ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆಗೆ ಖಂಡನೆ

ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆಗೆ ಖಂಡನೆ

ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್  ಭೇಟಿ, ಬಾಪೂಜಿ ಆಸ್ಪತ್ರೆ ಬಳಿಯ ಗೂಡಂಗಡಿಗಳನ್ನು ರಾತ್ರಿ 10 ಗಂಟೆಗೆ ಮುಚ್ಚಿಸಲೂ ಸೂಚನೆ

ರಕ್ಷಣೆಗೆ ಆಗ್ರಹಿಸಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಂದ ಧರಣಿ, ಸತ್ಯಾಗ್ರಹ

ದಾವಣಗೆರೆ, ಆ.26- ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ಸಂಶೋಧನಾಕೇಂದ್ರ ಮತ್ತು ಬಾಪೂಜಿ ರಕ್ತನಿಧಿ ಕೇಂದ್ರದ ಮುಂಭಾಗ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹ ನಡೆಸಿದರು.

ಶುಕ್ರವಾರ ಮಧ್ಯ ರಾತ್ರಿ ರವಿಕುಮಾರ್ ಎಂಬುವರು ತನ್ನ ತಾನ್ವಿ ಎಂಬ ನಾಲ್ಕು ವರ್ಷದ ಮಗಳನ್ನು ಅನಾರೋಗ್ಯದ ನಿಮಿತ್ಯ ಬಾಪೂಜಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಗ್ಯದಲ್ಲಿ ತೀವ್ರ ಏರುಪೇರು ಆದಾಗ ತಕ್ಷಣ ಕರ್ತವ್ಯ ನಿರತ ವೈದ್ಯರು ತೀವ್ರ ನಿಗಾ ಘಟಕ (ಐಸಿಯು)ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಇದರಿಂದ ಕುಪಿತಗೊಂಡ ಮಗುವಿನ ತಂದೆ ರವಿಕುಮಾರ್ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆ ಹಿನ್ನೆಲೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ನೀಡಿದ ದೂರಿನನ್ವಯ ರವಿಕುಮಾರ್ ಅವರನ್ನು ಬಂಧಿಸಿದ್ದಾರೆ. 

ನಂತರ ಬೇಲ್ ಮೇಲೆ ಬಿಡುಗಡೆ ಕೂಡ ಆಗಿದ್ದಾರೆ. ಆದರೂ ವೈದ್ಯರು ನಮಗೆ ಸೂಕ್ತ ರಕ್ಷಣೆ ಇಲ್ಲ. ಕೂಡಲೇ ರಕ್ಷಣೆ ಭರವಸೆ ನೀಡಬೇಕು. ಆರೋಪಿಗೆ ಸರಿಯಾದ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಮುಂದಿನ ಸೂಕ್ತ ರಕ್ಷಣೆಯ ಭರವಸೆ ಸಿಗುವವರೆಗೂ ನಾಳೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಧರಣಿ ಮುಂದುವರೆಸುವುದಾಗಿ ಪ್ರತಿಭಟನಾನಿರತರು ತಿಳಿಸಿದರು. ಇಂದು ಬಾಪೂಜಿ ಮಕ್ಕಳ ಆಸ್ಪತ್ರೆಯ ಓಪಿಡಿ ಬಂದ್ ಮಾಡುವ ಮೂಲಕ ಧರಣಿ ಸತ್ಯಾಗ್ರಹದಿಂದ ರೋಗಿಗಳಿಗೆ ತುಸು ಅಡಚಣೆ ಉಂಟಾಯಿತು.

ಸ್ಥಳಕ್ಕೆ ಆಗಮಿಸಿದ ಎಸ್ಪಿ ಉಮಾ ಪ್ರಶಾಂತ್ ಅವರು ವೈದ್ಯರ ರಕ್ಷಣೆ ಹಿನ್ನೆಲೆಯಲ್ಲಿ ಆಸ್ಪತ್ರೆ ಎದುರಿಗಿರುವ ಗೂಡಂಗಡಿಗಳನ್ನು ರಾತ್ರಿ 10 ಗಂಟೆಗೆ ಮುಚ್ಚಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

error: Content is protected !!