ಸರ್ಕಾರಿ ನೌಕರರಿಗೂ ಕೇಂದ್ರ ವೇತನ ಶ್ರೇಣಿಗೆ ಪ್ರಾಮಾಣಿಕ ಪ್ರಯತ್ನ

ಸರ್ಕಾರಿ ನೌಕರರಿಗೂ ಕೇಂದ್ರ ವೇತನ ಶ್ರೇಣಿಗೆ ಪ್ರಾಮಾಣಿಕ ಪ್ರಯತ್ನ

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ

ದಾವಣಗೆರೆ, ಆ. 28- ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರದ ವೇತನ ಶ್ರೇಣಿ ಕೊಡಿಸುವಲ್ಲಿ ಹೋರಾಟದ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ನಗರದ ಕುಂದುವಾಡ ರಸ್ತೆಯಲ್ಲಿರುವ ಬಂಟರ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಲೋಕಸಭಾ ಹಾಗೂ ವಿಧಾನಪರಿಷತ್ ಸದಸ್ಯರಿಗೆ ಸನ್ಮಾನ, 2023-24 ನೇ ಸಾಲಿನ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಹಾಗೂ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಳೇ ಪಿಂಚಣಿ ಮರುಸ್ಥಾಪಿಸುವ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸುವ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ನೌಕರರಲ್ಲಿ ಆತಂಕ ಬೇಡ ಎಂದರು.

ಇಡೀ ಭಾರತದಲ್ಲಿಯೇ ಅತ್ಯಂತ ಮೇಲ್ಮಟ್ಟದ, ಬಲಿಷ್ಠ ಹಾಗೂ ಕ್ರಿಯಾಶೀಲ ಸಂಘಟನೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ. ಜಿಎಸ್‌ಟಿ ಸಂಗ್ರಹದಲ್ಲಿ ಭಾರತದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ತವ್ಯದಲ್ಲಿ ಸಹ ಉನ್ನತ ಸ್ಥಾನದಲ್ಲಿ ರಾಜ್ಯ ಸರ್ಕಾರಿ ನೌಕರರು ಇದ್ದಾರೆ ಎಂದು ಹೇಳಿದರು.

ಯುಪಿಎಸ್‌ ಗೆ ಸಂಪೂರ್ಣ ವಿರೋಧವಿದೆ. ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಎನ್‌ಪಿಎಸ್‌ ಬದಲಿಗೆ ಒಪಿಎಸ್ ಆಗಬೇಕು. ಐದು ರಾಜ್ಯಗಳಲ್ಲಿ ಒಪಿಎಸ್ ಜಾರಿಗೆ ಬಂದಿದೆ ಎಂದರು. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನಹರಿಸಬೇಕು. ಸ್ವಾಭಿಮಾನಿಯಾಗಿ ಬದುಕುವುದನ್ನು ಕಲಿಯಬೇಕು. ಒಳ್ಳೆಯದಕ್ಕೆ ಮಾತ್ರ ಮೊಬೈಲ್ ಬಳಕೆ ಇರಲಿ ಎಂದು ಕರೆ ನೀಡಿದರು.

ರಾಜ್ಯದ ಆರು ಲಕ್ಷ ಸರ್ಕಾರಿ ನೌಕರರ ಸಮಸ್ಯೆಗಳನ್ನು ಗುರುತಿಸಿ, ಅವುಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದು, ಶೇ. 98 ರಷ್ಟು ಬೇಡಿಕೆಗಳನ್ನು ಈಗಾಗಲೇ ಈಡೇರಿಸುವಲ್ಲಿ ಮುಂದಾಗಿರುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಶಿವಮೊಗ್ಗದ ಡಾ. ಧನಂಜಯ ಸರ್ಜಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಬೆನ್ನಟ್ಟಿ ಹೋಗುವುದು ಸರಿಯಲ್ಲ. `ಓದು ಒಕ್ಕಾಲು ಬುದ್ದಿ ಮುಕ್ಕಾಲು’ ಎನ್ನುವಂತೆ ಪಠ್ಯೇತರ ಚಟವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆ, ಸಂಗೀತ, ನಾಟಕ, ನೃತ್ಯ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಿದುಳು ಕ್ರಿಯಾಶೀಲವಾಗಿರುತ್ತದೆ ಎಂದರು.

ಶಿಕ್ಷಣದ ಪ್ರಗತಿಗೆ ಅಂಕಗಳಿಕೆ ಬೇಕು. ಆದರೆ ಅದೇ ಮುಖ್ಯವಾಗಿರಬಾರದು. ಓದಿನ ಜೊತೆಗೆ ಇತರೆ ಪಠ್ಯೇತರ ಚಟುವಟಿಕೆಗಳನ್ನು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಶಿಸ್ತು, ಬಡತನ, ಹಣದ ಮಹತ್ವದ ಬಗ್ಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು `ಎಸ್‌ಕ್ಯೂಆರ್‌ಆರ್ಆರ್’ ಪದ್ಧತಿಯಲ್ಲಿ ಓದು, ಮನನ ಮತ್ತು ಸ್ಮರಣೆ ವಿಧಾನ ಅನುಸರಿಸಿದರೆ ಅಧ್ಯಯನ ಸುಲಭವಾಗುತ್ತದೆ. ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದರು.

ಮರೆವು ದೇವರು ಕೊಟ್ಟ ವರ.  ಆದರೆ ಜೀವನದ ಕಹಿ ಘಟನೆಗಳನ್ನು ಮರೆಯದಿದ್ದರೆ ಮತ್ತಷ್ಟು ಮಾನಸಿಕ ತುಮುಲ ಹೆಚ್ಚಾಗುತ್ತದೆ. ಕೆಟ್ಟದ್ದನ್ನು ಮರೆಯಬೇಕು. ಒಳ್ಳೆಯದನ್ನು  ನೆನಪಿನಲ್ಲಿಟ್ಟು ಕೊಳ್ಳಬೇಕೆಂಬ ಪ್ರಜ್ಞೆ ಕೂಡ ಇರಬೇಕೆಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಸರ್ಕಾರಿ ನೌಕರರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನೌಕರರು ಚನ್ನಾಗಿದ್ದರೆ ಕಚೇರಿ ಚನ್ನಾಗಿರುತ್ತದೆ. ಸಾರ್ವಜನಿಕರಿಗೂ ಅನುಕೂಲಕರ ವಾತಾವರಣ ಒದಗಿಸಿದಂತಾಗುತ್ತದೆ ಎಂದರು.

ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್.ಒಡೇನಪುರ ಮಾತನಾಡಿ, ಸಿ ಅಂಡ್ ಆರ್ ತಿದ್ದುಪಡಿ ಅಗತ್ಯವಿದೆ. ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ ಅವಶ್ಯವಿದೆ. ಜನಪ್ರತಿನಿಧಿಗಳು ಸಹ ನೌಕರರ ಪರ ನಿಲ್ಲುತ್ತಾರೆಂಬ ವಿಶ್ವಾಸ ನಮ್ಮದಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿದರು.

ಸಂಘದ ರಾಜ್ಯ ಪದಾಧಿಕಾರಿಗಳಾದ ಶ್ರೀನಿವಾಸ ತಿಮ್ಮೇಗೌಡ, ಡಾ. ಎಸ್. ಸಿದ್ದರಾಮಣ್ಣ, ಮಲ್ಲಿಕಾರ್ಜುನ ಬಿ. ಬಳ್ಳಾರಿ, ಎಸ್. ಬಸವರಾಜು, ಜಿಲ್ಲಾ ಪದಾದಿಕಾರಿಗಳಾದ ಸಿ. ಗುರುಮೂರ್ತಿ, ಬಿ.ಆರ್. ತಿಪ್ಪೇಸ್ವಾಮಿ, ಬಿ.ಪಾಲಾಕ್ಷಿ, ಮಂಜಮ್ಮ, ಶಿವಾನಂದ ದಳವಾಯಿ, ಸಿ. ಪರಶುರಾಮಪ್ಪ, ಸಿ.ಬಿ. ನಾಗರಾಜ್, ಎಂ.ಜೆ. ಶಶಿಧರ, ಎಸ್. ಸಂತೋಷ್, ಎಂ.ವಿ. ರವಿ, ವಿಜಯ ಮಹಾಂತೇಶ್, ಕೆ.ಎಂ. ಹೆಚ್. ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ಇದೇ ವೇಳೆ ಸರ್ಕಾರಿ ನೌಕರರ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂ. ನಗದು ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. 

error: Content is protected !!