟ್ರು, ದೊಡ್ಡಯ್ಯ ಗವಾಯಿಗಳು, ಶಿವಬಸಯ್ಯ ಚರಂತಿ ಮಠ, ಆನಂದ ಕುಮಾರ್ ಪಾಟೀಲ್, ಡಾ. ಅಶೋಕ ಹುಗ್ಗಣ್ಣನವರ, ಮೃತ್ಯುಂಜಯ ಮಠದ, ಲಲಿತ ಗದಗ, ವಿರೂಪಾಕ್ಷಯ್ಯ ಗುಡೂರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀ ವೀರೇಶ್ವರ ಪುಣ್ಯಾಶ್ರಮದಿಂದ ಆಂಜನೇಯ ಮಿಲ್ವರೆಗೆ ಶ್ರೀ ಪಂಚಾಕ್ಷರಿ ಗವಾಯಿಗಳ ಹಾಗೂ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರ ಮೆರವಣಿಗೆಯನ್ನು ಮಾಡಲಾಯಿತು.