ಯಾವುದೇ ಕೆಲಸ ಕನಿಷ್ಠ ಅಲ್ಲ, ಗರಿಷ್ಠವೂ ಅಲ್ಲ, ಶ್ರದ್ಧೆ ಮುಖ್ಯ

ಯಾವುದೇ ಕೆಲಸ ಕನಿಷ್ಠ ಅಲ್ಲ, ಗರಿಷ್ಠವೂ ಅಲ್ಲ, ಶ್ರದ್ಧೆ ಮುಖ್ಯ

ಪತ್ರಿಕಾ ವಿತರಕರ 4ನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ

ಚಿತ್ರದುರ್ಗ, ಸೆ.  8 – ಜ್ಞಾನವನ್ನು ಕೊಡುವಂತಹ ಕೆಲಸವನ್ನು ಮೀಡಿಯಾಗಳು ಮಾಡುತ್ತವೆ. ಅವುಗಳನ್ನು ತಲುಪಿಸುವ ಕೆಲಸವನ್ನು ವಿತರಕರು ಮಾಡುತ್ತಾರೆ. ಸಮಾಜದಲ್ಲಿ ದೊಡ್ಡವರು ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಹಿಂದೆ ಕೆಲಸ ಮಾಡುವವರು ಕಾಣಿಸಿಕೊಳ್ಳುವುದಿಲ್ಲ. ಸಮಾಜದಲ್ಲಿ ಯಾವುದೇ ಕೆಲಸ ಕನಿಷ್ಠ ಅಲ್ಲ. ಗರಿಷ್ಠ ಅಲ್ಲ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ನಿಜವಾದ ಆರೋಗ್ಯವಂತರೆಂದರೆ ವಿತರಕರು. ಏಕೆಂದರೆ ಅವರು ಬೆಳಿಗ್ಗೆ ಬೇಗ ಏಳುತ್ತಾರೆ. ಸೈಕಲ್ ತುಳಿಯುತ್ತಾರೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ, ವಿತರಕರ ಸಂಘದ ವತಿಯಿಂದ ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ 4ನೇ ರಾಜ್ಯಮಟ್ಟದ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ವಿತರಕರಿಗೆ ಮುಖ್ಯವಾಗಿ ಬೇಕಾಗಿರುವುದು ಒಂದು ವಾಹನ, ಒಂದು ನಿವೇಶನ ಹಾಗೂ ಅವರ ಮಕ್ಕಳಿಗೆ ಶಿಕ್ಷಣ. ಇವುಗಳನ್ನು ಒದಗಿಸಲು ಕ್ರಮ ವಹಿಸಿದರೆ ವಿತರಕರು ನೆಮ್ಮದಿಯಿಂದ ಬದುಕುತ್ತಾರೆ. ಕಾಯಕ ಶ್ರದ್ಧೆ ಯಾರಲ್ಲಿ ಇರುತ್ತೋ ಅವರು ಯಾವತ್ತೂ ಸೋಲಲ್ಲ. ಅದಕ್ಕೆ ಉದಾಹರಣೆ ವಿಜಯ ಸಂಕೇಶ್ವರ್‌ ಅವರು ಎಂದು ಶ್ಲ್ಯಾಘಿಸಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಜನತಂತ್ರ ವ್ಯವಸ್ಥೆಯಲ್ಲಿ ನಿಜವಾದ ಪ್ರಮುಖ ಪಾತ್ರ ವಹಿಸುವವರು ಮುದ್ರಣ ಮಾಧ್ಯಮದವರು. ಹಾಲು ಹಾಕುವವರು, ಪೋಸ್ಟ್ ಮ್ಯಾನ್‍ಗಳ ಸೇವೆಗಿಂತ ತ್ವರಿತವಾಗಿ ಪತ್ರಿಕಾ ವಿತರಕರು ಕೆಲಸ ಮಾಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು.

ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಪತ್ರಿಕಾ ವಿತರಕರಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ರಾಷ್ಟ್ರದಲ್ಲಿ ಎಷ್ಟೋ ವಿದ್ಯಾರ್ಥಿಗಳು ಪತ್ರಿಕಾ ವಿತರಣೆ ಮಾಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಅವರು  ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮಾತನಾಡಿ, ಪತ್ರಿಕಾ ವಿತರಕರು ಅಸಂಘಟಿತ ಸಮುದಾಯವಾಗಿದ್ದಾರೆ. ರಾಜ್ಯದಲ್ಲಿ ಸುಮಾರು 40 ಸಾವಿರ ಪತ್ರಿಕಾ ವಿತರಕರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾ ವಿತರಕರ ನೆರವಿಗೆ ಧಾವಿಸಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಇ-ಶ್ರಮ್ ಅಡಿ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕರ್ತವ್ಯ ನಿರ್ವಹಿಸುವ ವೇಳೆ ಏನಾದರೂ ಅವಘಡ ಗಳು ಸಂಭವಿಸಿದಲ್ಲಿ ಪರಿಹಾರ ಲಭ್ಯವಾಗಲಿದೆ.   ವಿತರಕರ ಕ್ಷೇಮಾಭಿವೃದ್ದಿಗೆ ಕನಿಷ್ಠ ಹತ್ತು ಕೋಟಿ ರೂ. ಮೀಸಲಿಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ,  ಪತ್ರಿಕಾ ವಿತರಕರಿಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ನೀಡಲಾಗುವುದು. ವಿತರಕರ ಮಕ್ಕಳಿಗೆ ಆರೋಗ್ಯ ವ್ಯವಸ್ಥೆ ಮಾಡಬೇಕಿದೆ. ಕಡಿಮೆ ಬಡ್ಡಿ ಸಾಲದ ವ್ಯವಸ್ಥೆ ಮಾಡಬೇಕು ಎನ್ನುವುದು ವಿತರಕರ ಆಗ್ರಹವನ್ನು ಸರ್ಕಾರ ಪರಿಗಣಿಸಲಿದೆ ಎಂದು ಹೇಳಿದರು.

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ವಿ.ಆರ್.ಎಲ್ ಸಂಸ್ಥೆಯ ಮುಖ್ಯಸ್ಥರಾದ ವಿಜಯ ಸಂಕೇಶ್ವರ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಜಾಪ್ರಗತಿ ಸಂಪಾದಕ ನಾಗಣ್ಣ, ಹಿರಿಯ ಪತ್ರಿಕಾ ವಿತರಕ ಜನರಪ್ಪ, ರಾಜ್ಯಾಧ್ಯಕ್ಷ ಶಂಭುಲಿಂಗಪ್ಪ, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ, ವಿತರಕ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ತಾಜ್ ಪೀರ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜಗದೀಶ್, ಐ.ಎಫ್,ಡಬ್ಲ್ಯೂ ಜೆಯ ಅಧ್ಯಕ್ಷ ಮಲ್ಲಿಕಾರ್ಜನ್, ಪ್ರಕಾಶ್ ನಾಯ್ಕ್, ನಾಗವೇಣಿ ಸೇರಿದಂತೆ ಇತರರು ಭಾಗವಹಿಸಿದ್ದರು. 

error: Content is protected !!