ಶಾಲಾ ಕೊಠಡಿಯಾಚೆಗಿನ ಸಮಾಜಕ್ಕೂ ಶಿಕ್ಷಕರ ಕೊಡುಗೆ ಅಗತ್ಯ

ಶಾಲಾ ಕೊಠಡಿಯಾಚೆಗಿನ ಸಮಾಜಕ್ಕೂ ಶಿಕ್ಷಕರ ಕೊಡುಗೆ ಅಗತ್ಯ

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ, ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಸೆ. 5- ಶಿಕ್ಷಕರು ಕೇವಲ ಶಾಲಾ ಕೊಠಡಿಯೊಳಗಿನ ಪಾಠಗಳಿಗೆ ಸೀಮಿತರಲ್ಲ. ಕೊಠಡೆಯಾಚೆಗಿನ ಸಮಾಜಕ್ಕೂ  ತಾವೇನು ಕೊಡುಗೆ ನೀಡಬಹುದು ಎಂಬುದನ್ನು ಶಿಕ್ಷಕರು ಚಿಂತಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಗುರುವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ದಾವಣಗೆರೆ ಉತ್ತರ ವಲಯ, ದಕ್ಷಿಣ ವಲಯದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿತ್ರಿ ಬಾಯಿ ಫುಲೆ, ಡಾ. ಅಬ್ದುಲ್ ಕಲಾಂ, ಡಾ.ವರ್ಗೀಸ್ ಕುರಿಯನ್, ಕಿರಣ್ ಬೇಡಿ ಸೇರಿದಂತೆ ಅನೇಕರು ತಮ್ಮ ಶಿಕ್ಷಕ ವೃತ್ತಿ ಜೊತೆಯಲ್ಲಿಯೇ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಹಾಗೆಯೇ ಇಂದಿನ ಶಿಕ್ಷಕರೂ ಸಹ ತಮ್ಮ ವೃತ್ತಿ ಜೊತೆ ಸಮಾಜಕ್ಕೆ ಕೊಡುಗೆ ನೀಡುವ ಅಗತ್ಯವಿದೆ ಎಂದರು.

ಮಕ್ಕಳು ಈಗ ಗ್ರಂಥಾಲಯಗಳಿಗೆ ಹೋಗುತ್ತಿಲ್ಲ. ಮೊಬೈಲ್ ಫೋನ್‌ಗಳಲ್ಲಿಯೇ ಬೇಕಾದ ಮಾಹಿತಿ ಪಡೆಯುತ್ತಿದ್ದಾರೆ. ಶಿಕ್ಷಕರು ಮಕ್ಕಳಿಗೆ ಪುಸ್ತಕ, ದಿನ ಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಮೊದಲಾದ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಬೇಕಿದೆ ಎಂದರು.

ಇಂದಿನ ಮಕ್ಕಳು ಸಾಕಷ್ಟು ಬುದ್ದಿವಂತರಿದ್ದಾರೆ, ಅವರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಬಡತನ, ಏಕ ಪೋಷಕತ್ವ ಮಕ್ಕಳನ್ನು ಪ್ರೋತ್ಸಾಹಿಸುವುದು, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವುದು ಶಿಕ್ಷಕರಿಂದ ಮಾತ್ರ ಸಾಧ್ಯವಿದೆ. ಆ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದು ಹೇಳಿದರು.

ತಮ್ಮ ಶಾಲಾ ಶಿಕ್ಷಕರನ್ನು ನೆನಪಿಸಿಕೊಂಡ ಸಂಸದರು, ಶಾಲೆ ಹೇಗಿರಬೇಕು? ಶಿಕ್ಷಕರು ಹೇಗಿರಬೇಕು? ಎಂಬುದನ್ನು ನನ್ನ ಬಾಲ್ಯದ ದಿನಗಳಲ್ಲಿ ನೋಡಿದ್ದೇನೆ. ಅಂದು ನಮ್ಮ ಶಿಕ್ಷಕರು ಪಠ್ಯದ ಜೊತೆ ಸಾಮಾನ್ಯ ಶಿಕ್ಷಣಕ್ಕೂ ಒತ್ತು ನೀಡುತ್ತಿದ್ದರು ಎಂದರು.

ಜಿಲ್ಲೆಯಲ್ಲಿ ಸಾಕ್ಷರತೆಯ ಪ್ರಮಾಣ ಶೇ.77ರಷ್ಟಿದೆ. ಉಳಿದ ಶೇ.23ರ ಕೊರತೆಯನ್ನು ನೀಗಿಸಿ ಜಿಲ್ಲೆಯಲ್ಲಿ ಶೇ.100ರಷ್ಟು ಸಾಕ್ಷರತೆ ತರಲು ಶಿಕ್ಷಕರು ಶ್ರಮಿಸಬೇಕು. ಶಿಕ್ಷಕರ ಜೊತೆ ಜಿಲ್ಲಾಡಳಿತ, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ನಾವೆಲ್ಲಾ ಇದ್ದೇವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯಮಟ್ಟದಲ್ಲಿ ಎಷ್ಟನೇ ಸ್ಥಾನಕ್ಕೆ ಬರುತ್ತೀರೆಂಬುದನ್ನು ನೀವೇ ನಿರ್ಧರಿಸಿ, ಗುರಿ ರೂಪಿಸಿಕೊಳ್ಳಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಕೆಲವು ಶಾಲೆಗಳಲ್ಲಿ ಓದು ಬರಹ ಬಾರದ ಮಕ್ಕಳನ್ನೂ ಉತ್ತೀರ್ಣಗೊಳಿಸಿ ಮುಂದಿನ ತರಗತಿಗೆ ಪ್ರವೇಶ ನೀಡಲಾ ಗುತ್ತದೆ. ಇದು ಮಕ್ಕಳಿಗೆ ಮಾಡುವ ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ, ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಬಗ್ಗೆ ಶಿಕ್ಷಕರು ಪ್ರಶ್ನಿಸಿಕೊಳ್ಳಬೇಕು ಎಂದರು.

ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಶಿಕ್ಷಕರು ನಿವೃತ್ತಿ ಹೊಂದಿದ ಮೇಲೆ   ಮನೆಯಲ್ಲಿ ಕಳೆಯುವ ಸಮಯವನ್ನು ಶಿಕ್ಷಕರ ಸಂಖ್ಯೆ ಕಡಿಮೆ ಇರುವ ಶಾಲೆಗಳಿಗೆ ಸ್ವಯಂ ಪ್ರೇರಿತರಾಗಿ ತೆರಳಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದರು.

ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ಕೊಟ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 12 ಹಾಗೂ ಪ್ರೌಢಶಾಲಾ ವಿಭಾಗದಿಂದ 6 ಶಿಕ್ಷಕರು ಸೇರಿದಂತೆ ಒಟ್ಟು 18 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಮೂರು ದಶಕಗಳ ಕಾಲ ಕಾರ್ಯನಿರ್ವಹಿಸಿ ನಿವೃತ್ತರಾದ ಶಿಕ್ಷಕರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

ಮಾಯಕೊಂಡ ಶಾಸಕ  ಬಸವಂತಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾದ ಎಸ್.ಗೀತಾ, ಬಿಇಒಗಳಾದ ಶೇರ್‌ಅಲಿ, ಪುಷ್ಪಲತಾ,  ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್.ಎಸ್.ಒಡೇನಪುರ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!