ಬಾತಿ ಗುಡ್ಡದ ಮರ ಕಡಿದು ವಸತಿ

ಬಾತಿ ಗುಡ್ಡದ ಮರ ಕಡಿದು ವಸತಿ

ಲೋಕಾಯುಕ್ತರಿಗೆ ದೂರು ಸಲ್ಲಿಕೆ

ದಾವಣಗೆರೆ, ಆ. 30 – ಪಶ್ಚಿಮ ಘಟ್ಟದಲ್ಲಿ ಅರಣ್ಯ ನಾಶ ಹಾಗೂ ಬೆಟ್ಟಗಳ ಅವೈಜ್ಞಾನಿಕ ಬಳಕೆಯಿಂದಾಗಿ ಅವಘಡಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ವಲಯಗಳ ಸಂರಕ್ಷಣೆಯ ಬಗ್ಗೆ ಚರ್ಚೆಗಳು ತೀವ್ರವಾಗಿವೆ. ಈ ನಡುವೆಯೇ, ನಗರ ಸಮೀಪದ ಬಾತಿ ಗುಡ್ಡದ ಪ್ರದೇಶವನ್ನು ವಸತಿ ಉದ್ದೇಶಕ್ಕೆ ಬಳಸುವ ಬಗ್ಗೆ ಆಕ್ಷೇಪಗಳು ಕೇಳಿ ಬಂದಿವೆ.

ಬಾತಿ ಗುಡ್ಡದ ಸರ್ವೆ ನಂ. 240ರ ಹತ್ತಿರ ಸರ್ವೇ ನಂ. 300ರಲ್ಲಿ ಐದು ಎಕರೆ ಹಾಗೂ ಸರ್ವೇ ನಂಬರ್ 301ರಲ್ಲಿ 1 ಎಕರೆ ಇರುವ ಸರ್ಕಾರಿ ಜಾಗವನ್ನು ನಿವೇಶನಗಳನ್ನಾಗಿ ಮಾಡಲು ದೊಡ್ಡಬಾತಿ ಗ್ರಾಮ ಪಂಚಾಯ್ತಿಯಿಂದ ದಾವಣಗೆರೆ ತಹಶೀಲ್ದಾರ್ ಅವರಿಗೆ ಪತ್ರ ಬರೆಯಲಾಗಿದೆ.

ಈ ಬಗ್ಗೆ ತಹಶೀಲ್ದಾರರು ಜಂಟಿ ಸಮೀಕ್ಷೆಗಾಗಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ವಲಯ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ತಿಳಿಸಿದ್ದಾರೆ.

ನಿವೇಶನಗಳನ್ನು ನೀಡಲು ಯಾವುದೇ ಅಭ್ಯಂತರ ವಿಲ್ಲ. ಆದರೆ, ನಿಯಮಗಳನ್ನು ಪಾಲಿಸದೆ ಬೆಳೆದ ಗಿಡ – ಮರಗಳನ್ನು ಕಡಿದು ನಿವೇಶನ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಗುಡ್ಡಕ್ಕೆ ಹಾನಿಯಾಗಿ ಕುಸಿತ ಉಂಟಾಗಬಹುದು ಎಂದು ಶ್ರೀಕಾಂತ್ ಅವರು ಲೋಕಾಯುಕ್ತರಲ್ಲಿ ದೂರು ದಾಖಲಿಸಿದ್ದಾರೆ.

ಈ ಹಿಂದೆಯೂ ಅರಣ್ಯೀಕರಣ ಯೋಜನೆಯ ಅನ್ವಯ ಕಾಮಗಾರಿಗಳನ್ನು ಕೈಗೊಂಡು ಸಸಿಗಳನ್ನು ಬೆಳೆಸ ಲಾಗಿತ್ತು. ಸಸಿಗಳ ನಿರ್ವಹಣೆ ಹಾಗೂ ಈ ಯೋಜನೆಗೆ ಆದ ವೆಚ್ಚ ಹಾಗೂ ಒತ್ತುವರಿಯ ಬಗ್ಗೆ ತನಿಖೆ ನಡೆಸಬೇಕಿದೆ ಎಂದೂ ಶ್ರೀಕಾಂತ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ಹಿಂದೆಯು ಬಾತಿ ಗುಡ್ಡದ ಹಾಗೂ ಸುತ್ತಲಿನ ಪ್ರದೇಶಗಳಲ್ಲಿನ ಸರ್ಕಾರಿ ಜಾಗವನ್ನು ಅನ್ಯರಿಗೆ ನೀಡಲಾಗಿದೆ. ಸರ್ಕಾರದ ಕಚೇರಿಗಳು ಹಾಗೂ ದಾವಣಗೆರೆ ನೀರು ಪೂರೈಸುವ ಯೋಜನೆಗೆ ಬಳಸಲಾಗಿದೆ. ಮುಂದೆಯೂ ಇದೇ ರೀತಿ ಯೋಜನೆಗಳ ಹೆಸರಿನಲ್ಲಿ ಗುಡ್ಡ ಕರಗಿಸಬಾರದು ಎಂದವರು ಹೇಳಿದ್ದಾರೆ.

ಬಾತಿ ಗುಡ್ಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ವಿವಿಧ ಜಾತಿಯ ಪಕ್ಷಿ ಸಂಕುಲ, ಸರಿಸೃಪಗಳಿವೆ. ಗುಡ್ಡದ ಜಾಗವನ್ನು ಹಾಳು ಮಾಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಬೆಳೆದ ಮರಗಳ್ನು ಕಡಿದು ನಿವೇಶನ ಮಾಡಲು ಗುಡ್ಡದ ಮಣ್ಣು ತೆಗೆದರೆ ಗುಡ್ಡ ಕುಸಿಯಬಹುದು ಎಂದು ಶ್ರೀಕಾಂತ್ ಕಳವಳ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಗುಡ್ಡದ ಸುತ್ತಲಿನ ಪರಿಸರಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕಿದೆ. ಇದೆಲ್ಲದರ ಬಗ್ಗೆ ಜಂಟಿ ಸಮೀಕ್ಷೆ ನಡೆಯಬೇಕಿದೆ. ಅರಣ್ಯ ಕಾಯ್ದೆಯ ಅನ್ವಯ ಬಾತಿ ಗುಡ್ಡದ ಪ್ರದೇಶವನ್ನು ಹದ್ದುಬಸ್ತು ಮಾಡಬೇಕಿದೆ ಎಂದವರು ಆಗ್ರಹಿಸಿದ್ದಾರೆ.

error: Content is protected !!