ಸ್ವಚ್ಛ, ಹಸಿರು ನಗರ; ಅಗತ್ಯ ಜನರ ಸಹಕಾರ

ಸ್ವಚ್ಛ, ಹಸಿರು ನಗರ; ಅಗತ್ಯ ಜನರ ಸಹಕಾರ

ಘನತ್ಯಾಜ್ಯ, ಕುಡಿಯುವ ನೀರು ಸರಬರಾಜು ಕುರಿತ ಕಾರ್ಯಾಗಾರದಲ್ಲಿ ಸಂಸದೆ ಡಾ.ಪ್ರಭಾ ಎಸ್ಸೆಸ್ಸೆಂ

ದಾವಣಗೆರೆ, ಸೆ.3- `ಸ್ಮಾರ್ಟ್‌ಸಿಟಿ’ ಎಂಬುದು ಹೆಸರಿಗೆ ಸೀಮಿತವಾಗದೆ ನಿಜವಾದ ಅರ್ಥದಲ್ಲಿ ರೂಪುಗೊಳ್ಳಬೇಕು. ಹಸಿರು ನಗರವಾಗಿ ಬೆಳೆಯಬೇಕು. ಇದಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆಗೆ ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರದ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ, ಘನತ್ಯಾಜ್ಯ ಮತ್ತು ಕುಡಿಯುವ ನೀರು ಸರಬರಾಜು ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಹಂತ ಹಂತವಾಗಿ ಘನತ್ಯಾಜ್ಯ ಮತ್ತು ಕುಡಿಯುವ ನೀರಿನ ನಿರ್ವಹಣೆಯಲ್ಲಿ ದಾವಣಗೆರೆೆಯ ನಂ. 1 ಸ್ಥಾನಕ್ಕೇರಲು ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.

ದಾವಣಗೆರೆ ನಗರವು 2023 ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ 4ನೇ ಸ್ಥಾನ ಪಡೆದಿತ್ತು. ಕೇಂದ್ರ ಸರ್ಕಾರದ ‘ನನ್ನ ಜೀವನ, ನನ್ನ ಸ್ವಚ್ಛ ನಗರ’ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊ ಳಿಸಿದ ರಾಜ್ಯದ 6 ನಗರಗಳಲ್ಲಿ ದಾವಣಗೆರೆಯೂ ಒಂದಾಗಿದೆ ಎಂದು ಸಂಸದರು ಹೇಳಿದರು.

ಸಾರ್ವಜನಿಕರಿಗೆ ಹಸಿ ಕಸ, ಒಣ ಕಸವನ್ನು ಬೇರ್ಪಡಿಸಬೇಕೆಂಬುದರ ಬಗ್ಗೆ, ಚರಂಡಿಗಳಲ್ಲಿ ಕಸವನ್ನು ಹಾಕುತ್ತಿರುವ ಜನರಿಗೆ ಹೆಚ್ಚು  ಜಾಗೃತಿ ಮೂಡಿಸುವ ಅಗತ್ಯವಿದೆ. ಖಾಲಿ ನಿವೇಶನಗಳಲ್ಲಿ ಕಸ ಇಲ್ಲದಂತೆ ನೋಡಿಕೊಳ್ಳಬೇಕು. ಕಟ್ಟಡ ತ್ಯಾಜ್ಯಗಳನ್ನು ಹಾಕಲು ನಿರ್ದಿಷ್ಟ ಗಡಿ ನಿಗದಿಯಾಗಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧವಾಗಬೇಕು. ಹಸಿ ಹಾಗೂ ಒಣ ಕಸ ವಿಲೇವಾರಿ ಪರಿಣಾಮಕಾರಿ ಆಗಬೇಕು. ಬೀದಿಬದಿ ವ್ಯಾಪಾರಿಗಳಿಗೆ ಶಾಶ್ವತ ಜಾಗ ನೀಡಬೇಕು ಎಂದು ತಿಳಿಸಿದರು.

ಚನ್ನಗಿರಿ ತಾಲೂಕು ಜೋಳದಾಳ್ ಗ್ರಾಮದಲ್ಲಿ ಇತ್ತೀಚೆಗೆ ಕಲುಷಿತ ನೀರು ಸೇವಿಸಿ 90 ಜನರು ಅಸ್ವಸ್ಥರಾದ ಪ್ರಕರಣವನ್ನು ಪ್ರಸ್ತಾಪಿಸಿ, ಆ ಊರಿನಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆಗಳು ರಸ್ತೆಗಿಂತ ಕೆಳಗಿವೆ. ಹಲವು ಕಡೆ ಚರಂಡಿ ಮೇಲೆಯೇ ನಲ್ಲಿ ಸಂಪರ್ಕವಿದೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಮ್ಮ ಮೊದಲ ತಿಂಗಳ ವೇತನವನ್ನು ವೈನಾಡು ಭೂಕುಸಿತ ದುರಂತದ ನಿರಾಶ್ರಿತರಿಗೆ ನೀಡಲು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿದರು. ಮೇಯರ್ ವಿನಾಯಕ ಪೈಲ್ವಾನ್, ಉಪ ಮೇಯರ್ ಯಶೋದ, ಪಾಲಿಕೆ ವಿಪಕ್ಷ ನಾಯಕ ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಆಯುಕ್ತೆ ರೇಣುಕಾ, ವೀರೇಂದ್ರ ಕುಂದಗೋಳ್ ಇದ್ದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ.ಎನ್. ಮಹಾಂತೇಶ್ ಸ್ವಾಗತಿಸಿದರು.

error: Content is protected !!