ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಸಿದ್ದರಾಮಯ್ಯ
ರಾಣೇಬೆನ್ನೂರು, ಆ. 30- ನಾಡಿನುದ್ದಕ್ಕೂ ಹೆಸರು ವಾಸಿಯಾದ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡ ವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡುವುದರ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಶುಕ್ರವಾರ ತಾಲ್ಲೂಕಿನ ದೇವರಗುಡ್ಡದಲ್ಲಿ ನಿರ್ಮಿಸಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣ ಹಾಗೂ ಶ್ರೀ ಕನಕ ಭವನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶಾಸಕ ಬಸವರಾಜ್ ಶಿವಣ್ಣನವರ್ ಈ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದು, ಈ ಬಗ್ಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಜನವರಿ ಅಂತ್ಯದ ಒಳಗೆ ಈ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಶೀಘ್ರವೇ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಮಂಜೂರಾಗಿರುವ ದೇವರಗುಡ್ಡ ಪ್ರಾಧಿಕಾರದ ಬಗೆಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೆ ಅದನ್ನು ತೆರವುಗೊಳಿಸುವ ಕೆಲಸ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದರು.
ನನ್ನನ್ನು ಕುರ್ಚಿಯಿಂದ ಕೆಳಗಿಳಿಸಲು ಎಲ್ಲಾ ರೀತಿಯ ಕುತಂತ್ರ ಮಾಡಲಾಗುತ್ತಿದೆ. ಸಂಗೊಳ್ಳಿ ರಾಯಣ್ಣನಂತೆ ನನಗೂ ಹಿತ ಶತ್ರುಗಳಿದ್ದಾರೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರಿಗಿರುವ ಕಂಟಕ ನಿವಾರಣೆಯಾಗಲಿ : ಸಚಿವ ಎಚ್.ಕೆ. ಪಾಟೀಲ್
ರಾಣೇಬೆನ್ನೂರು, ಆ.30 – ರಾಜ್ಯದ ಮುಖ್ಯಂತ್ರಿ ಸಿದ್ದರಾಮಯ್ಯನವರ ಕಂಟಕ ನಿವಾರಣೆಯಾಗಲೆಂದು ಭಕ್ತರ ಹಾಗೂ ಅಭಿಮಾನಿಗಳ ಆಶಯದಂತೆ ನಾವು ಹಾಗೂ ಮುಖ್ಯಮಂತ್ರಿಗಳು ದೇವರಗುಡ್ಡ ಗ್ರಾಮಕ್ಕೆ ಬಂದು ಶ್ರೀ ಮಾಲತೇಶ ಸ್ವಾಮಿಯ ದರ್ಶನ ಪಡೆದಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಶುಕ್ರವಾರ ತಾಲ್ಲೂಕಿನ ದೇವರಗುಡ್ಡ ಗ್ರಾಮದಲ್ಲಿ ನಡೆದ ದೇಶಪ್ರೇಮಿ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣ ಹಾಗೂ ಶ್ರೀ ಕನಕ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇವರಗುಡ್ಡ ಗ್ರಾಮಕ್ಕೆ ನಿತ್ಯವೂ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಯಾತ್ರಿನಿ ವಾಸ, ಅವಶ್ಯಕತೆ ಇದೆ ಎಂಬ ಬೇಡಿಕೆಯಂತೆ ಗ್ರಾಮದ ಮೂಲಭೂತ ಸೌಲಭ್ಯಗಳನ್ನು ಜನವರಿ ತಿಂಗಳೊಳಗೆ ಮುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಸಂಗೊಳ್ಳಿ ರಾಯಣ್ಣನಂತಹ ದೇಶಪ್ರೇಮಿ ಇನ್ನೊಬ್ಬರಿಲ್ಲ. ಅವರ ಸ್ಮರಣೆಗಾಗಿ ಸಂಗೊಳ್ಳಿಯಲ್ಲಿ 100 ಎಕರೆ ಜಮೀನಿನಲ್ಲಿ ಅಂದಾಜು 272 ಕೋಟಿ ರೂ. ವೆಚ್ಚದಲ್ಲಿ ಸೈನಿಕ ಶಾಲೆ ತೆರೆದು ಅವರ ಸ್ಮರಣೆ ಮಾಡಲಾಗುತ್ತಿದೆ. ಜೊತೆಗೆ 280 ಕೋಟಿ ರೂ ವೆಚ್ಚದಲ್ಲಿ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲಾಗುವುದು ಎಂದರು.
ಅನ್ನ, ಕೃಷಿ, ಕ್ಷೀರ, ಶಾದಿ, ಮೈತ್ರಿ, ಸೇರಿದಂತೆ ಇತರೆ ಭಾಗ್ಯಗಳನ್ನು ನೀಡುವುದರ ಜೊತೆಗೆ ಐದು ಗ್ಯಾರಂಟಿ ಗಳಾದ ಶಕ್ತಿ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ ಈ ಯೋಜನೆಗಳನ್ನು ಎಂದೆಂದಿಗೂ ನಿಲ್ಲಿಸುವುದಿಲ್ಲ. ಇವುಗಳಿಂದಲೇ ಬಡವರ ಆರ್ಥಿಕ ಅಭಿವೃದ್ಧಿ ಬಲವರ್ಧನೆ ಗೊಳ್ಳುತ್ತಿದೆ .ಆದರೆ ವಿರೋಧಿಗಳು ಇದು ನಿಲ್ಲಲಿ ಎಂದು ಹೋರಾಟ ಮಾಡುತ್ತಿದ್ದಾರೆ. ಆದರೆ ಅವರಿಗೆ ಎಂದೂ ಫಲ ದೊರೆಯುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಅಂತರಾಜ್ಯದಲ್ಲೂ ಪ್ರಸಿದ್ಧಿ ಪಡೆದಿರುವ ದೇವರ ಗುಡ್ಡದ ಕ್ಷೇತ್ರಕ್ಕೆ ಶೌಚಾಲಯ, ನೀರು, ಪಾರ್ಕಿಂಗ್, ವಸತಿ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮುಖ್ಯಮಂತ್ರಿಗಳು ವಿಶೇಷ ಯೋಜನೆ ಅಡಿಯಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ವಿನಂತಿಸಿದರು.
ತಿಂಥಿಣಿ ಕನಕ ಗುರುಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ನರಸೀಪುರ ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಕಾರಣಿಕದ ನಾಗಪ್ಪಜ್ಜ ಉರ್ಮಿ, ದೇವರಗುಡ್ದದ ಬೀರಲಿಂಗೇಶ್ವರ ದೇವರ ಪೂಜಾರಿ ಕರಿಯಪ್ಪಜ್ಜ ಹಕಾರಿ ದಿವ್ಯಸಾನ್ನಿಧ್ಯ ವಹಿಸಿದ್ದರು.
ಸಚಿವರಾದ ಎಚ್.ಕೆ.ಪಾಟೀಲ್, ಶಿವಾನಂದ ಪಾಟೀಲ್, ಉಪಸಭಾಪತಿ ರುದ್ರಪ್ಪ ಲಮಾಣಿ, ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಶ್ರೀನಿವಾಸ್ ಮಾನೆ , ಪ್ರಕಾಶ ಕೋಳಿವಾಡ, ಮಾಜಿ ಸಚಿವ ಆರ್ ಶಂಕರ್, ಮಾಜಿ ಶಾಸಕ ನೆಹರು ಓಲೆಕಾರ್, ಅಜ್ಜಂಪೀರ್ ಖಾದ್ರಿ, ಸೋಮಣ್ಣ ಬೇವಿನಮರದ, ಮಾಜಿ ಸಂಸದ ಐ.ಜೆ. ಸನ್ನಿಧಿ ಗ್ಯಾರಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷ ಎಸ್ ಆರ್ ಪಾಟೀಲ್ ಎಂಎಂ ಹಿರೇಮಠ ಆನಂದ ಗಡ್ಡದೇವರ ಮಠ ನ್ಯಾಯವಾದಿ ನಾಗರಾಜ ಸಂಶಿ, ಏಕನಾಥ, ಭಾನುವಳ್ಳಿ, ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಸತಗಿ ಸೇರಿದಂತೆ ಗ್ರಾಪಂ ಸದಸ್ಯರುಗಳು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಪದಾಧಿಕಾರಿಗಳು, ಗ್ರಾಮದ ಮುಖಂಡರುಗಳು ಇದ್ದರು. ಅನಂತರ ಸಾರ್ವಜನಿಕರಿಂದ ಅಹವಾಲುಗಳನ್ನು ಸಿದ್ದರಾಮಯ್ಯನವರು ಸ್ವೀಕರಿಸಿದರು.