ಶೇ. 21ರಷ್ಟು ಡಿವಿಡೆಂಟ್ ಘೋಷಿಸಿದ ಶಾಸಕ ಎಸ್ಸೆಸ್
ದಾವಣಗೆರೆ, ಸೆ. 15- ಬಾಪೂಜಿ ಸಹಕಾರಿ ಬ್ಯಾಂಕ್ ಈ ವರ್ಷ 9.74 ಕೋಟಿ ನಿವ್ವಳ ಲಾಭಗಳಿಸಿದ್ದು, ನಮ್ಮ ಬಂಡವಾಳಕ್ಕೆ ಹೋಲಿಸಿದರೆ ಈ ಲಾಭ ಕಡಿಮೆ ಹಾಗಾಗಿ ಬೇರೆ ದೊಡ್ಡ ಊರುಗಳಲ್ಲಿ ಬ್ಯಾಂಕಿನ ಶಾಖೆ ತೆರೆದು ಹೆಚ್ಚಿನ ಸಾಲ ಸೌಲಭ್ಯ ನೀಡುವ ಮೂಲಕ ಇನ್ನು ಹೆಚ್ಚಿನ ಪ್ರಗತಿ ಸಾಧಿಸಲು ಶ್ರಮಿಸುವುದಾಗಿ ಬ್ಯಾಂಕಿನ ಅಧ್ಯಕ್ಷರೂ ಆದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಇಂದು ಜರುಗಿದ ಬ್ಯಾಂಕಿನ 55ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಷೇರುದಾರರಿಗೆ ಶೇ. 21ರಷ್ಟು ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಸದಸ್ಯರ ಕರತಾಡನೆಗಳ ಮಧ್ಯೆ ಘೋಷಿಸಿದರು.
ಈಗಾಗಲೇ ಅತಿ ಹೆಚ್ಚು ಶ್ರೀಮಂತ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳಿರುವ ಮುದೋಳದಲ್ಲಿ ಬಾಪೂಜಿ ಬ್ಯಾಂಕ್ ನ ಶಾಖೆಯನ್ನು ಆರಂಭಿಸಲು ಸಿದ್ಧತೆ ನಡೆದಿದ್ದು ಬರುವ ಅಕ್ಟೋಬರ್ ಮೊದಲ ವಾರದಲ್ಲಿ ಶಾಖೆ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು. ಅದೇ ರೀತಿ ಹಾವೇರಿ ರಾಣೆಬೆನ್ನೂರು, ಬೆಂಗಳೂರು ಸೇರಿದಂತೆ ಇನ್ನು ಕೆಲವು ಕಡೆ ಹೊಸ ಶಾಖೆಗಳನ್ನು ತೆರೆದು ಸಾಲ ಸೌಲಭ್ಯ ಕಲ್ಪಿ ಸುವ ಮೂಲಕ ಬ್ಯಾಂಕ್ ಇನ್ನು ಹೆಚ್ಚಿನ ಪ್ರಗತಿ ಸಾಧಿಸುವಲ್ಲಿ ಆಡಳಿತ ಮಂಡಳಿ ಮುಂದಾಗಿದೆ ಎಂದು ತಿಳಿಸಿದರು.
900 ಕೋಟಿಗೂ ಹೆಚ್ಚು ಬಂಡವಾಳವಿದೆ. ಕಳೆದ ವರ್ಷಕ್ಕಿಂತ 99 ಲಕ್ಷ ಲಾಭ ಹೆಚ್ಚಳವಾಗಿದೆ ಷೇರುಬಂಡವಾಳ ಠೇವಣಿ ಸಂಗ್ರಹ ಸೇರಿ ಎಲ್ಲ ವಿಧದಲ್ಲೂ ಬ್ಯಾಂಕ್ ಪ್ರತಿವರ್ಷ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ. ಬಹಳ ಹಿಡಿತದಿಂದ ಸಾಲವನ್ನು ನೀಡಲಾಗುತ್ತಿದೆ. ಮರುಪಾವತಿ ಮಾಡುವ ಶಕ್ತಿ ಸಾಲಗಾರನಿಗೆ ಇದೆ ಎಂದಾಗ ಮಾತ್ರ ಸಾಲ ಮಂಜೂರು ಮಾಡಲಾಗುತ್ತಿದೆ ಎಂದರು.
ದಾವಣಗೆರೆಯಲ್ಲಿ ಹತ್ತಾರು ಸಹಕಾರಿ ಬ್ಯಾಂಕುಗಳಿವೆ. ಅವುಗಳಿಗೆಲ್ಲ ಬಾಪೂಜಿ ಬ್ಯಾಂಕನ್ನು ಹಿಂದಕ್ಕೆ ಹಾಕಿ ಮುಂದೆ ಬರಬೇಕು ಎಂಬ ಆಸೆ ಆದರೆ ಅದು ಆಗುತ್ತಿಲ್ಲ ಅದಕ್ಕೆಲ್ಲ ನಮ್ಮ ಸದಸ್ಯರು ಬಾಪೂಜಿ ಬ್ಯಾಂಕಿನ ಆಡಳಿತ ಮಂಡಳಿ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ, ಬೆಂಬಲ ಮತ್ತು ಸಹಕಾರ ನೀಡು ತ್ತಿರುವುದರಿಂದ ಬ್ಯಾಂಕ್ ಉನ್ನತ ಮಟ್ಟದಲ್ಲಿ ಸಾಗಿದೆ ಆದರೆ ಅದನ್ನು ನಾವು ಹೇಳಿ ಕೊಚ್ಚಿಕೊಳ್ಳಲು ಹೋಗುವುದಿಲ್ಲ ಎಂದರು.
ಬ್ಯಾಂಕಿನ ಹಿರಿಯ ನಿರ್ದೇಶಕ ಎ.ಎಸ್. ವೀರಣ್ಣ ಮಾತನಾಡಿ, 1970ರಲ್ಲಿ ಬ್ಯಾಂಕ್ ಆರಂಭವಾದ ದಿನಗಳಲ್ಲಿ ಶೇಕಡ 6ರಷ್ಟು ಲಾಭಾಂಶ ನೀಡುತ್ತಿದ್ದ ಬ್ಯಾಂಕ್ ಈಗ ಅದರ ಮೂರು ಪಟ್ಟು ಲಾಭಾಂಶವನ್ನು ಸದಸ್ಯರಿಗೆ ನೀಡುತ್ತಿದೆ ಇದು ಬ್ಯಾಂಕಿನ ಪ್ರಗತಿಯನ್ನು ತೋರಿಸುತ್ತದೆ. ಬ್ಯಾಂಕಿನ ದುಡಿಯುವ ಬಂಡವಾಳ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು, ಗ್ರಾಹಕರು ಡಿಜಿಟಲ್ ವ್ಯವಹಾರದ ಮೋಸಕ್ಕೆ ಒಳಗಾಗದೆ ಮೊಬೈಲ್‌ಗೆ ಬರುವ ಸಂದೇಶಗಳನ್ನು ಕೂಲಂಕುಶ ಪರಿಶೀಲಿಸಿ, ಮುಂದುವರೆಯುವಂತೆ ತಿಳಿಸಿದರು
ಸದಸ್ಯರು ಕೇಳುವ ಮೊದಲೇ ಶೇಕಡ 21 ರಷ್ಟು ಡಿವಿಡೆಂಡ್ ನೀಡಲಾಗಿದೆ. ಬೇರೆ ಯಾವ ಬ್ಯಾಂಕಿನವರು ಸಹ ನೀಡದಷ್ಟು ಲಾಭಾಂಶವನ್ನು ನೀಡಿದೆ ಎಂದರು. ನಿರ್ದೇಶಕ ಡಾ. ಬಿ.ಎಸ್ ರೆಡ್ಡಿ ಅವರು 2023-24ನೇ ಸಾಲಿನ ಆಯವ್ಯಯ ಮಂಡಿಸಿ ಸದಸ್ಯರ ಒಪ್ಪಿಗೆ ಪಡೆದರು.
ಸಭೆ ಆರಂಭಕ್ಕೆ ಸೌಮ್ಯ ಸಂಗಡಿಗರು ಪ್ರಾರ್ಥಿಸಿದರು ನಿರ್ದೇಶಕಿ ಶಶಿಕಲಾ ಕೃಷ್ಣ ಮೂರ್ತಿ ಸ್ವಾಗತಿಸಿದರು. ನಿರ್ದೇಶಕ ಕೆ.ಎಸ್ ವೀರೇಶ್ ವಂದಿಸಿದರು. ಬ್ಯಾಂಕಿನ ಅಧಿಕಾರಿಗಳಾದ ಎಂ.ಬಿ ಕೊಟ್ರೇಶ್ ಮತ್ತು ಹೆಚ್ .ಸಿ. ಜ್ಯೋತಿಶ್ರೀ ಕಾರ್ಯಕ್ರಮ ನಿರೂಪಿಸಿದರು
ನಿರ್ದೇಶಕರಾದ ಡಾ.ಶಂಷದ್ ಬೇಗಂ, ಡಾ.ಹೆಚ್.ಶಿವಪ್ಪ, ಡಾ. ಬಿ. ಪೂರ್ಣಿಮಾ, ಡಾ.ಕೆ ಹನುಮಂತಪ್ಪ, ಡಾ.ಅರುಣ್ ಕುಮಾರ್, ಡಾ.ಸಿ. ವೈ ಸುದರ್ಶನ್, ಡಾ.ಎಂ .ಎಂ ಲಿಂಗರಾಜ್, ಕೆ ಬೊಮ್ಮಣ್ಣ, ವ್ಯವಸ್ಥಾಪನ ಮಂಡಳಿ ನಿರ್ದೇಶಕರಾದ ಡಾ. ಜೆ. ಎಸ್ ಯತೀಶ್ , ಡಾ. ಜಿ. ವೈ ವಿಶ್ವನಾಥ್. ಜಿ. ಅನಿತಾ ಕುಮಾರಿ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಸವರಾಜ ಎಂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಈ ವರ್ಷ ಸೇವೆಯಿಂದ ವಯೋನಿವೃತ್ತಿ ಹೊಂದಿದ ಶ್ರೀಮತಿ ಶೋಭಾ ಪಾಟೀಲ್, ಎಂ .ಎಸ್ ಪ್ರಸನ್ನ ಕುಡ್ಲೂರು, ಹೆಚ್.ಚಂದ್ರಶೇಖರ್, ಬಿ ಆರ್ ರಮೇಶ್ ಮತ್ತು ಕೆಎಸ್ ಮಂಜುನಾಥ್ ಅವರುಗಳನ್ನು ಸನ್ಮಾನಿಸಲಾಯಿತು.
ಬ್ಯಾಂಕಿನ ಹಿರಿಯ ಸಲಹೆಗಾರರಾದ ಡಿ..ವಿ.ರವೀಂದ್ರ, ಎಸ್ .ಕಲ್ಲಪ್ಪ ಮತ್ತು ಜಿ.ವಿ. ಶಿವಶಂಕರ್, ಶಾಖಾ ವ್ಯವಸ್ಥಾಪಕರಾದ ಬಿ.ಜಿ ಬಸವರಾಜಪ್ಪ, ಲಿಂಗೇಶ್ ಕೆ.ಎಂ, ಕಲಾ ಡಿ.ಎಚ್, ಜಗದೀಶ್ ಎಚ್ .ಜಿ, ಜೆ. ಸಿ ಮಂಜುನಾಥ, ಟಿ.ರೇವಣಪ್ಪ, ಎಸ್ ರಮೇಶ್ ಮತ್ತು ಜಿ.ಎಸ್ ಮಧುಕೇಶ್ವರ ಪಾಟೀಲ್ ಮತ್ತಿತರರು ಹಾಜರಿದ್ದರು.