22 ಕೆರೆಗಳಿಗೆ ಡಿ.ಐ. ಪೈಪ್ ಬಳಸಿ ಕೊಳವೆ ಮಾರ್ಗ

22 ಕೆರೆಗಳಿಗೆ ಡಿ.ಐ. ಪೈಪ್ ಬಳಸಿ ಕೊಳವೆ ಮಾರ್ಗ

ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಲು ಯೋಜನೆ : ರೈತ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಎಸ್ಸೆಸ್ಸೆಂ 

ದಾವಣಗೆರೆ, ಸೆ. 13 – ದೀರ್ಘಕಾಲ ಬಾಳಿಕೆಗೆ ಬರುವ ಡಿ.ಐ. ಪೈಪ್‌ಗಳನ್ನು ಬಳಸಿ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೊಳವೆ ಮಾರ್ಗವನ್ನು ಮರು ಅಳವಡಿಕೆ ಮಾಡಲಾಗುವುದು. ಇದರಿಂದ ಪೈಪ್‌ಗಳು ಒಡೆಯುವ ಸಮಸ್ಯೆ ಬಗೆಹರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.

ಆನಗೋಡಿನ ಉಳುಪಿನ ಕಟ್ಟೆ ಕ್ರಾಸ್ ಬಳಿ ಹುತಾತ್ಮ ರೈತರಾದ ಓಬೇನಹಳ್ಳಿ ಕಲ್ಲಿಂಗಪ್ಪ ಹಾಗೂ ಸಿದ್ದನೂರು ನಾಗರಾಜಾಚಾರ್ ಅವರ ಸಮಾಧಿ ಬಳಿ ಆಯೋಜಿಸಲಾಗಿದ್ದ 32ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈಗಿರುವ ಕೊಳವೆ ಮಾರ್ಗ ಕಳಪೆಯಾಗಿದೆ. ಒಮ್ಮೆಲೇ ಎರಡು ಮೋಟರ್‌ಗಳನ್ನು ಆನ್ ಮಾಡಿದರೆ ಎಲ್ಲಾ ಪೈಪ್‌ಗಳು ಒಡೆದು ಹೋಗಲಿವೆ. ಹೀಗಾಗಿ ಹೊಸ ಪೈಪ್‌ಗಳನ್ನು ಅಳವಡಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು.

22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ 18 ಕೋಟಿ ರೂ. ಹಣ ಬಾಕಿ ಇದೆ. ಇದನ್ನು ಬಳಸಿಕೊಂಡು ಡಿ.ಐ. (ಡಕ್ಟೈಲ್ ಐರನ್) ಪೈಪ್ ಅಳವಡಿಸಲಾಗುವುದು. ಮೊದಲ ಹಂತದಲ್ಲಿ ಮೊದಲ ಜಾಕ್‌ವೆಲ್‌ವರೆಗೆ ಪೈಪ್ ಅಳವಡಿಕೆ ಮಾಡಲಾಗುವುದು. ನಂತರದಲ್ಲಿ ಹಂತ ಹಂತವಾಗಿ ಉಳಿದ ಮಾರ್ಗದಲ್ಲೂ ಡಿ.ಐ. ಪೈಪ್‌ಗಳ ಅಳವಡಿಕೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಈ ಪೈಪ್‌ಗಳು ತುಕ್ಕು ಹಿಡಿಯುವುದಿಲ್ಲ, ಗಟ್ಟಿಯಾಗಿರುತ್ತವೆ. ನೀರಿನ ಹರಿವಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದು ದೀರ್ಘಾವಧಿಗೆ ಪರಿಹಾರವಾಗಲಿದೆ ಎಂದು ಸಚಿವರು ಹೇಳಿದರು.

ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಇದ್ದ ಜಮೀನು ವಿವಾದ ಬಗೆಹರಿಸಲಾಗಿದೆ. ಶೀಘ್ರದಲ್ಲೇ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಜಿಲ್ಲೆಗೆ ಕರೆಸಿ, ಇಲ್ಲಿನ ಎಲ್ಲಾ ಏತನೀರಾವರಿ ಯೋಜನೆಗಳ ಕುರಿತು ಚರ್ಚಿಸಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗುವುದು. ಒಂದು ಬಾರಿ ಕೆರೆಗಳು ತುಂಬಿದರೆ 2-3 ವರ್ಷ ರೈತರಿಗೆ ನೆರವಾಗುತ್ತದೆ ಎಂದು  ಹೇಳಿದರು.

ಉಳುಪಿನಕಟ್ಟೆಯಲ್ಲಿ ರೈತ ಹುತಾತ್ಮ ಭವನ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಈ ಯೋಜನೆಗೆ ಸರ್ಕಾರದಿಂದ ಅನುದಾನ ದೊರಕಿಸಿ ಕೊಡುವ ಜೊತೆಗೆ ವೈಯಕ್ತಿಕವಾಗಿಯೂ ನೆರವು ನೀಡುವುದಾಗಿ ಸಚಿವ ಎಸ್ಸೆಸ್ಸೆಂ ಭರವಸೆ ನೀಡಿದರು.

ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಜಾರಿಯ ಕುರಿತು ಸಂಸತ್ತಿನಲ್ಲಿ ಈ ಹಿಂದೆ ಪ್ರಸ್ತಾಪಿಸಿದ್ದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಜೊತೆಗೂಡಿ ಈ ಯೋಜನೆ ಜಾರಿಗಾಗಿ ಕೇಂದ್ರದಲ್ಲಿ ಒತ್ತಡ ಹೇರುವುದಾಗಿ ಹೇಳಿದರು.

ರೈತ ಹುತಾತ್ಮ ಭವನ ನಿರ್ಮಿಸುವ ಸಲುವಾಗಿ ಸಂಸದರ ನಿಧಿಯಿಂದ ನೆರವು ನೀಡುವುದಾಗಿ ಭರವಸೆ ನೀಡಿದ ಅವರು, ಈ ಸಮುದಾಯ ಭವನಕ್ಕೆ ಸಂಬಂಧಿಸಿದ ಸಮಿತಿಯಲ್ಲಿ ರೈತ ಮಹಿಳಾ ಪ್ರತಿನಿಧಿಗಳಿಗೂ ಅವಕಾಶ ನೀಡಬೇಕು ಎಂದು ತಿಳಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಸಾಣೇಹಳ್ಳಿ ಪೀಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹುತಾತ್ಮ ರೈತರ ಭವನ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಕಳೆದ ವರ್ಷವೇ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಭವನ ನಿರ್ಮಾಣವಾಗಿಲ್ಲ. ಮುಂದಿನ ವರ್ಷದ ಒಳಗಾದರೂ ಭವನ ನಿರ್ಮಾಣವಾಗಲಿ ಎಂದು ಆಶಿಸಿದರು.

ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತರಲು ಹಾಗೂ ಚೆಕ್‌ಡ್ಯಾಂಗಳನ್ನು ನಿರ್ಮಿಸಲು ಕ್ರಮ ಸರ್ಕಾರದ ಹಂತದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಜಯದೇವನಾಯ್ಕ ಮಾತನಾಡಿ, ರೈತರು ಒಗ್ಗಟ್ಟಾಗಬೇಕು. ಆಗ ಮಾತ್ರ ಅವರ ಬೇಡಿಕೆಗೆ ಬಲ ಸಿಗುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ ಮಾತನಾಡಿ, ರೈತ ಹುತಾತ್ಮರ ಸಮುದಾಯ ಭವನ ನಿರ್ಮಾಣದ ಕಾರ್ಯ ಸಾಕಷ್ಟು ವರ್ಷಗಳಿಂದ ಬಾಕಿ ಇದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತ್ವರಿತವಾಗಿ ಈ ಕಾರ್ಯ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆ ಮೇಲೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್, ತಹಶೀಲ್ದಾರ್ ಎಂ.ವಿ. ಅಶ್ವಥ್, ಪಂಚಾಯತ್ ರಾಜ್ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಕೆ.ಎನ್. ಶಿವಮೂರ್ತಿ, ಹುತಾತ್ಮರ ಸ್ಮರಣಾರ್ಥ ಸಮಿತಿ ಗೌರವಾಧ್ಯಕ್ಷ ಹೆಚ್. ನಂಜುಂಡಪ್ಪ, ರೈತ ಮುಖಂಡರಾದ ಕಕ್ಕರಗೊಳ್ಳ ಕಲ್ಲಿಂಗಪ್ಪ, ಆವರಗೆರೆ ರುದ್ರಮುನಿ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಚಿನ್ನಸಮುದ್ರ ಶೇಖರನಾಯ್ಕ, ಶಾಮನೂರು ಲಿಂಗರಾಜ್, ಶ್ರೀಮತಿ ಅಕ್ಕಮಹಾದೇವಿ, ಬುಳ್ಳಾಪುರ ಹನುಮಂತಪ್ಪ, ಆನಗೋಡು ರವಿ, ಹೆದ್ನೆ ಮುರುಗೇಶಪ್ಪ, ಅರುಣ್ ಕುಮಾರ್ ಕುರುಡಿ, ಕೊಗ್ಗನೂರು ಹನುಮಂತಪ್ಪ, ಬಿ.ಎಂ. ಷಣ್ಮುಖಯ್ಯ, ಹೊನ್ನಾಯಕನಹಳ್ಳಿ ಮುರುಗೇಂದ್ರಪ್ಪ, ತೋಳಹುಣಸೆ ಗೌಡ್ರ ಮಹೇಶ್ವರಪ್ಪ  ಉಪಸ್ಥಿತರಿದ್ದರು.

error: Content is protected !!