ಸಾಹಿತ್ಯ ಪರಿಷತ್‌ ಭವನದಲ್ಲಿ ರಂಗನಾಥ್ ಹೆಸರು ಉಳಿಯಲಿ: ತರಳಬಾಳು ಶ್ರೀಗಳು

ಸಾಹಿತ್ಯ ಪರಿಷತ್‌ ಭವನದಲ್ಲಿ ರಂಗನಾಥ್ ಹೆಸರು ಉಳಿಯಲಿ: ತರಳಬಾಳು ಶ್ರೀಗಳು

ದಾವಣಗೆರೆ, ಸೆ. 5 – ಶಿಕ್ಷಣ ತಜ್ಞ, ಸಾಹಿತಿ ಪ್ರೊ. ಎಸ್.ಬಿ. ರಂಗನಾಥ್ ಅವರ ಪರಿಶ್ರಮದಿಂದಾಗಿ ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಭವನ ನಿರ್ಮಾಣವಾಗಿದೆ. ಭವನದಲ್ಲಿ ಅವರ ಹೆಸರು ಉಳಿಯುವಂತೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪ್ರೊ. ಎಸ್.ಬಿ. ರಂಗನಾಥ್ ಸಿದ್ಧನಮಠ ಅವರಿಗೆ ನುಡಿ ನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕನ್ನಡ ಭವನ ನಿರ್ಮಾಣಕ್ಕೆ ಜಾಗ ಪಡೆಯಲು ಹಾಗೂ ಕಟ್ಟಡ ನಿರ್ಮಿಸಲು ರಂಗನಾಥ್ ಶ್ರಮ ಅಪಾರ. ಕನ್ನಡ ಸೇವೆ ಅವರ ಮುಖ್ಯ ಆಶಯವಾಗಿತ್ತು. ಅವರ ಹೆಸರು ಕನ್ನಡ ಭವನದಲ್ಲಿ ಇರಬೇಕು. ಇದಕ್ಕಾಗಿ ಸಂಬಂಧಿಸಿದವರು ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.

ರಂಗನಾಥ್ ಅವರು ಶಿಕ್ಷಕರಿಗೆ ಆದರ್ಶವಾಗಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ನಿರಂತರ ಸೇವೆ ಸಲ್ಲಿಸಿದ್ದಾರೆ. ಯೋಗಾಯೋಗ ಎಂಬಂತೆ ಶಿಕ್ಷಕರ ದಿನಾಚರಣೆ ದಿನದಂದೇ ಅವರ ನುಡಿ ನಮನ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದರು.

ಅವರು ಶಿಕ್ಷಣ, ಸಾಹಿತ್ಯ, ಸಾಮಾಜಿಕ ಕ್ಷೇತ್ರ ಹಾಗೂ ತರಳಬಾಳು ಮಠದ ಅಭಿವೃದ್ಧಿ ಹೀಗೆ ಹಲವು ವಲಯಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರು ಮಠದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇರ್ಪಡೆಯಾಗಿದ್ದರು. ನಂತರ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ, ಆನಂತರ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಂತಹ ಹುದ್ದೆಗಳಿಗೂ ತಲುಪಿದ್ದರು ಎಂದು ಶ್ರೀಗಳು ಹೇಳಿದರು.

ಶಿಕ್ಷಣ ತಜ್ಞ ಹೆಚ್.ವಿ. ವಾಮದೇವಪ್ಪ ಮಾತನಾಡಿ, ರಂಗನಾಥ್ ಅವರು ಸಹೃದಯಿ, ಸಜ್ಜನ ಹಾಗೂ ಮಿತಭಾಷಿಯಾಗಿದ್ದರು. ಬಡ ಮಕ್ಕಳಿಗೆ ನೆರವಾಗುವುದರಲ್ಲಿ ಮುಂದಿರುತ್ತಿದ್ದರು ಎಂದರು.

ಪತ್ರಕರ್ತ, ಕಲಾವಿದ ಹಾಗೂ ಕ್ರೀಡಾ ಪಟುವಾಗಿಯೂ ರಂಗನಾಥ್‌ ಗುರುತಿಸಿಕೊಂ ಡಿದ್ದರು. ನಾನು ಮಠದ ನಿಷ್ಠಾವಂತ ಸೇವಕ ಎಂಬ ಭಾವನೆಯಿಂದ ಕೆಲಸ ಮಾಡುತ್ತಿದ್ದರು ಎಂದು ವಾಮದೇವಪ್ಪ ಹೇಳಿದರು.

ನಿವೃತ್ತ ಪ್ರಾಚಾರ್ಯ ನಾ. ಲೋಕೇಶ್ ಒಡೆಯರ್ ಮಾತನಾಡಿ, ಶಿಸ್ತು ಹಾಗೂ ದೃಢ ನಿರ್ಧಾರದ ಸ್ವಭಾವ ಹೊಂದಿದ್ದ ರಂಗನಾಥ್ ಅವರು, ತಮ್ಮೊಂದಿಗೆ ಕಾರ್ಯನಿರ್ವಹಿಸುವವರನ್ನು ವಿಶ್ವಾಸಕ್ಕೆ ಪಡೆಯುವುದನ್ನು ಅರಿತಿದ್ದರು. ಸಮರ್ಪಣಾ ಭಾವದಿಂದ ಮಠದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದರು.

ಶಿಕ್ಷಣ ತಜ್ಞ ಬಿ.ರಾಜಶೇಖರಪ್ಪ ಮಾತನಾಡಿ, ರಂಗನಾಥ್ ಅವರ ಸಾಧನೆಯನ್ನು ಪರಿಚಯಿಸಲು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದರು.

ಕದಳಿ ವೇದಿಕೆಯಿಂದ ವಚನ ಗಾಯನ ನೆರ ವೇರಿತು. ಎಸ್.ಬಿ. ರಾಜಶೇಖರ್ ಸ್ವಾಗತಿಸಿದರು. ಎಸ್.ಆರ್. ಪಂಕಜ ನಿರೂಪಿಸಿದರು. ನಾಗರಾಜ ಸಿರಿಗೆರೆ ವಂದನಾರ್ಪಣೆ ನೆರವೇರಿಸಿದರು.

error: Content is protected !!