ತುಂಗಭದ್ರಾ ನದಿ ದಡದಲ್ಲಿ ಸಂಭ್ರಮದ ಸಂಕ್ರಾಂತಿ

ತುಂಗಭದ್ರಾ ನದಿ ದಡದಲ್ಲಿ ಸಂಭ್ರಮದ ಸಂಕ್ರಾಂತಿ

ಹರಿಹರ, ಜ. 15- ನಗರದ ತುಂಗಭದ್ರಾ ನದಿಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಾರ್ವಜನಿಕರು ಸಡಗರ, ಸಂಭ್ರಮದಿಂದ ಆಚರಿಸಿದರು.

ಹರಿಹರ, ದಾವಣಗೆರೆ, ಹರಪನಹಳ್ಳಿ, ರಾಣೇಬೆನ್ನೂರು ತಾಲ್ಲೂಕುಗಳು ಸೇರಿದಂತೆ ಇತರೆ ಭಾಗಗಳಿಂದ ಆಟೋ, ಬೈಕ್, ಟ್ರ್ಯಾಕ್ಟರ್, ಕಾರ್ ಇತರೆ ವಾಹನಗಳಲ್ಲಿ ಕುಟುಂಬದ ಸದಸ್ಯರು ಆಗಮಿಸಿ, ನದಿಯಲ್ಲಿ ಸ್ನಾನ ಮಾಡಿ ನದಿಗೆ ವಿಶೇಷ ಪೂಜೆ ಸಲ್ಲಿಸಿದರು.

ಎಳ್ಳು, ಬೆಲ್ಲವನ್ನು ವಿನಿಮಯ ಮಾಡಿಕೊಂಡು ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಚಿತ್ರಾನ್ನ, ಬುತ್ತಿ ಚಟ್ನಿ, ಹೆಸರುಕಾಳು, ಕಡಲೆಕಾಳು, ಮುಳಗಾಯಿ, ಬೆಂಡಿಕಾಯಿ, ಜವಳಿಕಾಯಿ, ಹಾಗಲಕಾಯಿ, ಅವರೆಕಾಯಿ, ಸೇರಿದಂತೆ ವಿವಿಧ ಪಲ್ಯ, ಕೆನೆ ಮೊಸರು, ಸವತೆಕಾಯಿ, ಮೂಲಂಗಿ, ಉಳ್ಳಾಗಡ್ಡಿ ಸೇರಿ ದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಸೇವಿಸಿ ಎಲೆ, ಅಡಿಕೆ ಹಾಕಿಕೊಂಡು ಸಂಭ್ರಮಿಸಿದರು. ಮಕ್ಕಳು ಆಟಿಕೆಯ ವಸ್ತುಗಳಾದ ಬಾಲ್, ರಿಂಗ್, ಹಗ್ಗ, ಇವುಗಳ ಮೂಲಕ ಆಟವನ್ನು ಆಡುತ್ತಿದ್ದರು. ಬಿಸಿಲಿನ ತಾಪದಿಂದ ಕಬ್ಬಿನರಸ, ಐಸ್ ಕ್ರೀಂ, ಎಳನೀರು, ಜ್ಯೂಸ್ ಸೇವಿಸಿ ಮನಸ್ಸನ್ನು ತಂಪು ಮಾಡಿ ಕೊಂಡರು. ಜೊತೆಗೆ ಸೇಂಗಾ, ಕಡಲೆಕಾಯಿ ಗಿಡ, ಸೂರ್ಯಕಾಂತಿ ಸಂಜೆ ಕಾರಾ-ಮಂಡಕ್ಕಿ ಮೆಣಸಿನಕಾಯಿ ಬಜಿ, ಆಂಬೊಡೆ, ಟಿ, ಕಾಫಿ ಸೇವಿಸಿ ಮನೆಗಳಿಗೆ ತೆರಳಿದರು.

ನಗರದ ನದಿ ದಂಡೆಯ ಮೇಲೆ ಇರುವ ಅಯ್ಯಪ್ಪಸ್ವಾಮಿ, ಶ್ರೀ ಹರಿಹರೇಶ್ವರ ದೇವಾಲಯ, ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಕುಟುಂಬದ ಸದಸ್ಯರು ಕುಳಿತುಕೊಂಡು ಊಟ ಸವಿದರು.

error: Content is protected !!