ದಾವಣಗೆರೆ, ಸೆ. 12- ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಮಟೆ ಚಳವಳಿ ನಡೆಸಿ, ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಒಳಮೀಸಲಾತಿ ಕಲ್ಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಇದೇ ವೇಳೆ ದಸಂಸ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಮಾತನಾಡಿ, ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಸ್ವಾಗತಾರ್ಹ. ಈ ತೀರ್ಪನ್ನು ರಾಜ್ಯ ಸರ್ಕಾರ ತಕ್ಷಣ ಅನುಷ್ಠಾನಗೊಳಿಸುವ ಮೂಲಕ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಸರ್ವೋಚ್ಛ ನ್ಯಾಯಾಲಯದ ಈ ತೀರ್ಪು ಪರಿಶಿಷ್ಟ ಜಾತಿಯ, ಶೋಷಿತ ಸಮುದಾಯಗಳಲ್ಲಿ ಭರವಸೆ ಮೂಡಿಸಿದೆ. ಕಳೆದ ಮೂರು ದಶಕಗಳಿಂದಲೂ ದಲಿತ ಸಂಘರ್ಷ ಸಮಿತಿ ಕೈಗೊಂಡಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಮೀಸಲಾತಿ ವ್ಯವಸ್ಥೆಯಲ್ಲಿ ಇದು ಅತ್ಯಂತ ಮಹತ್ವವಾದುದು ಎಂದರು.
ಸಿಜೆಐ ಚಂದ್ರಚೂಡರ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ವಿಚಾರದಲ್ಲಿದ್ದಂತಹ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ಹನುಂತಪ್ಪ ಅಣಜಿ, ಹರಿಹರ ಪಿ.ಜಿ. ಮಹಾಂತೇಶ್, ನಾಗರಾಜ ಬಿ. ಚಿತ್ತಾನಹಳ್ಳಿ, ಹನುಮಂತಪ್ಪ ಬೇತೂರು, ಕೆ. ವಿಜಯಲಕ್ಷ್ಮಿ ಸೇರಿದಂತೆ ಅನೇಕರಿದ್ದರು.