ಸಭೆ ಆಯೋಜಿಸಿ, ಆರೋಪ ಸಾಬೀತು ಪಡಿಸಲು ಸಿದ್ಧ
– ತರಳಬಾಳು ಶ್ರೀ
ಹೊನ್ನಾಳಿ, ಸೆ. 15- ಹೊನ್ನಾಳಿ ತಾಲ್ಲೂಕಿನಲ್ಲೂ ನನ್ನ ವಿರುದ್ದ ಕೆಲವರಿಂದ ಕುತಂತ್ರ ನಡೆಯುತ್ತಿದೆ. ಇದಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕಿದೆ. ಶಾಸಕ ಶಾಂತನಗೌಡರು ಗೊಲ್ಲರಹಳ್ಳಿ ತರಳಬಾಳು ಸಮಾರಂಭದಲ್ಲಿ ಶ್ರೀಘ್ರವೇ ಸಭೆ ನಡೆಸಿದರೆ ತಾವು ಬಂದು ಉತ್ತರಿಸಲು ಸಿದ್ದರಿದ್ದೇವೆ. ಆರೋಪ ಮಾಡುವವರು ಸಾಬೀತು ಪಡಿಸಬೇಕು, ಇಲ್ಲವಾದಲ್ಲಿ ತೆಪ್ಪಗಿರಬೇಕು, ಆರೋಪ ಸಾಬೀತು ಮಾಡದಿದ್ದರೆ ಒಂಟಿ ಕಾಲಲ್ಲಿ ನಿಂತು ತಮ್ಮ ತಪ್ಪು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಎಂ.ಹನುಮನಹಳ್ಳಿಯಲ್ಲಿ ಸಿರಿಗೆರೆ ಲಿಂಗೈಕ್ಯ ಗುರುಗಳ 32ನೇ ಶ್ರದ್ದಾಂ ಜಲಿ ಸಮಾರಂಭಕ್ಕೆ 101 ಕ್ವಿಂಟಲ ಅಕ್ಕಿ ವಿತರಣಾ ಭಕ್ತಿ ಸಮರ್ಪಣೆಯ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಮಠದಲ್ಲೂ, ರಾಜಕಾರಣದಂತೆ ’ಆಡಳಿತ ಪಕ್ಷಗಳು- ವಿರೋಧ ಪಕ್ಷಗಳು’ ಸರ್ವೇಸಾಮಾನ್ಯ. ವಿರೋಧಪಕ್ಷದವರ ಆರೋಪಕ್ಕೆ ಧೈರ್ಯವಾಗಿ ಉತ್ತರಿಸಬೇಕಾದುದ್ದು ನಮ್ಮ ಧರ್ಮವಾಗಿದೆ ಎಂದ ಶ್ರೀಗಳು, ತಮ್ಮ ಮೇಲಿನ ಆರೋಪಗಳಿಗೆ ವಿವರವಾಗಿ ಉತ್ತರ ನೀಡಿದರು.
ನನ್ನ ಸ್ವಂತ ತಾಯಿಗೂ ಸಹ ಯಾವುದೇ ಸಹಾಯಮಾಡಲಾಗಲಿಲ್ಲ. ಪೂರ್ವಾಶ್ರಮದ ತಾಯಿ ಗಂಗಮ್ಮ ಸೇರಿದಂತೆ ಅನೇಕರಿಗೆ ಸಹಾಯವಾಗಲೆಂದು ತೆಗೆದುಕೊಂಡ ತೀರ್ಮಾನದ ಬಗ್ಗೆ ಶ್ರೀಗಳು ವಿವರಿಸುವಾಗ ಗದ್ಗದಿತರಾದರು.
ಶ್ರೀಮಠವು ಸ್ಮರಿಸುವ ನಿಷ್ಟಾವಂತ ಭಕ್ತರ ಸಾಲಿನಲ್ಲಿ ತಾಲ್ಲೂಕಿನ ಬಸವನಗೌಡರು ಸೇರಲಿದ್ದು, ಗಂಜೇನಳ್ಳಿಯಿಂದ ಅಕ್ಕಿ ಸಂತರ್ಪಣಾ ಸಮಾರಂಭ ಪ್ರಾರಂಭಿಸಿದ್ದು ಇಂದಿಗೂ ಅದನ್ನು ಮುಂದುವರೆಸಿದ ಬಗ್ಗೆ ಸ್ಮರಿಸಿದರು.
ಶಾಸಕ ಶಾಂತನಗೌಡರು ಮಾತನಾಡಿ, ಹನುಮನಹಳ್ಳಿ ಸಣ್ಣ ಗ್ರಾಮವಾದರೂ ಗ್ರಾಮದ ಬಿ.ಜಿ. ಬಸವರಾಜಪ್ಪ ಅವರ ಕುಟುಂಬವರ್ಗ ಸೇರಿದಂತೆ ಅಕ್ಕಪಕ್ಕದ ಮೂರು ಗ್ರಾಮದವರು ವ್ಯವಸ್ಥಿತವಾಗಿ ಆಚರಿಸಿದರ ಬಗ್ಗೆ ತಮ್ಮ ಮೆಚ್ಚಿಗೆ ವ್ಯಕ್ತಪಡಿಸಿದರು.
ಸಾದು ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಹುಣಸಘಟ್ಟ ಗದಿಗೇಶ ಮಾತನಾಡಿ, ಇಂದಿನ ಸಿರಿಗೆರೆ ಶ್ರೀಗಳು ವಿಭಜನೆಗೊಂಡಿದ್ದ ಸಾದು ಸಮಾಜವನ್ನು ಒಗ್ಗೂಡಿಸುವಲ್ಲಿ ಮಾಡಿರುವ ಕಾರ್ಯಗಳು ಹಾಗೂ ಅನೇಕ ಪ್ರವಾಸಗಳ ಬಗ್ಗೆ ವಿವರಿಸಿ ಶ್ರೀಗಳು ಸಮಾಜದ ಶಕ್ತಿ ಕೇಂದ್ರವಾಗಿದ್ದಾರೆಂದು ಬಣ್ಣಿಸಿದರು.
ಹೊನ್ನಾಳಿ ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುಮತಿ ಜಯಪ್ಪ ಉಪನ್ಯಾಸ ನೀಡಿದರು. ಸಾದು ಸಮಾಜದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು.
ಶಿವ ಕೋ ಆಪ್. ಬ್ಯಾಂಕ್ ಅಧ್ಯಕ್ಷ ಶಿವಕುಮಾರ್, ಚೀಲೂರು ವಿಶ್ವನಾಥ, ಕೆಂಗಲಹಳ್ಳಿ ಷಣ್ಮುಖಪ್ಪ, ಗುರುಮೂರ್ತಿ, ಹಾಲು ಒಕ್ಕೂಟದ ನಿರ್ದೇಶಕ ಕಂಚಗಾರನಹಳ್ಳಿ ಬಸಣ್ಣ, ಸುರೇಂದ್ರಗೌಡ, ಕೂಲಂಬಿ ಬಸವರಾಜ, ಕೋಡಿಕೊಪ್ಪ ಶಿವಪ್ಪ, ಹನುಮನಹಳ್ಳಿ ಗ್ರಾಮದ ಮುಖಂಡರಾದ ಶಿವಕುಮಾರ್, ಶಂಕರಣ್ಣ, ಜಗದೀಶ, ಸಿದ್ದಪ್ಪ, ಬಸವನಗೌಡ, ರುದ್ರೇಶ್ ಸೇರಿದಂತೆ ಇನ್ನಿತರರು ಇದ್ದರು.