ಪೊಲೀಸ್ ಕರ್ತವ್ಯ ಕೂಟ ಉದ್ಘಾಟಿಸಿದ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ
ದಾವಣಗೆರೆ, ಸೆ. 3 – ಕಾನೂನು ಸುವ್ಯ ವಸ್ಥೆ ಹೊಂದುವುದೂ ಸಹ ನಾಗರಿಕರ ಹಕ್ಕು ಗಳಲ್ಲಿ ಒಂದಾಗಿದೆ. ಈ ಹಕ್ಕು ಒದಗಿಸಲು ಅಪರಾಧ ಪತ್ತೆ ಹಾಗೂ ತನಿಖಾ ವ್ಯವಸ್ಥೆ ಬಲಿಷ್ಠವಾಗಿರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭಾಂ ಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವ ವಲಯ ಪೊಲೀಸ್ ಕರ್ತವ್ಯ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಅಪರಾಧಗಳನ್ನು ಪತ್ತೆ ಮಾಡಿ ಪ್ರಕರಣ ನೋಂದಾಯಿಸಿ, ಆರೋಪ ಪಟ್ಟಿ ದಾಖಲಿಸುವುದರ ಜೊತೆಗೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದು ಕೊಂಡು ಹೋಗುವವರೆಗೂ ಪೊಲೀಸರ ಜವಾಬ್ದಾರಿ ಇರುತ್ತದೆ. ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ಯನ್ನು ಜವಾಬ್ದಾರಿಯಿಂದ ಗಮನಿಸಬೇಕು. ವಿಚಾರಣೆ ಪೂರ್ಣಗೊಳ್ಳುವವರೆಗೂ ಉದಾಸೀನತೆ ತೋರಬಾರದು ಎಂದವರು ಕಿವಿಮಾತು ಹೇಳಿದರು.
ಪೊಲೀಸರು ಹೆಚ್ಚು ಕೌಶಲ್ಯ ಹೊಂದುವುದರಿಂದ ಅಪರಾಧ ನಿಗ್ರಹಕ್ಕೆ ನೆರವಾಗುತ್ತದೆ. ಹೀಗಾಗಿ ಕರ್ತವ್ಯ ಕೂಟಗಳು ಅತ್ಯಂತ ಮಹತ್ವ ಪಡೆದಿವೆ.
ಕಂತೆ ಕಡತಗಳಿಗಿಂತ ವಿಡಿಯೋ ಪರಿಣಾಮಕಾರಿ
ಡಿಜಿಟಲ್ ಸಾಕ್ಷಿಗಳನ್ನು ಈಗ ಪ್ರಾಥಮಿಕ ಸಾಕ್ಷಿಗಳೆಂದು ಪರಿಗಣಿಸಲಾಗುತ್ತಿದೆ. ಪೊಲೀಸರು ಹಾಗೂ ಆರೋಪಿಗಳ ಹೇಳಿಕೆಗಳಿಗಿಂತ ಡಿಜಿಟಲ್ ಸಾಕ್ಷಿಗಳು ಹೆಚ್ಚು ಪರಿಣಾಮ ಕಾರಿಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ಕಂತೆ ಕಡತಗಳಿಗಿಂತ ವಿಡಿಯೋ ಸಾಕ್ಷಿಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ. ಆದರೂ, ಕೆಲವೊಮ್ಮೆ ಸಿ.ಸಿ.ಟಿ.ವಿ. ಸಾಕ್ಷಿಗಳನ್ನು ಕಡೆಗಣಿಸುವುದು ಕಂಡು ಬರುತ್ತದೆ. ಆ ರೀತಿ ಆಗಬಾರದು ಎಂದರು. ಮೊಬೈಲ್ ಮೂಲಕ ತೆಗೆಯುವ ಚಿತ್ರ ಹಾಗೂ ವಿಡಿಯೋಗಳೂ ಮಹತ್ವದ ಸಾಕ್ಷಿಗಳಾಗುತ್ತವೆ. ಹೀಗಾಗಿ ಡಿಜಿಟಲ್ ಸಾಕ್ಷಿಗಳನ್ನು ಸಂಗ್ರಹಿಸುವ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 32 ಕೋಟಿ ರೂ.ಗಳ ಸೈಬರ್ ವಂಚನೆ
ಸೈಬರ್ ಅಪರಾಧಗಳ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ 32 ಕೋಟಿ ರೂ.ಗಳ ಸೈಬರ್ ವಂಚನೆಯಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸೈಬರ್ ಅಪರಾಧಗಳ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಬೇಕು. ಎ.ಐ. ತಂತ್ರಜ್ಞಾನ ಮೊಬೈಲ್ಗಳಲ್ಲೂ ಲಭ್ಯವಿದ್ದು, ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಐದು ವಿಭಾಗಗಳಲ್ಲಿ ಸ್ಪರ್ಧೆ
ಪೂರ್ವ ವಲಯ ಪೊಲೀಸ್ ಕರ್ತವ್ಯ ಕೂಟದಲ್ಲಿ ಎರಡು ದಿನಗಳ ಕಾಲ ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಪೊಲೀಸರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿಧಿ ವಿಜ್ಞಾನ, ಕಂಪ್ಯೂಟರ್ ತಿಳುವಳಿಕೆ, ಶ್ವಾನ ದಳ, ಫೋಟೋ – ವಿಡಿಯೋ ಹಾಗೂ ಬಾಂಬ್ ಪತ್ತೆ – ನಿಷ್ಕ್ರಿಯ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಇಲ್ಲಿ ಕಲಿಯುವ ಕೌಶಲ್ಯ ದೀರ್ಘಾವಧಿಯವರೆಗೆ ನೆರವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ತನಿಖೆಯಲ್ಲಿ ಕೌಶಲ್ಯ ಹೆಚ್ಚಿಸಿಕೊಂಡರೆ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವೂ ಹೆಚ್ಚಾಗುತ್ತದೆ. ತನಿಖೆ ವೈಜ್ಞಾನಿಕವಾಗಿರಬೇಕು ಹಾಗೂ ತನಿಖಾ ವರದಿಯಲ್ಲಿ ಗೊಂದಲಕ್ಕೆ ಅವಕಾಶ ಇರಬಾರದು ಎಂದು ಹೇಳಿದರು.
ಸಂತ್ರಸ್ತರಿಗೆ ನ್ಯಾಯ ಒದಗಿಸುವುದೂ ಸಹ ಸಾಮಾಜಿಕ ನ್ಯಾಯದ ಭಾಗವಾಗಿದೆ. ಈ ರೀತಿಯ ನ್ಯಾಯ ಒದಗಿಸುವುದೇ ತನಿಖೆಯ ಉದ್ದೇಶ ಆಗಿರಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್ ಕರ್ತವ್ಯ ಕೂಟದ ನೋಡಲ್ ಅಧಿಕಾರಿ ಹಾಗೂ ಡಿವೈಎಸ್ಪಿ ಎ.ಕೆ. ರುದ್ರೇಶ್, ವಲಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದವರನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಕಳಿಸಲಾಗುವುದು ಎಂದು ಹೇಳಿದರು.
ಸಮಾರಂಭದ ವೇದಿಕೆಯ ಮೇಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ್, ಜಿ. ಮಂಜುನಾಥ್ ಹಾಗೂ ಆರ್ಎಫ್ಎಸ್ಎಲ್ ಉಪ ನಿರ್ದೇಶಕಿ ಛಾಯಾ ಕುಮಾರಿ ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ್ ಶಾನಬೋಗ್ ಪ್ರಾರ್ಥಿಸಿದರು. ಸಿಪಿಸಿಗಳಾದ ಸಂಗೇನಹಳ್ಳಿ ದೇವರಾಜ ಹಾಗೂ ಹೆಚ್.ಎಸ್. ಸಿದ್ದಾರ್ಥ ನಿರೂಪಿಸಿದರೆ, ಪೊಲೀಸ್ ಉಪಾಧೀಕ್ಷಕ ಪಿ.ಬಿ. ಪ್ರಕಾಶ್ ವಂದಿಸಿದರು.