‘ಗಣಪ್ಪ v/s ಹೊಟ್ಟೆ ನಂಜಪ್ಪ’

‘ಗಣಪ್ಪ v/s ಹೊಟ್ಟೆ ನಂಜಪ್ಪ’

ಚತುರ್ಥಿಯಂದು ಸ್ಥಾಪಿಸಿದ ಗಣೇಶನನ್ನು ನೋಡಲು ಜನ ಹೋಗುವುದು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿವೆ. 

ನಮ್ಮ ಬಾಲ್ಯದಲ್ಲಿ ಹಳೆ ದಾವಣಗೆರೆ ಭಾಗದಲ್ಲಿನ ಗಣೇಶೋತ್ಸವದ ಸ್ವಾರಸ್ಯ…

ನಮ್ಮ ಬಾಲ್ಯದಲ್ಲಿ ಹಳೆ ನಗರದ ಒಕ್ಕಲಿಗರ ಪೇಟೆಯಲ್ಲಿ ಕೆಲವು ಮನೆಗಳಲ್ಲಿ ಶ್ರೀ ಗಣೇಶನನ್ನು ಕೂರಿಸಿದವರು ಜೊತೆಯಲ್ಲಿ ಅನೇಕ ಆಕರ್ಷಕ ಗೊಂಬೆಗಳನ್ನೂ ಮಾಡಿ ಕೂರಿಸುತ್ತಿದ್ದರು. ಅವು ತತ್ಕಾಲದ ಪ್ರಸಿದ್ಧ ಚಿತ್ರನಟರುಗಳ, ರಾಜಕಾರಣಿ ಗಳ, ದೊಡ್ಡ ವ್ಯಕ್ತಿಗಳ ಗೊಂಬೆಗಳು ಆಗಿರುತ್ತಿದ್ದವು. ಆಕರ್ಷಕವಾದ ಈ ಗೊಂಬೆಗಳನ್ನು ನೋಡಲು ಜನ ಸರದಿ ಸಾಲಲ್ಲಿ ನಿಲ್ಲುತ್ತಿದ್ದರು. 

ಒಂದು ವರ್ಷ ಹೊಟ್ಟೆ ನಂಜಪ್ಪನವರ ಗೊಂಬೆಯನ್ನೂ ಮಾಡಿ ಇಟ್ಟಿದ್ದರು. ದಾವಣಗೆರೆ ಮಂದಿಗೆ ಹೊಟ್ಟೆ ನಂಜಪ್ಪ (ಅಜ್ಜಂಪುರ ನಂಜುಂಡೇಶ್ವರ ಶ್ರೇಷ್ಠಿ) ನವರ ಅಂಗಡಿಯ ಖಾರಾ-ಮಂಡಕ್ಕಿ ಎಂದರೆ ಎಲ್ಲಿಲ್ಲದ ಇಷ್ಟ. ಹಳೆ ಊರಿನ ಆಗಿನ ತಂಬಾಕು ಪೇಟೆ ಅಂದರೆ ಈಗಿನ ವಿಜಯಲಕ್ಷ್ಮಿ ರಸ್ತೆಯಲ್ಲಿ ಹೊಟ್ಟೆ ನಂಜಪ್ಪನವರ ಅಂಗಡಿಯಲ್ಲಿ ಮಂಡಕ್ಕಿಯೊಂದಿಗೆ ಸೇವು,  ಗುಳಿಗೆ, ಘಾಟಿ, ಕರಿದ ಅವಲಕ್ಕಿ, ಕರಿದ ಹುರಿಗಡಲೆ, ಕರಿದ ಶೇಂಗಾ ಬೀಜ, ಆಲೂಗಡ್ಡೆ ಚಿಪ್ಸ್, ಮೆಣಸಿನಕಾಯಿ ಬೋಂಡಾ, ಅಂಬೋಡೆ, ಸಿಹಿ ಬೂಂದಿ ಕಾಳು, ರವೆಉಂಡೆ, ಮೈಸೂರುಪಾಕ್, ತೆಂಗಿನಕಾಯಿ ಬರ್ಫಿ ಸಹ ನಂಜಪ್ಪನ ಅಂಗಡಿಯಲ್ಲಿ ಆಗ ಮಾಡಿ ಮಾರುತ್ತಿದ್ದರು. ಅಷ್ಟೇ ಅಲ್ಲ, ಖಾರಾ ಮಂಡಕ್ಕಿಯ ಜೊತೆಗೆ ಸಿಹಿ ಬೂಂದಿ ಕಾಳು ಹತ್ತಿಕಾಯಿ ಮತ್ತಿತರೆ ತಿನಿಸುಗಳನ್ನು ಸೇರಿಸಿ ಕಲಸಿ  ಕೊಡುವ `ಫಳ್ಹಾರ’ ಅಂದರೆ `ಫಲಾಹಾರ’ ಎಂಬುದೂ ಇತ್ತು. ವಾರ ಒಪ್ಪತ್ತು ಮಾಡುವವರು ಊಟದ ಬದಲು ಈ `ಫಳ್ಹಾರ’ ಸೇವಿಸಿ ಧನ್ಯರಾಗುತ್ತಿದ್ದರು. 

ನಂಜಪ್ಪನವರ ಮಗ ಪರಮೇಶ್ವರಪ್ಪನವರ ಕಾಲಕ್ಕೆ ಕೆಲವು ತಿನಿಸುಗಳು ಕಡಿಮೆಯಾಗಿ ಪರಮೇಶ್ವರಪ್ಪನವರ ಮಗ ಕಾಶಿನಾಥ (ಸ್ವಾಮಿ) ಕಾಲದಲ್ಲಿ ಕೇವಲ ಖಾರಾ ಮಂಡಕ್ಕಿ, ಹತ್ತಿ ಕಾಯಿ, ಮೈಸೂರುಪಾಕ್ ಮಾತ್ರ ಮಾಡಲಾಗುತ್ತಿತ್ತು. ಇದನ್ನು ಕೊಳ್ಳಲೂ ಜನ ಅಂಗಡಿಯಲ್ಲಿ ಮುಗಿಬೀಳುತ್ತಿದ್ದರು.

ಒಂದು ವರ್ಷ ಒಕ್ಕಲಿಗರಪೇಟೆಯಲ್ಲಿ ಹೊಟ್ಟೆಗಣಪ್ಪನ ಪಕ್ಕದಲ್ಲಿ ಹೊಟ್ಟೆ ನಂಜಪ್ಪನ ಗೊಂಬೆಯನ್ನೂ ಮಾಡಿ ಕೂರಿಸಿದ್ದರು. ಅದನ್ನು ನೋಡಲು ಜನ ಮುಗಿಬಿದ್ದರು. ಅಷ್ಟೊಂದು ಜನಪ್ರಿಯತೆ ಆಗ ಹೊಟ್ಟೆ ನಂಜಪ್ಪನಿಗೆ. ಯಾರೋ ಬಂದು ನಂಜಪ್ಪನಿಗೆ ಹೇಳಿದರು `ನಂಜಪ್ಪಾ ನಿನ್ ಗೊಂಬಿ ಮಾಡಿ ಕುಂದ್ರುಸಾರೆ, ಏನ್ ಜನಾ, ಏನ್ ಜನಾ, ಬಂದ್ ಬಂದ್ ನೋಡಿ ನಗಾಕ್ ಹತ್ಯಾರೆ’ ಎಂದರು.

ಇನ್ನಾರಾದರೂ ಆಗಿದ್ದರೆ ಇದನ್ನು ಆಕ್ಷೇಪಣೆ ಮಾಡುತ್ತಿದ್ದರೇನೋ. ಆದರೆ, ಹೊಟ್ಟೆ ನಂಜಪ್ಪ ಹಾಗಲ್ಲ, `ನನ್ ಗೊಂಬೆ ಕೂರ್ಸಿದಾರಾ?!, ಜನ ಬಂದು ನೋಡಿ ನಗ್ತಿದ್ದಾರಾ? ನಕ್ಕು ಹಂಗೇ ಹೋಗ್ತಾರಾ? ನಾಳೆಯಿಂದ ಬಂದ್ ನೋಡ್ದೋರಿಗೆಲ್ಲಾ ಒಂದೊಂದು `ಸುಳ್ಳಿ’ (ಸುಳ್ಳಿ  ಎಂದರೆ `ಸುರುಳಿ’ ಅರ್ಥಾತ್ ಕಾಗದದ ಪೊಟ್ಟಣ) ಖಾರಾ ಮಂಡಕ್ಕಿ ಕೊಡ್ತೀನಿ’ ಎಂದ ನಂಜಪ್ಪ ಮರುದಿನದಿಂದಲೇ ಒಕ್ಕಲಿಗರ ಪೇಟೆಯಲ್ಲಿ ತನ್ನ ಗೊಂಬೆ ನೋಡಿ ನಕ್ಕು ಸಂತೋಷ ಪಡುವ ಎಲ್ಲರಿಗೂ ಒಂದೊಂದು ಪೊಟ್ಟಣ ಖಾರಾ – ಮಂಡಕ್ಕಿಯನ್ನು ಪುಕ್ಕಟೆಯಾಗಿ ಕೊಡುವ ಏರ್ಪಾಡು ಮಾಡಿಸಿಯೇ ಬಿಟ್ಟರು !!. ಇದು ನಿಜವಾದ ಸಹೃದಯತೆಯ ಹಾಸ್ಯಪ್ರಜ್ಞೆ ಹಾಗೂ ಔದಾರ್ಯ. ಭಲೇ ಹೊಟ್ಟೆ ನಂಜಪ್ಪ.

error: Content is protected !!