ವಸತಿ ರಹಿತ ಕುಟುಂಬಗಳಿಗೆ ಸೂರು ಕಲ್ಪಿಸಲು ಆಗ್ರಹ

ವಸತಿ ರಹಿತ ಕುಟುಂಬಗಳಿಗೆ ಸೂರು ಕಲ್ಪಿಸಲು ಆಗ್ರಹ

ಹರಪನಹಳ್ಳಿಯ ಪಂಚಾಯ್ತಿ ಮುಂಬಾಗದಲ್ಲಿ ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆ

ಹರಪನಹಳ್ಳಿ, ಜ.12- ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವೇಶನ ಹಾಗೂ ವಸತಿ ರಹಿತ ಕುಟುಂಬ ಗಳಿಗೆ ಸೂರು ಕಲ್ಪಿಸುವಂತೆ ಒತ್ತಾ ಯಿಸಿ, ಭಾರತ ಕಮ್ಯುನಿಸ್ಟ್‌ ಪಕ್ಷದ ಕಾರ್ಯಕರ್ತರು ಪಂಚಾಯ್ತಿ ಮುಂಭಾಗ ಪ್ರತಿಭಟನೆ ನಡೆಸಿದರು. 

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಪಿಐ ಮುಖಂಡ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಸೂರಿಲ್ಲದ ಕುಟುಂಬಗಳಿಗೆ ಸೂರು ಕಲ್ಪಿಸುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ, ಆದರೆ ಸರ್ಕಾರಗಳು ಜನರ ವಸತಿ ಬೇಡಿಕೆಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಆಗ್ರಹಿಸಿದರು. 

ಮತ್ತಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಬರುವ ಬಡವರಿಗೆ ನಿವೇಶನಕ್ಕಾಗಿ ಅಗತ್ಯವಿರುವ ಭೂಮಿ ಲಭ್ಯತೆ ಇದ್ದರೂ, ಅಧಿಕಾರಿ, ಜನಪ್ರತಿನಿಧಿಗಳು ಕುಂಟುನೆಪ ಹೇಳುವ ಮೂಲಕ ನಿವೇಶನಗಳನ್ನು ಹಂಚುವಲ್ಲಿ ವಿಫಲರಾಗಿದ್ದಾರೆ. ನಿವೇಶನ ಹೊಂದಿರುವ ಕುಟುಂಬಗಳಿಗೆ ಮನೆ ಮಂಜೂರಾಗಿದ್ದರೂ ಮನೆ ನಿರ್ಮಿಸಿಕೊಳ್ಳಲು ಸರ್ಕಾರದ ನೀತಿಗಳು ಅಡ್ಡಿಯಾಗುತ್ತಿವೆ ಎಂದು ದೂರಿದರು.

ಮತ್ತಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೇ ನಂಬರ್ 341/ಬಿ 4.31 ಎಕರೆ ನಿವೇಶನಕ್ಕಾಗಿ ಕಾಯ್ದಿರಿಸಿದ ಭೂಮಿಯಲ್ಲಿ ಮತ್ತಿಹಳ್ಳಿ ಗ್ರಾಮದ ಬಡ ಕಟ್ಟಡ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ, ಸಣ್ಣ ರೈತರಿಗೆ, ದೇವದಾಸಿ ಮಹಿಳೆಯರಿಗೆ, ನಿವೇಶನ ಸಹಿತ ವಸತಿ ಕಲ್ಪಿಸಬೇಕು. 

ಒಂದು ವೇಳೆ ಭೂಮಿ ಕಡಿಮೆಯಾದರೆ ಭೂಮಿಯನ್ನು ಖರೀದಿ ಮಾಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಳಿಗಾನೂರು ಕೊಟ್ರೇಶ್, ರಮೇಶ್‌ ನಾಯ್ಕ, ಕನಕಟ್ಟೆ ಮಂಜಪ್ಪ, ಅಂಜಿನಪ್ಪ, ಜಂಬುಲಿಂಗಚಾರಿ, ತಿಂದಪ್ಪ, ಭರಮಪ್ಪ ಸೇರಿದಂತೆ, ಇತರರು ಇದ್ದರು.

error: Content is protected !!