ಜಗಳೂರು, ಆ. 30- ಪಟ್ಟಣದ ಮಧ್ಯಭಾಗದಲ್ಲಿ ಹಾದುಹೋಗಿರುವ ಮಲ್ಪೆ-ಮೊಳಕಾಲ್ಮೂರು ಮುಖ್ಯರಸ್ತೆ ವಿಸ್ತರಣೆಗೆ ಮಾರ್ಕಿಂಗ್ ಮಾಡುವ ಮೂಲಕ ಬಹುದಿನದ ಬೇಡಿಕೆಯ ರಸ್ತೆ ವಿಸ್ತರಣೆ ಕಾಮ ಗಾರಿಗೆ ಅಧಿಕಾರಿಗಳಿಂದ ಚಾಲನೆ ದೊರಕಿದೆ.
ಪಟ್ಟಣದಲ್ಲಿ ಕಿರಿದಾದ ರಸ್ತೆಯಿಂದ ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ದಾವಣಗೆರೆ ರಸ್ತೆಯಲ್ಲಿ ಪ್ರತಿನಿತ್ಯ ವಾಹನ ದಟ್ಟಣೆಯಿಂದ ತೀವ್ರ ಸಮಸ್ಯೆ ಎದುರಾಗಿದ್ದವು.ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಬಸ್‌ನ ಚಕ್ರಕ್ಕೆ ಬೈಕ್ ಸಮೇತ ಸಿಲುಕಿಹಾಕಿಕೊಂಡು ಇಬ್ಬರು ಮೃತಪಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಶಾಸಕ ಬಿ.ದೇವೇಂದ್ರಪ್ಪ ಅವರು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ದ ಗರಂ ಆಗಿದ್ದರು. ರಸ್ತೆ ವಿಸ್ತರಣೆ ಕಾಮಗಾರಿ ಕುರಿತು ಏಕೆ ವಿಳಂಬ ಮಾಡುತ್ತಿರುವಿರಿ. ಕೂಡಲೇ ಕ್ರಮಕೈಗೊಳ್ಳಬೇಕು ಎಂದು ತೀವ್ರ ತರಾಟೆಗೆ ತೆಗೆದುಕೊಂಡ ಪರಿಣಾಮ ಅಧಿಕಾರಿಗಳು ಕೂಡಲೇ ಮಾರ್ಕಿಂಗ್ ಪ್ರಕ್ರಿಯೆಗೆ ಮುಂದಾಗಿದ್ದಾರೆ.
ರಾಜ್ಯ ಹೆದ್ದಾರಿ ನಿಯಮದಂತೆ ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗೆ 69 ಅಡಿ ವ್ಯಾಪ್ತಿಯಲ್ಲಿ ಅಗಲೀಕರಣಕ್ಕೆ ಇಂದು ಮಾರ್ಕಿಂ ಆರಂಭಿಸಲಾಗಿದೆ.
ಫುಟ್ ಪಾತ್ ಅಭಿವೃದ್ದಿ, ಸುಸಜ್ಜಿತ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತದೆ. ಒಟ್ಟು 21 ಕೋಟಿ ರೂ. ವೆಚ್ಚದ ರಸ್ತೆ ವಿಸ್ತರಣೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಸಾಂಕೇತಿಕ ಚಾಲನೆ ಸಿಕ್ಕಿದೆ.
ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಎಇಇ ನಾಗರಾಜ್, ಜಿ.ಪಂ ಎಇಇ ಶಿವಮೂರ್ತಿ, ಪ.ಪಂ.ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಇಂಜಿನಿಯರ್ ಪುರುಷೋತ್ತಮ, ಪಿ.ಎಸ್.ಐ ಗಾದಿಲಿಂಗಪ್ಪ, ಪ.ಪಂ ಇಂಜಿನಿಯರ್ ಶೃತಿ ಇದ್ದರು.