ದಾವಣಗೆರೆ, ಸೆ.12-ನಗರದ ಯುಬಿಡಿಟಿ ಕಾಲೇಜಿನ ಶೇ.50 ರಷ್ಟು ಮ್ಯಾನೇಜ್ಮೆಂಟ್ ಕೋಟಾ ಹಿಂಪಡೆಯಲು ಆಗ್ರಹಿಸಿ ಎಐಡಿಎಸ್ಓ ಹಾಗೂ ಯುಬಿಡಿಟಿ ಉಳಿಸಿ ಹೋರಾಟ ಸಮಿತಿಯ ವಿದ್ಯಾರ್ಥಿಗಳ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಶೈಕ್ಷಣಿಕ ವರ್ಷದಿಂದ ಉನ್ನತ ಶುಲ್ಕದ ಅಡಿಯಲ್ಲಿ ಶೇ. 50 ರಷ್ಟು ಸೀಟುಗಳನ್ನು ಮಾರಲಾಗುತ್ತಿದೆ! ಸರ್ಕಾರಿ ಶುಲ್ಕ 42,866 ರೂ. ಇದ್ದು, 250 ಸೀಟುಗಳಿಗೆ ಈ ಶುಲ್ಕದಡಿ ಪ್ರವೇಶ ನೀಡಲಾಗುತ್ತಿದೆ. ಇನ್ನುಳಿದ 254 ಸೀಟುಗಳಿಗೆ 97,495 ರೂ ಶುಲ್ಕ ನಿಗದಿಪಡಿಸಲಾಗಿದೆ.
ಈ ಭಾಗದ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಯುಬಿಡಿಟಿಯಿಂದ ಶಿಕ್ಷಣ ಪಡೆದು ದೇಶ ಹಾಗೂ ವಿದೇಶಾದ್ಯಂತ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಪ್ರತಿಷ್ಠಿತ ಸಂಸ್ಥೆಗೆ ಹೆಚ್ಚಿನ ಶುಲ್ಕಕ್ಕೆ ಸೀಟುಗಳನ್ನು ಹರಾಜಿಗೆ ಹಾಕಿದರೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಶುಲ್ಕ ಭರಿಸಲು ಸಾಧ್ಯವಾಗದೇ ಉನ್ನತ ಶಿಕ್ಷಣದಿಂದ ದೂರವಾಗುತ್ತಾರೆ ಎಂದು ತಿಳಿಸಿದರು.
ಈ ಭಾಗದ ರೈತರು ಹಾಗೂ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈಗಿರುವ 42,866 ರೂ. ಶುಲ್ಕವೇ ಬಡ ವಿದ್ಯಾರ್ಥಿಗಳಿಗೆ ದೊಡ್ಡ ಹೊರೆಯಾಗಿರುವಾಗ ಹೆಚ್ಚಿನ ಶುಲ್ಕವು ಅವರಿಂದ ಶಿಕ್ಷಣದ ಹಕ್ಕನ್ನು ಕಸಿದುಕೊಂಡಂತೆ ಎಂದು ವಿದ್ಯಾರ್ಥಿಗಳು ತಮ್ಮ ಆತಂಕವನ್ನು ವ್ಯಕ್ತಪಡಿಸಿದರು.
ಮನವಿಗೆ ಸ್ಪಂದಿಸಿದ ಸಂಸದರು ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಮುಕ್ತ ಅವಕಾಶ ಕಲ್ಪಿಸ ಬೇಕೆ ಹೊರತು, ಬಾಗಿಲು ಮುಚ್ಚು ವಂತಿರಬಾರದು. ಈ ವಿಷಯವನ್ನು ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರ ಬಳಿ ಚರ್ಚಿಸುವು ದಾಗಿ ಭರವಸೆ ನೀಡಿದರು.
ಸಚಿವ ಎಸ್. ಎಸ್. ಮಲ್ಲಿಕಾ ರ್ಜುನ್ ಮನವಿ ಸ್ವೀಕರಿಸಿ, ಈ ವಿಷಯವನ್ನು ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.
ಉನ್ನತ ಶುಲ್ಕದ ಶೇ.50 ರಷ್ಟು ಕೋಟಾವನ್ನು ಅನ್ನು ಕೈಬಿಡಬೇಕು, ವಿದ್ಯಾರ್ಥಿಗಳಿಂದ ಪಡೆದ ಹೆಚ್ಚಿನ ಶುಲ್ಕವನ್ನು ಹಿಂದಿರುಗಿಸಬೇಕು, ಕಾಲೇಜು ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಬೇಕು, ಯುಬಿಡಿಟಿ ಕಾಲೇಜಿನ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕು ಎಂಬಿತರೇ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಅಧ್ಯಕ್ಷರಾದ ಪೂಜಾ ನಂದಿಹಳ್ಳಿ, ಯುಬಿಡಿಟಿ ಉಳಿಸಿ ಸಮಿತಿಯ ಸದಸ್ಯರಾದ ಶ್ರೀನಿವಾಸ್, ಪ್ರಜ್ವಲ್, ರಕ್ಷಿತಾ, ದರ್ಶನ್, ಚಂದನ, ದೀಪಿಕಾ, ಯಶವಂತ್, ಅಭಿಷೇಕ್ ಸಿಂಗ್, ವಿಜಯ್ ಶ್ರವಣ್, ನಾಗೇಂದ್ರ ಮತ್ತಿತರರು ನಿಯೋಗದಲ್ಲಿ ಭಾಗವಹಿಸಿದ್ದರು.