ನಗರದಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಕ್ಕೆ ಸಹಕಾರ

ನಗರದಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಕ್ಕೆ ಸಹಕಾರ

ವಾರ್ತಾ ಇಲಾಖೆ ಸಹಯೋಗದ ಜಿಲ್ಲಾ ಕೆಯುಡಬ್ಲ್ಯೂಜೆ ಪತ್ರಿಕಾ ದಿನಾಚರಣೆಯಲ್ಲಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌

ದಾವಣಗೆರೆ,ಸೆ.16- ನೈಜ ಸುದ್ದಿಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸವನ್ನು ಮಾಧ್ಯಮಗಳು ಮಾಡಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್  ಹೇಳಿದರು.

 ನಗರದ ಕುವೆಂಪು ಕನ್ನಡ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮೊನ್ನೆ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ `ಮಾಧ್ಯಮ ಮಾಣಿಕ್ಯ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. 

ಪತ್ರಕರ್ತರ ರಾಜ್ಯ ಮಟ್ಟದ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದನ್ನು ಮೆಲಕು ಹಾಕಿದ ಅವರು, ಈ ಹಿಂದೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನೂ ಸಹ ಅದ್ದೂರಿಯಾಗಿ ನಡೆಸಲಾಗಿತ್ತು ಎಂದು ನೆನಪಿಸಿಕೊಂಡರು.

ಪತ್ರಕರ್ತರಿಗೆ ಅವಶ್ಯವಿರುವ ಪತ್ರಿಕಾ ಭವನ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ನಿವೇಶನಕ್ಕೆ ರಿಯಾಯಿತಿ ನೀಡಲು ಅನುಮತಿ ಕೊಡಿಸಲಾಗುವುದು. ಸುಸಜ್ಜಿತ  ಭವನ ನಿರ್ಮಾಣಕ್ಕೆ  ಸಹಕರಿಸಲಾಗುವುದು. ಪತ್ರಕರ್ತರ ಮಕ್ಕಳಿಗೆ ಎಸ್ಸೆಸ್‌ ಜನಕಲ್ಯಾಣ ಟ್ರಸ್ಟ್ ಮೂಲಕವೂ ನೆರವು ನೀಡಲಾಗುತ್ತಿದೆ ಮತ್ತು ತಮ್ಮ ಸಂಪೂರ್ಣ ಸಹಕಾರ ಎಂದಿನಂತೆ ಇರುತ್ತದೆ ಎಂದು ಸಚಿವರು ತಿಳಿಸಿದರು. 

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಮಾತನಾಡಿ, ಮಾಧ್ಯಮಗಳು ಸರ್ಕಾರ ಮತ್ತು ಸಮಾಜಕ್ಕೆ ಸೇತುವೆಯಾಗಿ ಕೆಲಸ ಮಾಡಬೇಕು, ಈ ನಿಟ್ಟಿನಲ್ಲಿ ಅಭಿವೃದ್ದಿ ಪತ್ರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಅವಶ್ಯವಿದೆ. ಇತ್ತೀಚಿನ ದಿನಗಳಲ್ಲಿ ಊಹಾ ಪತ್ರಿಕೋದ್ಯಮ ಬೆಳೆಯುತ್ತಿದ್ದು, ಜನರ ವಿಶ್ವಾಸಗಳಿಸಲು ಖಚಿತತೆಯ ಸುದ್ದಿಗೆ ಒತ್ತು ನೀಡಬೇಕೆಂದರು. 

ನೂರಾರು ವರ್ಷಗಳ ಹಿಂದೆ ಕನ್ನಡ ಪತ್ರಿಕೋದ್ಯಮ ತುಂಬಾ ಪ್ರಕಾಶಮಾನವಾಗಿತ್ತು. ಇದೀಗ ಕಂಪ್ಯೂಟರ್ ಯುಗದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಪಡೆದುಕೊಂಡಿದೆ. ಪತ್ರಿಕರ್ತರೂ ಸಹ ಆಯಾ ಕಾಲಕ್ಕೆ ಅನುಗುಣವಾಗಿ ತಮ್ಮ ಭೌದ್ಧಿಕ ಮಟ್ಟವನ್ನು ವೃದ್ಧಿಸಿಕೊಳ್ಳಬೇಕಾಗಿದೆ ಎಂದು ಹಿತ ನುಡಿದರು.

ಬಹುದಿನಗಳ ಗ್ರಾಮೀಣ ಪತ್ರಕರ್ತರಿಗೆ ಬಸ್‍ಪಾಸ್ ನೀಡಬೇಕೆಂಬ ಬೇಡಿಕೆ ಈಡೇರುವ ಬಗ್ಗೆ ಈಗಾಗಲೇ ಸರ್ಕಾರದ ಹಂತದಲ್ಲಿ ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದು, ಮುಂದಿನ 15 ದಿನಗಳಲ್ಲಿ ಚಾಲನೆ ಸಿಗುವ ವಿಶ್ವಾಸವಿದೆ ಎಂದರು.

ಕೊಪ್ಪಳ  ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ವಾಣಿಜ್ಯೀಕರಣ, ಖಾಸಗೀರಕಣ, ತಂತ್ರಜ್ಞಾನದ ನಾಗಲೋಟದಲ್ಲಿ ಕನ್ನಡ ಪತ್ರಿಕೋದ್ಯಮ ನಲುಗುತ್ತಿದೆ. ಆದರೆ  ಇನ್ನೂ ಮೂರು ದಶಕಗಳ ಕಾಲ ಕನ್ನಡ ಪತ್ರಿಕೋದ್ಯಮ ಜೀವಂತಿಕೆಯಿಂದ ಇರುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

ಪತ್ರಕರ್ತರು ಸಾಮಾಜಿಕ ಹೊಣೆಗಾರಿಕೆ, ಬದ್ಧತೆಯಿಂದ ತಮ್ಮ ಜವಾಬ್ದಾರಿ ನಿಭಾಯಿಸಬೇಕಾಗಿದೆ. ದಾವಣಗೆರೆ ಜಿಲ್ಲೆಯು ಪತ್ರಿಕೋದ್ಯಮದ ಬೇರಾಗಿದ್ದು, ಇಲ್ಲಿನ ಕನ್ನಡ ಚಳವಳಿ, ಸಿನಿಮಾ ವಲಯಗಳು ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದ್ದವು. ಹಿರಿಯ ಪತ್ರಿಕೋದ್ಯಮಿಗಳಾದ ಹೆಚ್.ಎನ್. ಷಡಾಕ್ಷರಪ್ಪ, ಸಿ.ಕೇಶಮೂರ್ತಿ, ಕಾಂ. ಪಂಪಾಪತಿ ಅವರಂತಹ ಹಿರಿಯ ಪತ್ರಕರ್ತರು ಸ್ಥಳೀಯ ಜಿಲ್ಲಾಮಟ್ಟದ ಪತ್ರಿಕೆಗಳನ್ನು ಹೊರ ತರುವ ಮೂಲಕ ಪತ್ರಿಕೋದ್ಯಮನ್ನು ಉತ್ತುಂಗಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು  ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಈಶ್ವರೀಯ ವಿಶ್ವವಿದ್ಯಾಲಯದ ಶಿವಮೊಗ್ಗ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಅನುಸೂಯಾಜಿ  ಮಾತನಾಡಿ, ಸಮಾಜದ ಒರೆಕೋರೆಗಳನ್ನು ತಿದ್ದುವವರು ಪತ್ರಿಕಾ ಮಾಧ್ಯಮದವರು. ಸಮಾಜದಲ್ಲಿನ ಪ್ರತಿಯೊಬ್ಬರನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ನಿರ್ಮಾತೃ ಪತ್ರಕರ್ತರು ಎಂದು ಬಣ್ಣಿಸಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಜಿಲ್ಲಾ ವಾರ್ತಾಧಿಕಾರಿ ಬಿ. ಧನಂಜಯ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ರಾಜ್ಯಸಮಿತಿ ಸದಸ್ಯ ಕೆ. ಚಂದ್ರಣ್ಣ, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ. ಒಡೆಯರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾಧಕರಾದ ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ವ್ಯಂಗ್ಯ ಚಿತ್ರಕಾರ ಹೆಚ್.ಬಿ.ಮಂಜುನಾಥ್, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್, ಚನ್ನಗಿರಿ ತಾಲ್ಲೂಕು ಕೆಯುಡಬ್ಲ್ಯೂಜೆ ನೂತನ ಅಧ್ಯಕ್ಷ ವಿ. ಲಿಂಗರಾಜ್ ಅವರುಗಳನ್ನು ಗೌರವಿಸಲಾಯಿತು.

ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಮಂಜುನಾಥ್ ಕಾಡಜ್ಜಿ, ಬಸವರಾಜ ದೊಡ್ಮನಿ, ವಿಜಯಕುಮಾರ್ ಜಾಧವ್, ಕೆ.ಜೆ. ದಾನೇಶ್, ಹೆಚ್. ನಿಂಗಪ್ಪ, ಹೆಚ್.ಜಿ. ರುದ್ರೇಶಿ, ಎಸ್.ಎನ್. ಮಹೇಶ್ ಕಾಶೀಪುರ, ಟಿ.ಕೆ. ದಿನೇಶ್ ಬಾಬು, ಹರಿಹರದ ಇನಾಯತ್ ವುಲ್ಲಾ, ಚನ್ನಗಿರಿಯ ಟಿ.ಎನ್. ಜಗದೀಶ್, ಹೊನ್ನಾಳಿಯ ಹೆಚ್.ಸಿ. ಮೃತ್ಯುಂಜಯ ಪಾಟೀಲ್, ಜಗಳೂರಿನ ಅಣಬೂರು ಮಠದ ಕೊಟ್ರೇಶ್, ನ್ಯಾಮತಿಯ ಎಂ.ಎಸ್. ಶಾಸ್ತ್ರಿ ಹೊಳೆಮಠ ಅವರುಗಳಿಗೆ `ಮಾಧ್ಯಮ ಮಾಣಿಕ್ಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚಿ. ಕೆ.ಎಂ. ಗಗನ್ ಪ್ರಾರ್ಥನೆಯ ನಂತರ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್ ಸ್ವಾಗತಿಸಿದರು.  `ಜನತಾವಾಣಿ’ ಹಿರಿಯ ಪತ್ರಕರ್ತ ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಎನ್. ವಿ. ಬದರಿನಾಥ್ ವಂದಿಸಿದರು.

error: Content is protected !!