ಜಗಳೂರು ತಾ.ಗಡಿಮಾಕುಂಟೆ ಕೆರೆಗೆ ವಿಶೇಷ ಗಂಗೆ ಪೂಜೆ ನೆರವೇರಿಸಿದ ಉಜ್ಜಿನಿ ಶ್ರೀ
ಜಗಳೂರು, ಆ.28- `ವಿಜ್ಞಾನ ತಂತ್ರಜ್ಞಾನವಿಲ್ಲದ ಕಾಲಘಟ್ಟದಲ್ಲಿ ಪೂರ್ವಜರು ನಿರ್ಮಿಸಿದ ಕೆರೆಗಳು ಋತುಮಾನ ಜಲಸಂಗ್ರಹದ ಆಸ್ತಿಗಳು’ ಎಂದು ಉಜ್ಜಿನಿ ಸದ್ದರ್ಮ ಪೀಠದ ಸಿಂಹಾಸನಾಧೀಶ್ವರ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ವ್ಯಾಖ್ಯಾನಿಸಿದರು.
ತಾಲ್ಲೂಕಿನ ಗಡಿಮಾಕುಂಟೆ ಕೆರೆಗೆ 15ಅಡಿಗೂ ಅಧಿಕ ನೀರು ಭರ್ತಿಯಾದ ಹಿನ್ನೆಲೆ ವಿಶೇಷ ಗಂಗೆ ಪೂಜೆ, ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಜಮೀನುಗಳಲ್ಲಿ ಮಣ್ಣಿನ ಸವಕಳಿ ತಪ್ಪಿಸಲು, ಅಂತರ್ಜಲ ವೃದ್ದಿಗಾಗಿ ಪೂರ್ವ ಜರು ನಿರ್ಮಿಸಿದ ಬದುಗಳು, ಗೋಕಟ್ಟೆ ಗಳನ್ನು ಇತ್ತೀಚೆಗೆ ರೈತರು ದುರಾಸೆಯಿಂದ ನೆಲಸಮಗೊಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.ಕೂಡಲೇ ಜಾಗೃತರಾಗಿ ನೀರಿನ ಆಕರಗಳ ಸಂರಕ್ಷಿಸಿ ಜಲಮೂಲಗಳನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ಭೂಮಂಡಲದಲ್ಲಿ ಮೂರು ಭಾಗ ನೀರಿದ್ದು, ಒಂದು ಭಾಗ ಭೂಮಿ ಆವರಿಸಿದ್ದರೂ ಬಹುತೇಕ ದೇಶಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿದೆ. ಪಂಚಭೂತಗಳಲ್ಲಿ ಮೂಲ ಧಾತು ನೀರು. ಸಕಲ ಜೀವರಾಶಿಗಳಿಗೂ ಅದು ಅತ್ಯವಶ್ಯಕ. ಪ್ರಕೃತಿ ಸಂಪ ತ್ಭರಿತ ಭಾರತದಲ್ಲಿ ಜನಿಸಿದ ನಾವೇ ಪುಣ್ಯವಂತರು. ಧರ್ಮಾತೀತ, ಜಾತ್ಯತೀತ ರಾಷ್ಟ್ರದಲ್ಲಿ ಸರ್ವರೂ ಸಮನ್ವಯ ಜೀವನ ಸಾಗಿಸಿದರೆ ಸರ್ವೋದಯ ಪರಿಕಲ್ಪನೆ ಸಾಧಿಸಿದಂತೆ ಎಂದು ತಿಳಿಸಿದರು.
ಮಳೆಯಿಂದ ನಾಡು ಸಮೃದ್ದಿಯಾಗಲಿ, ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆತು ರೈತರ ಬದುಕು ಹಸನಾಗಬೇಕಿದೆ. ದಶಕಗಳ ಕನಸಿನ ಭದ್ರಾ ಮೇಲ್ದಂಡೆ ಯೋಜನೆ ಸಕಾಲದಲ್ಲಿ ಸಾಕಾರಗೊಳ್ಳದೆ ರೈತರು ವಂಚಿತರಾಗುತ್ತಿರುವುದು ಬೇಸರದ ಸಂಗತಿ ಎಂದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಬರದ ನಾಡಿನಲ್ಲಿ ಮುಂಗಾರು ಮಳೆಯಿಂದ ಕೆರೆಕಟ್ಟೆಗಳು ತುಂಬಿವೆ.ಅಂತೆಯೇ ಸಿರಿಗೆರೆ ಶ್ರೀಗಳ ಸಂಕಲ್ಪದಿಂದ ತಾಲ್ಲೂಕಿಗೆ 57ಕೆರೆತುಂಬಿಸುವ ಯೋಜನೆಯಡಿ ತಾಲೂಕಿನ ಅತಿದೊಡ್ಡ ಕೆರೆಗಳಲ್ಲೊಂದಾಗಿರುವ ದಿವಂಗತ ಇಮಾಂ ಸಾಹೇಬರು ನಿರ್ಮಿಸಿದ ಗಡಿಮಾಕುಂಟೆ ಕೆರೆಗೆ ಕಳೆದ ರಾತ್ರಿ ಪೈಪ್ ಲೈನ್ ಮೂಲಕ ನೀರು ಹರಿದಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಮೂರು ಜನ ಮುಖ್ಯಮಂತ್ರಿಗಳು, ಮೂರು ಜನ ಶಾಸಕರ ಪಕ್ಷಾತೀತ ಕಾಳಜಿಯಿಂದ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಂಡು ತಾಲ್ಲೂಕಿನ 57 ಕೆರೆಗಳಿಗೆ ನೀರು ಬಂದಿವೆ. 2008 ರಿಂದ ಎಸ್.ಟಿ ಮೀಸಲು ಕ್ಷೇತ್ರವಾದ ನಂತರ ಅಭಿವೃದ್ದಿಯತ್ತ ದಾಪುಗಾಲು ಇಟ್ಟಿದೆ.ಇದಕ್ಕೂ ಪೂರ್ವದಲ್ಲಿ ಅಷ್ಟೊಂದು ಅನುದಾನ ಬರುತ್ತಿರಲಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಮುಖಂಡರಾದ ಕೆ.ಪಿ.ಪಾಲಯ್ಯ, ಕೆ.ಬಿ.ಕಲ್ಲೇರುದ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ವಿ.ಎಸ್.ಎಸ್.ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಮುಖಂಡರಾದ ಸಿದ್ದೇಶ್, ಯು.ಜಿ.ಶಿವಕುಮಾರ್, ತಿಪ್ಪೇಸ್ವಾಮಿಗೌಡ, ಪ್ರಕಾಶ್ ರೆಡ್ಡಿ, ಪಲ್ಲಾಗಟ್ಟೆ ಶೇಖರಪ್ಪ, ಬಿ.ಮಹೇಶ್ವರಪ್ಪ, ಎಸ್.ಕೆ.ರಾಮರೆಡ್ಡಿ, ಎಂ.ಎಸ್ ಪಾಟೀಲ್, ಗುರುಸಿದ್ದನಗೌಡ, ಹರೀಶ್, ಹರೀಶ್, ಜಿ.ಬಸಪ್ಪ ಸೇರಿದಂತೆ ಇತರರು ಇದ್ದರು.