ಮಲೇಬೆನ್ನೂರು ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಾಧಿಕಾರಿ ಭರವಸೆ
ಮಲೇಬೆನ್ನೂರು, ಜ. 12- ಬಜೆಟ್‌ನಲ್ಲಿ ಸಾರ್ವಜನಿಕ ಶೌಚಾಲಯ ಸೇರಿದಂತೆ ಮೂಲಭೂತ ಸಮಸ್ಯೆಗಳಿಗೆ ಒತ್ತು ನೀಡುವುದಾಗಿ ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್ ಭರವಸೆ ನೀಡಿದ್ದಾರೆ.
ಪಟ್ಟಣದ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ 2023-24ನೇ ಸಾಲಿನ ಆಯ-ವ್ಯಯ ತಯಾರಿಸುವ ಕುರಿತು ಇಂದು ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೂತ್ ವ್ಯವಸ್ಥೆ ಅಡಿಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಪಾವತಿಸಿ, ಉಪಯೋಗಿಸುವ ಹಾಗೆ ಖಾಸಗಿ ಸಂಸ್ಥೆಗಳಿಗೆ ಜಾಗ ನೀಡಿ, ಅವರಿಂದಲೇ ನಿರ್ಮಿಸುವ ಉದ್ದೇಶವಿದೆ.
ಸಂತೆ ಮಾರುಕಟ್ಟೆ ಬಳಿ ವಾಣಿಜ್ಯ ಮಳಿಗೆ ನಿರ್ಮಾಣ ಮತ್ತು ಅಮೃತ್ 2.0 ಕುಡಿಯುವ ನೀರಿನ ಅಭಿವೃದ್ಧಿ ಯೋಜನೆಯನ್ನು ಪಟ್ಟಣದಲ್ಲಿ ಅನುಷ್ಠಾನಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಯೋಜನೆಗೆ ಸುಮಾರು 70 ಕೋಟಿ ರೂ. ಅನುದಾನ ಬೇಕಾಗುತ್ತದೆ ಎಂದು ಸುರೇಶ್ ಮಾಹಿತಿ ನೀಡಿದರು.
ಅಲ್ಲದೇ ಶಫೀ ಸೇರಿದಂತೆ ಅನೇಕರ ಅಭಿಪ್ರಾಯದಂತೆ ಪಟ್ಟಣದಲ್ಲಿರುವ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಮುಳ್ಳು ಕಂಟಿ-ತ್ಯಾಜ್ಯ ತೆರವು ಮಾಡಿ ಸ್ವಚ್ಛ ಮಾಡಿಸುವಂತೆ ನಿವೇಶನ ಮಾಲೀಕರಿಗೆ ಸೂಚನೆ ನೀಡುತ್ತೇವೆ. ಅವರು ಮಾಡಿಸದಿದ್ದರೆ ನಾವೇ ಮಾಡಿಸಿ ಕಂದಾಯದ ಜೊತೆಗೆ ಸ್ವಚ್ಛತೆ ಮಾಡಿಸಿದ ಹಣವನ್ನು ವಸೂಲಿ ಮಾಡುತ್ತೇವೆ ಎಂದು ಮುಖ್ಯಾಧಿಕಾರಿ ಸುರೇಶ್ ಹೇಳಿದರು.
ಪಟ್ಟಣದಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡುತ್ತಿಲ್ಲ. ಸತ್ತ ಹಂದಿಗಳನ್ನೂ ಚರಂಡಿಗಳಲ್ಲೇ ಹಾಕುತ್ತಾರೆ. ಇದರಿಂದ ರೋಗ – ರುಜಿನಗಳು ಬರುತ್ತವೆ ಎಂದು ನಿವೃತ್ತ ಶಿಕ್ಷಕ ಗೋವಿಂದಪ್ಪ ಸಾವಜ್ಜಿ ಪ್ರಶ್ನಿಸಿದಾಗ ಉತ್ತರ ನೀಡಿದ ಸಿಓ ಸುರೇಶ್, ನಮ್ಮ ಪುರಸಭೆಗೆ 48 ಪೌರ ಕಾರ್ಮಿಕರು ಬೇಕಿದ್ದು, ಈಗ 18 ಜನ ಮಾತ್ರ ಇದ್ದಾರೆ. ಹಾಗಾಗಿ ಚರಂಡಿಗಳ ಸ್ವಚ್ಛತೆ ವಿಳಂಬವಾಗುತ್ತದೆ. ಆದರೂ ಆದ್ಯತೆಯ ಮೇರೆಗೆ ಸ್ವಚ್ಛತೆ ಮಾಡಿಸುತ್ತಿದ್ದೇವೆ ಎಂದರು.
ಪುರಸಭೆ ಸದಸ್ಯ ದಾದಾಪೀರ್ ಮಾತನಾಡಿ, ಭದ್ರಾ ಕಾಲುವೆಯ ದಂಡೆಯಲ್ಲಿ ಹಾಕಿರುವ ತಿಪ್ಪೆಗಳನ್ನು ತೆರವು ಮಾಡಿಸುವಂತೆ ಒತ್ತಾಯಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿ ಕುಮಾರ್ ಮಾತನಾಡಿ, ಪುರಸಭೆಯ ಕಛೇರಿಗಳು ಹಾಗೂ ವಾಣಿಜ್ಯ ಮಳಿಗೆ ನಿರ್ಮಾಣಕ್ಕಾಗಿ ಹೆದ್ದಾರಿ ಪಕ್ಕದಲ್ಲಿರುವ ಸರ್ಕಾರಿ ಶಾಲೆಯ ಹೊಲವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ನೀಡಿದರು. ಪುರಸಭೆ ಸದಸ್ಯ ಟಿ. ಹನುಮಂತಪ್ಪ ಮಾತನಾಡಿ, ಆಶ್ರಯ ಕಾಲೋನಿಯಲ್ಲಿ ಬಡವರಿಗೆ ನೀಡಿರುವ ನಿವೇಶನ ಹಲವಾರು ವರ್ಷಗಳಿಂದ ಖಾಲಿ ಬಿದ್ದಿವೆ. ಅವುಗಳನ್ನು ಪುರಸಭೆ ವಶಕ್ಕೆ ಪಡೆದು, ಅರ್ಹ ಫಲಾನುಭವಿಗಳಿಗೆ ಮರು ಹಂಚಿಕೆ ಮಾಡಿ ಎಂದು ಆಗ್ರಹಿಸಿದರು.
ವಿಕಲಚೇತನರ ಸಂಘದ ಕಾರ್ಯದರ್ಶಿ ಪೂಜಾರ್ ಗಂಗಾಧರ್ ಮಾತನಾಡಿ, ಪಟ್ಟಣದಲ್ಲಿರುವ ವಿಕಲಚೇತನರಿಗೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಮಾಜಿ ಸದಸ್ಯ ಬಿ. ಸುರೇಶ್ ಅವರು, ಪಟ್ಟಣಕ್ಕೆ ಮುಂದೊಂದು ದಿನ ಯುಜಿಡಿ ಬರಲಿದ್ದು, ಅದಕ್ಕಾಗಿ ಈಗಿನಿಂದಲೇ ಯೋಜನೆ ರೂಪಿಸಿ ಮತ್ತು ಹೆದ್ದಾರಿ ಪಕ್ಕದಲ್ಲಿರುವ ಸರ್ಕಾರಿ ಶಾಲೆ ಜಾಗದಲ್ಲಿ ಬೆಳೆದಿರುವ ಮುಳ್ಳು ಗಿಡಗಳನ್ನು ತೆರವುಗೊಳಿಸಿ ಎಂದರು.
ಗುತ್ತಿಗೆದಾರರ ಸಂಘಕ್ಕೆ ಒಂದು ಕೊಠಡಿ ನೀಡುವಂತೆ ಗುತ್ತಿಗೆದಾರ ಶಫೀ ಮನವಿ ಮಾಡಿದಾಗ ಪುರಸಭೆಯ ಕಛೇರಿಗಳಿಗೆ ನೀವೇ ಒಂದೆರಡು ಕೊಠಡಿಗಳನ್ನು ಕಟ್ಟಿಸಿ ಎಂದು ನೇರವಾಗಿ ಸಿಓ ಸುರೇಶ್ ಕೇಳಿದಾಗ ಸಭೆಯಲ್ಲಿ ಚಪ್ಪಾಳೆ ಕೇಳಿ ಬಂದವು.
ಪುರಸಭೆ ಸದಸ್ಯರುಗಳಾದ ಗೌಡ್ರ ಮಂಜಣ್ಣ, ಸಾಬೀರ್ ಅಲಿ, ನಯಾಜ್, ಭೋವಿ ಶಿವು, ಬಿ. ಮಂಜುನಾಥ್, ಖಲೀಲ್, ಶಬ್ಬೀರ್ ಖಾನ್, ಬೆಣ್ಣೆಹಳ್ಳಿ ಸಿದ್ದೇಶ್, ಷಾ ಅಬ್ರಾರ್ ಮತ್ತು ಕೆ.ಪಿ. ಗಂಗಾಧರ್, ಜಿಗಳೇರ ಹಾಲೇಶಪ್ಪ, ಚಮನ್ ಷಾ, ಎಂ.ಬಿ. ರುಸ್ತುಂ, ಮಾಜಿ ಸದಸ್ಯರಾದ ಯುಸುಫ್, ದಾದಾವಲಿ ಅವರುಗಳು ಮಾತನಾಡಿದರು.
ಪುರಸಭೆ ಅಧಿಕಾರಿಗಳಾದ ಏಕನಾಥ್, ಉಮೇಶ್, ಹಾಲೇಶಪ್ಪ, ಪ್ರಭು, ಇಮ್ರಾನ್ ಮತ್ತಿತರರು ಸಭೆಯಲ್ಲಿದ್ದರು.