ಇನ್ನು ಕೆಲವೇ ದಿನಗಳಲ್ಲಿ ಗಣೇಶ ಉತ್ಸವ ಆರಂಭವಾಗಲಿದೆ. ಗಣೇಶನ ಹಬ್ಬ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ ಸಡಗರ ಉತ್ಸಾಹ. ಏಕೆಂದರೆ ಆನೆ ಎಲ್ಲರ ಅಚ್ಚುಮೆಚ್ಚಿನ ಪ್ರಾಣಿ, ಗಣೇಶನ ಮುಖ ಆನೆಯ ಮುಖವನ್ನು ಹೊಂದಿರುವುದರಿಂದ ಗಣೇಶನ ಹಬ್ಬ ಎಂದರೆ ಮಕ್ಕಳಲ್ಲಿ ಎಲ್ಲಿಲ್ಲದ ಉತ್ಸಾಹ.
ಗಣೇಶ ಉತ್ಸವಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಮತ್ತು ಸಾರ್ವಜನಿಕವಾಗಿ ಆಚರಿಸಲು ಪ್ರಮುಖ ಕಾರಣ ಒಂದಿದೆ.
ಪೌರಾಣಿಕ ಹಿನ್ನೆಲೆ ಎಲ್ಲರಿಗೂ ತಿಳಿದಿರುವಂಥ ವಿಚಾರವೇ ಆಗಿದೆ. ಸಾರ್ವಜನಿಕವಾಗಿ ಸಾಮೂಹಿಕವಾಗಿ ಆಚರಿಸಲು ; ಸ್ವಾತಂತ್ರ್ಯ ಸಂಗ್ರಾಮದ ಸಮಯ ಒಂದು ಕಾರಣವಾಗಿತ್ತು.
ಏಕೆಂದರೆ ಸ್ವಾತಂತ್ರ್ಯ ಹೋರಾಟಕ್ಕಾಗಿ, ಜನರನ್ನು ಜಾಗೃತಗೊಳಿಸಲು ಎಲ್ಲರೂ ಒಂದು ಕಡೆ ಸೇರಬೇಕಾಗಿತ್ತು. ಬ್ರಿಟಿಷರು ನಮ್ಮ ಮೇಲೆ, ಕೆಲವು ನಿಯಮಗಳನ್ನು ಏರಿದ್ದರು. ನಾಲ್ಕೈದು ಜನ ಕೂಡಿ ಓಡಾಡುವಂತಿರಲಿಲ್ಲ, ಯಾವುದೇ ಸಂಘ ಸಮಿತಿಗಳನ್ನು ಕಟ್ಟುವಂತಿರಲಿಲ್ಲ, ಸಂಘಟನೆಯನ್ನು ಕಟ್ಟಿದರೆ, ಬ್ರಿಟಿಷರ ವಿರುದ್ಧ ಕಾರ್ಯ ಚಟುವಟಿಕೆಗಳನ್ನು ಮಾಡುವಂತಿರಲಿಲ್ಲ ಎನ್ನುವ ನಿಯಮಗಳನ್ನು ಮಾಡಿದ್ದರು. ಹಾಗಾಗಿ ಜನರಿಗೆ ಸ್ವಾತಂತ್ರ್ಯ ಹೋರಾಟದ ಯಾವುದೇ ಮಾಹಿತಿಯನ್ನು ಹೋರಾಟಗಾರ ನಾಯಕರು ತಿಳಿಸಲು ಆಗುತ್ತಿರಲಿಲ್ಲ.
ಧಾರ್ಮಿಕ ಕ್ರಿಯಾ ಚಟುವಟಿಕೆಗಳಿಂದ ಏನಾದರೂ ಮಾಡಿ ಜನರ ಗುಂಪು ಕಟ್ಟಬೇಕೆಂದು ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ; ಸಾರ್ವಜನಿಕ ಗಣೇಶ ಹಬ್ಬವನ್ನು ಮಾಡುವ ಮೂಲಕ ಜನರನ್ನು ಸೇರಿಸಿ, ಸ್ವಾತಂತ್ರ್ಯ ಹೋರಾಟದ ಮಾಹಿತಿಗಳನ್ನು ತಿಳಿಸಿ ಹೋರಾಟದಲ್ಲಿ ಭಾಗಿಯಾಗಲು ಪ್ರೇರೇಪಿಸುತ್ತಿದ್ದರು. ಹಾಗಾಗಿ ಅಂದಿನಿಂದ ಇಂದಿನವರೆಗೆ ಸಾರ್ವಜನಿಕವಾಗಿ ಸಾಮೂಹಿಕವಾಗಿ ಗಣೇಶ ಹಬ್ಬವನ್ನು ಆಚರಿಸುವ ಸಂಪ್ರದಾಯವಿದೆ. ಗಣೇಶೋತ್ಸವ ಭಾರತೀಯರ ಧಾರ್ಮಿಕ ಸಂಸ್ಕೃತಿಯ ಒಂದು ಭಾಗವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ.
ಹಬ್ಬದ ಆಚರಣೆಯಿಂದ ಸಮಾಜದಲ್ಲಿ ಹಿಂದೆ ಇದ್ದ ಕೆಲವು ಅಸಮಾನತೆಯ ನಡೆಗಳು ದೂರವಾಗಿವೆ. ಹಿಂದೆ ಅನ್ನದಾನವನ್ನು ಮಾಡಲು ಭೇದ ಭಾವಗಳು ಇರುತ್ತಿದ್ದವು, ಅನ್ನದಾನಕ್ಕೂ ಶ್ರೇಣೀಕೃತ ವ್ಯವಸ್ಥೆ ಇತ್ತು.
ಆದರೆ ಗಣೇಶೋತ್ಸವದಲ್ಲಿ ದಾಸೋಹ ಕಾರ್ಯಗಳನ್ನು ಸಂಘಟಕರು ಮಾಡಿ, ಎಲ್ಲರೂ ಯಾವುದೇ ಭೇದವಿಲ್ಲದೆ ಭಾಗಿಯಾಗಿ ಪ್ರಸಾದ ಸ್ವೀಕರಿಸುವುದು ಸಮಾನತೆಯ ಸಂಸ್ಕೃತಿಗೆ ಸಾಕ್ಷಿಯಾಗಿದೆ. ಹೀಗೆ ಅನೇಕ ಬದಲಾವಣೆಗಳು ಆಗುತ್ತಿರಬೇಕು, ಇಂತಹ ಕಾರ್ಯಗಳನ್ನು ಎಲ್ಲರೂ ಒಪ್ಪಲೇಬೇಕು.
ಉತ್ಸವ ಅದ್ಧೂರಿಯಾಗಿ ಜನಸ್ತೋಮದಿಂದ ನಡೆಯುತ್ತಿವೆ. ಆದರೆ ಕೆಲ ಯುವಕರ ವಿಚಿತ್ರ ವಿಕೃತ ವರ್ತನೆಯಿಂದ ಭಕ್ತಿ ಭಾವದ ಮಹತ್ವ, ಹಬ್ಬದ ಮಹತ್ವ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಅಂತ ಹೇಳಬಹುದು.
ಉತ್ಸವದಂದು ಮದ್ಯಪಾನ ಮಾಡಿ, ಅದರ ಉನ್ಮಾದದಲ್ಲಿ ಡಿಜೆ ಸೌಂಡಿಗೆ ಕುಣಿಯುವುದರಲ್ಲಿ ಭಕ್ತಿಯ ಭಾವ ಮರೆಯಾಗಿ ವಿಕೃತಿಯು ಆಚರಣೆ ಹೆಚ್ಚಾಗುತ್ತಿದೆ.
ಉತ್ಸವದಂದು ಮದ್ಯಪಾನ ಮಾರಾಟ ನಿಷೇಧವಿದ್ದರೂ, ಕೆಲವರು ಮೊದಲೇ ಮದ್ಯದ ವ್ಯವಸ್ಥೆ ಮಾಡಿಟ್ಟುಕೊಂಡು, ಉತ್ಸವದಂದು ಕುಡಿದು, ಕುಣಿದು, ಕುಪ್ಪಳಿಸುವುದು ನಮ್ಮ ಸಂಸ್ಕೃತಿಯೋ ಅಥವಾ ವಿಕೃತಿಯೋ ಎಂದು ಎಲ್ಲರೂ ಆಲೋಚಿಸಬೇಕಿದೆ. ಇದನ್ನು ಗುರು- ಹಿರಿಯರು ಯುವಕರಿಗೆ ತಿಳಿಸಿ ಹೇಳಿ ಉತ್ತಮ ಮಾರ್ಗದರ್ಶನ ಮಾಡಬೇಕಿದೆ.
ನಮ್ಮ ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ಮಹತ್ವದ ಸ್ಥಾನ ಪಡೆದಿದೆ. ಇದನ್ನು ನಾವು ವಿಕೃತ ಮಾಡುವುದರೊಂದಿಗೆ ನಶಿಸುವಂತೆ ಮಾಡಿದರೆ, ನಾವೇ ಸಂಸ್ಕೃತಿಯ ಅಧಃಪತನ ಮಾಡಿದಂತಾಗುತ್ತದೆ ಅಲ್ಲವೇ.
ನಮ್ಮೊಳಗಿನ ಅರಿವನ್ನು ಜಾಗೃತಗೊಳಿಸಿ ಕೊಳ್ಳದೆ, ವಿಕೃತ ಆಚರಣೆಗಳನ್ನು ಸಂಪ್ರದಾಯ ಗಳನ್ನು ಮಾಡಿದರೆ, ಮುಂದಿನ ನಮ್ಮ ಪೀಳಿಗೆಯೂ ಸಹ ಅದನ್ನೇ ಅನುಕರಿಸಿ ಮೂಲ ಸಂಸ್ಕೃತಿ ಮಾಯವಾಗುತ್ತದೆ. ಹೀಗೆ ಮಾಡುವುದರಿಂದ ಭಾರತ ಇನ್ನೆಲ್ಲಿ ವಿಶ್ವಗುರು ಆಗುತ್ತದೆ.
ಹನ್ನೆರಡನೇಯ ಶತಮಾನದಲ್ಲಿ ಅರಿವನ್ನು ಜಾಗೃತಗೊಳಿಸಿದ ಬಸವಣ್ಣನವರು ವಿಶ್ವಗುರು ಆದರು. ಹಾಗೆ ಭಾರತೀಯರಾದ ನಾವೆಲ್ಲರೂ ಆ ಅರಿವಿನ ಪ್ರಖರತೆಯನ್ನು ಮೂಡಿಸಿಕೊಂಡರೆ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯವಾಗುತ್ತದೆ.
ಹಾಗಾಗಿ ಗಣೇಶೋತ್ಸವದಲ್ಲಿ ಡಿಜೆ ಸೌಂಡು ಕುಣಿತ ಇವೆಲ್ಲಕ್ಕೂ ತಿಲಾಂಜಲಿ ಇಟ್ಟು, ನಮ್ಮ ದೇಶದಲ್ಲಿ ನಾಡಿನಲ್ಲಿ ಅನೇಕ ಕಲೆಗಳಿವೆ ಕಲಾವಿದರಿದ್ದಾರೆ, ಅವರನ್ನು ಕರೆದು ಉತ್ಸವದ ಕಾರ್ಯಕ್ರಮಗಳಲ್ಲಿ ಅವಕಾಶ ಮಾಡಿಕೊಟ್ಟರೆ, ಕಲಾವಿದರು ಬೆಳೆಯುತ್ತಾರೆ, ಸಂಸ್ಕೃತಿಯ ಬೇರು ಆಳವಾಗಿ ಹೋಗಿ, ಭಾರತದ ಸಂಸ್ಕೃತಿಯ ಮಹತ್ವ ಏನೆಂದು ಎಲ್ಲಾ ಕಡೆ ಪಸರಿಸುತ್ತದೆ.
– ಶಿವಪ್ರಸಾದ ಕರ್ಜಗಿ, ದಾವಣಗೆರೆ.