ಉಕ್ಕಡಗಾತ್ರಿ, ಮಲೇಬೆನ್ನೂರು, ಕೊಮಾರನಹಳ್ಳಿಯಲ್ಲಿ ಸಂಕ್ರಾಂತಿ ಸಂಭ್ರಮ

ಉಕ್ಕಡಗಾತ್ರಿ, ಮಲೇಬೆನ್ನೂರು,  ಕೊಮಾರನಹಳ್ಳಿಯಲ್ಲಿ ಸಂಕ್ರಾಂತಿ ಸಂಭ್ರಮ

ಮಲೇಬೆನ್ನೂರು, ಜ.15- ಮಕರ ಸಂಕ್ರಾಂತಿ ಹಬ್ಬವನ್ನು ಭಾನುವಾರ ಸುಕ್ಷೇತ್ರ ಉಕ್ಕಡಗಾತ್ರಿ, ಮಲೇಬೆನ್ನೂರು, ಕೊಮಾರನಹಳ್ಳಿ ಸೇರಿದಂತೆ ವಿವಿಧೆಡೆ ಸಂಭ್ರಮದಿಂದ ಆಚರಿಸಲಾಯಿತು. 

ಉಕ್ಕಡಗಾತ್ರಿಯ ತುಂಗಭದ್ರಾ ನದಿಯಲ್ಲಿ ಸಾವಿರಾರು ಜನ ಪುಣ್ಯಸ್ನಾನ ಮಾಡಿ, ಗಂಗೆ ಪೂಜೆ ನೆರವೇರಿಸಿ ಅಜ್ಜಯ್ಯನ ದರ್ಶನ ಪಡೆದು ನಂತರ ಮನೆಯಿಂದ ತಂದಿದ್ದ ರೊಟ್ಟಿ, ಬುತ್ತಿ ಊಟ ಸವಿದು ಸಂಭ್ರಮಿಸಿದರು.

ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದುದರಿಂದ ಜನರು ನದಿ ನಡುಗಡ್ಡೆಗಳಿಗೆ ತೆರಳಿ ಸಂಕ್ರಾಂತಿ ಹಬ್ಬ ಆಚರಿಸಿದರು. 

ಮಲೇಬೆನ್ನೂರಿನ ಹೊರವಲಯದಲ್ಲಿರುವ ಭದ್ರಕಾಳಮ್ಮ ಸಹಿತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ ಮಾಡಲಾಯಿತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ಭಕ್ತರಿಗೆ ರೊಟ್ಟಿ, ಬುತ್ತಿ ಉಂಡೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನ ದೇವಸ್ಥಾನಕ್ಕೆ ಆಗಮಿಸಿದ್ದರು. 

ಪಟ್ಟಣದ ಗ್ರಾಮ ದೇವತೆ ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲೂ ವಿಶೇಷ ಪೂಜೆ ಹಾಗೂ ಪ್ರಸಾದವಾಗಿ ಪೊಂಗಲ್ ವಿತರಿಸಲಾಯಿತು.

ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಇಲ್ಲಿ ಕೂಡಾ ಭಕ್ತರಿಗೆ ಪೊಂಗಲ್‌ ವಿತರಿಸಿದರು. ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಆಂಧ್ರ ರೆಡ್ಡಿ ಜನರು ವಾಸಿಸುವ ಜಿಗಳಿ ಕ್ಯಾಂಪ್‌, ಭಾಸ್ಕರರಾವ್‌ ಕ್ಯಾಂಪ್‌, ಹಳ್ಳಿಹಾಳ್‌ ಕ್ಯಾಂಪ್‌, ನಂದೀಶ್ವರ ಕ್ಯಾಂಪ್‌, ಮಲ್ಲನಾಯ್ಕನಹಳ್ಳಿ ಕ್ಯಾಂಪ್‌, ನಿಟ್ಟೂರು ಕ್ಯಾಂಪ್‌ಗಳಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

error: Content is protected !!