ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ರಾಯಭಾಗದ ವೀರಣ್ಣ ಮಡಿವಾಳರ
ದಾವಣಗೆರೆ, ಸೆ. 1- ಕರ್ನಾಟಕದಲ್ಲಿರುವ ಸರ್ಕಾರಿ ಶಾಲೆಗಳ ಸಬಲೀಕರಣ ಮೊದಲ ಆದ್ಯತೆಯಾಗಬೇಕಾಗಿದೆ. ಒಂದು ಬಾರಿಗಾದರೂ `ಶೈಕ್ಷಣಿಕ ಬಜೆಟ್’ ಮಂಡನೆ ಮಾಡುವ ಅವಶ್ಯವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತರೂ, ಆದರ್ಶ ಶಿಕ್ಷಕರಾದ ರಾಯಭಾಗದ ವೀರಣ್ಣ ಮಡಿವಾಳರ ಹೇಳಿದರು.
ನಗರದ ಗುರುಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಜಿಲ್ಲಾ ಘಟಕದ ವತಿಯಿಂದ ಇಂದು ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಐಚ್ಛಿಕ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ `ಜ್ಞಾನಕಾಶಿ’ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಶಿಕ್ಷಣ ಕ್ರಾಂತಿಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಪ್ರತ್ಯೇಕ ಶೈಕ್ಷಣಿಕ ಬಜೆಟ್ ಮಂಡನೆ ಮಾಡಬೇಕಾದ ಅಗತ್ಯವಿದೆ. ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಒಂದು ತಿಂಗಳ ವೇತನ ಹಾಗೂ ಉದ್ಯಮಿದಾರರು ತಮ್ಮ ಒಂದು ತಿಂಗಳ ಲಾಭಾಂಶವನ್ನು ಸರ್ಕಾರಿ ಶಾಲೆಗಳಿಗೆ ನೀಡಿದರೆ ಶೈಕ್ಷಣಿಕ ಕ್ರಾಂತಿಯೇ ಉಂಟಾಗುತ್ತದೆ. ದೆಹಲಿ ಶಾಲೆಗಳನ್ನು ಮೀರಿಸುವಷ್ಟರ ಮಟ್ಟಿಗೆ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿನುಗುವ ಕ್ರಾಂತಿ ಸೂರ್ಯರಾಗುತ್ತಾರೆಂದರು.
ದೆಹಲಿ, ಆಂಧ್ರಪ್ರದೇಶ, ಕೇರಳ ಮತ್ತಿತರೆ ರಾಜ್ಯಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಅಭಿವೃದ್ಧಿಪಡಿಸ ಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಸರ್ಕಾರ 13 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಹೊರಟಿತ್ತು. ಅದನ್ನು ವಿರೋಧಿಸಿ ಕವಿತೆ ಬರೆದಿದ್ದಕ್ಕೆ ನನ್ನ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ನಾಡಿನ ಜನರ ಒಕ್ಕೊರಲಿನ ಕೂಗಿಗೆ ಸರ್ಕಾರ ಮಣಿಯಬೇಕಾಯಿತು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವರದಿ ಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್ ಮಾತನಾಡಿ, ಹಿಂದೆ ಅಂಕ ಗಳಿಕೆಗೆ ಯಾವುದೇ ಮಾನದಂಡವಿರಲಿಲ್ಲ. ಆದರೆ ಇಂದು ಅಂಕ ಗಳಿಕೆ ಪ್ರಮುಖವಾಗಿದೆ. ಬೇರೆ ವಿದ್ಯಾರ್ಥಿ ಗಳೊಂದಿಗೆ ಯಾರೂ ತಮ್ಮನ್ನು ಹೋಲಿಕೆ ಮಾಡಿಕೊಳ್ಳಬಾರದು. ಪ್ರತಿಯೊಬ್ಬರಲ್ಲೂ ಅಗಾಧವಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರ ಹಾಕುವ ಕೆಲಸವನ್ನು ಮಾಡಬೇಕೆಂದರು.
ಪೋಷಕರೂ ಸಹ ಮಕ್ಕಳ ಓದಿನ ಕಡೆ ಹೆಚ್ಚು ಗಮನಹರಿಸಬೇಕು. ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಮೊಬೈಲ್ ಬಳಕೆ ಒಳ್ಳೆಯ ಉದ್ದೇಶಕ್ಕೆ ಮಾತ್ರ ಇರಲಿ ಎಂದು ಸಲಹೆ ನೀಡಿದರು.
ದಾವಣಗೆರೆಯ ಜೈನ್ ಪಾಲಿ ಪ್ಯಾಕ್ ಮಾಲೀಕರಾದ ಕೋಮಲ್ ಕುಂದಪ್ಪ ಜೈನ್ ಅವರಿಗೆ `ಸಾಮಾಜಿಕ ಸೇವಾ ರತ್ನ’ ಪ್ರಶಸ್ತಿ ನೀಡಲಾಯಿತು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ.ಎಸ್.ಎ. ಗಿರಿಧರ್, ಹೆಚ್.ವಿ. ಶ್ರೀನಿವಾಸ್ ಕಕ್ಕರಗೊಳ್ಳ, ಮಹಾದೇವ, ಬಸವರಾಜ್ ಸಾಗರ್, ಬಿ.ಎಂ. ಶಿವಕುಮಾರ್, ಎಸ್.ಕೆ. ಒಡೆಯರ್, ವಿಜಯಕುಮಾರ್ ಜಾಧವ್, ರಮೇಶ್, ವೈ.ಎಲ್. ಹನುಮಂತರಾಜ್ ಇವರನ್ನು ಕರವೇ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.
ಆರ್.ಟಿ.ಎಸ್. ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ. ಶ್ರೀನಿವಾಸಮೂರ್ತಿ ಮಾತನಾಡಿದರು. ಕರವೇ ಗೌರವಾಧ್ಯಕ್ಷ ವಾಸುದೇವ ರಾಯ್ಕರ್ ಅಧ್ಯಕ್ಷತೆ ವಹಿಸಿದ್ದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆ ಜಿಲ್ಲಾ ಅಧಿಕಾರಿ ಡಾ. ಕೆ.ಕೆ. ಪ್ರಕಾಶ್, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ, ಪದಾಧಿಕಾರಿಗಳಾದ ಬಸಮ್ಮ, ಮಂಜುಳಾ ಗಣೇಶ್, ಮಂಜುಳಾ ಮಹಾಂತೇಶ್, ಧರ್ಮರಾಜ್, ನಾಗಮ್ಮ, ಶಶಿಕುಮಾರ್, ರವಿಕುಮಾರ್, ಲೋಕೇಶ್, ಸುರೇಶ್, ನಿಂಗರಾಜ್, ಜಬೀವುಲ್ಲಾ, ಗೋಪಾಲ ದೇವರಮನಿ, ಸಂಗೀತ ನರೇಂದ್ರ ಜೈನ್, ಶ್ರೀನಿವಾಸ ಚಿನ್ನಿಕಟ್ಟೆ, ಓ. ಮಹೇಶ್ವರಪ್ಪ, ಮಂಜುನಾಥ್, ಪರಮೇಶ್ ಮತ್ತಿತರರಿದ್ದರು.
ಶ್ರೀಕಾಂತ್ ಭಟ್ ನಿರೂಪಿಸಿದರು. ರಾಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೆ.ಎ. ಭಾಗ್ಯಶ್ರೀ ಅನಿಸಿಕೆ ವ್ಯಕ್ತಪಡಿಸಿದರು.