ವಿವಿಧ ಕಟ್ಟಡಗಳ ಲೋಕಾರ್ಪಣೆಯಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಅಭಿಮತ
ಮಲೇಬೆನ್ನೂರು, ಆ.23- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ದೇವ ಸ್ಥಾನದ ಟ್ರಸ್ಟ್ ವತಿಯಿಂದ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಆರಂ ಭಿಸಲು ಯೋಜನೆ ರೂಪಿಸಿ ಎಂದು ಹಳೇಬೀಡು ಪುಷ್ಪಗಿರಿ ಮಹಾ ಸಂಸ್ಥಾನದ ಶ್ರೀ ಸೋಮಶೇಖರ ಶಿವಾ ಚಾರ್ಯ ಸ್ವಾಮೀಜಿ ಟ್ರಸ್ಟ್ ಪದಾಧಿ ಕಾರಿಗಳಿಗೆ ಸಲಹೆ ನೀಡಿದರು.
ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಗದ್ದಿಗೆಯ ನೂತನ ಅಭಿವೃದ್ಧಿ ಕಟ್ಟಡಗಳ ಲೋಕಾರ್ಪಣೆ ಹಾಗೂ ಸರ್ವ ಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದ ದಿವ್ಯ ನೇತೃತ್ವ ವಹಿಸಿ, ಆಶೀರ್ವಚನ ನೀಡಿದರು.
ಭಕ್ತರು ನೀಡಿದ ಕಾಣಿಕೆ ಹಣದಲ್ಲೇ ಭಕ್ತರಿಗಾಗಿ ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತಾ ಬಂದಿರುವ ಟ್ರಸ್ಟ್ ಕಮಿಟಿಯವರು, ಈ ಭಾಗದ ಜನರಿಗಾಗಿ ಕೂಡಲೇ ಉಚಿತ ಅಂಬುಲೆನ್ಸ್ ಸೇವೆ ಆರಂಭಿಸ ಬೇಕೆಂದು ಸ್ವಾಮೀಜಿ ಹೇಳಿದರು.
ಮಠ – ಮಂದಿರಗಳಿಗೆ ಭಕ್ತರೇ ಆಸ್ತಿಯಾಗಿದ್ದು, ಉಕ್ಕಡಗಾತ್ರಿಗೆ ಭಕ್ತರು ಮತ್ತು ತುಂಗಾಭದ್ರೆಯಿಂದ ಬಲ ಬಂದಿದ್ದು, ಸುಕ್ಷೇತ್ರವಾಗಿ ಬೆಳೆಯಲು ಅಜ್ಜಯ್ಯನ ಪವಾಡಗಳು ಕಾರಣವಾಗಿವೆ.
`ನಾನು’ ಎಂಬ ಅಹಂಕಾರ ತೊರೆದು, `ನಾವು’ ಎಂಬ ಭಾವನೆ ಬೆಳೆಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಗುರುವಿಗೆ ನಿಜವಾದ ಭಕ್ತಿಯನ್ನು ಅರ್ಪಿಸಿದಾಗ ಸಂಕಷ್ಟಗಳ ನಿವಾರಣೆ ಸಾಧ್ಯ ಎಂದು ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರೀ ಆದಿಯೋಗಿ ಶಿವ ಶಿಲಾಮೂರ್ತಿ ಉದ್ಘಾಟಿಸಿದ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತ ನಾಡಿ, ಯೋಗಿ, ತಪಸ್ವಿ, ತ್ರಿಕಾಲ ಲಿಂಗ ಪೂಜಾ ನಿಷ್ಠವಾದ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನವರಿಂದಾಗಿ ಉಕ್ಕಡಗಾತ್ರಿ ಪಾಪಮುಕ್ತ ಹಾಗೂ ಅವಿಮುಕ್ತ ಮತ್ತು ಮಧ್ಯಕರ್ನಾಟಕದ ಸುಕ್ಷೇತ್ರವಾಗಿ ಬೆಳೆದಿದೆ ಎಂದರು.
ಕ್ಷೇತ್ರಕ್ಕೆ ಬರುವ ಭಕ್ತರು ನಿಮ್ಮ ಮನಸ್ಸಿನ ಮೈಲಿಗೆಯನ್ನು ಬಿಟ್ಟು ಹೋಗಬೇಕೇ ಹೊರೆತು ನಿಮ್ಮ ಹಳೆಯ ಬಟ್ಟೆಗಳನ್ನಲ್ಲ ಎಂದು ವಚನಾನಂದ ಸ್ವಾಮೀಜಿ ಹೇಳಿದರು.
ಮಡಿವಾಳ ಮಾಚಿದೇವ ಗುರುಪೀಠದ ಮಾಚಿದೇವ ಸ್ವಾಮೀಜಿ, ಗುಬ್ಬಿ ತಾ. ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಕೊಡಿಯಾಲ ಹೊಸಪೇಟೆಯ ಪುಣ್ಯ ಕೋಟಿ ಮಠದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಮಾತನಾಡಿದರು.
ಆದಿಚುಂಚನಗಿರಿ ಕ್ಷೇತ್ರದ ಶಿವಮೊಗ್ಗ ಶಾಖಾಮಠದ ಶ್ರೀ ಸಾಯಿನಾಥ ಸ್ವಾಮೀಜಿ ಮಾತನಾಡಿ, ಪಾಪಗಳ ನಿವಾರಣಾ ಕೇಂದ್ರವಾಗಿರುವ ಉಕ್ಕಡಗಾತ್ರಿಗೆ ಬಂದು ಅಜ್ಜಯ್ಯನ ಗದ್ದಿಗೆ ದರ್ಶನ ಮಾಡಿದರೆ, ಪಾಪಗಳು ದೂರವಾಗಿ ಪುಣ್ಯ ಪ್ರಾಪ್ತಿ ಆಗುತ್ತದೆ ಎಂದರು.
ಯಲವಟ್ಟಿ ಗುರು ಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಮಾತನಾಡಿ, ತಮ್ಮ ಬದುಕಿನ ಸಾರ್ಥಕತೆಯನ್ನು ಭಕ್ತರಿಗಾಗಿ ಮೀಸಲಟ್ಟಿರುವ ಸಿದ್ಧಾರೂಢರು ಮತ್ತು ಕರಿಬಸವೇಶ್ವರ ಅಜ್ಜಯ್ಯನವರು ಜೀವಂತ ದೇವರಾಗಿದ್ದಾರೆ ಎಂದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು, ದಾಂಪತ್ಯ ಜೀವನ್ಕೆ ಕಾಲಿಟ್ಟ20 ಜೋಡಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.
ತುಮ್ಮಿನಕಟ್ಟೆ ಪದ್ಮಸಾಲಿ ಪೀಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಚಿಕ್ಕಮಗಳೂರು ತಾ. ಕರಡಿ ಗವಿಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಅರಸೀಕೆರೆ ತಾ. ಕೊಳಗುಂದದ ಕೇದಿಗೆ ಮಠಾಧ್ಯಕ್ಷ ಶ್ರೀ ಜಯ ಚಂದ್ರಶೇಖರ ಸ್ವಾಮೀಜಿ, ಲಿಂದಹಳ್ಳಿ ಮಠದ ಶ್ರೀ ವೀರಭದ್ರ ಸ್ವಾಮೀಜಿ, ಯಳನಾಡು ಸಂಸ್ಥಾನದ ಶ್ರೀ ಜ್ಞಾನ ಪ್ರಭು ಸಿದ್ಧಾರಾಮ ದೇಶೀಕೇಂದ್ರ ಸ್ವಾಮೀಜಿ, ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತಿಪಟೂರಿನ ಗುರುಕುಲಾನಂದ ಆಶ್ರಮದ ಶ್ರೀ ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ನೂತನ ವಧು-ವರರಿಗೆ ಮಾಂಗಲ್ಯ ವಿತರಿಸಿ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು, ಉಕ್ಕಡಗಾತ್ರಿ ಸಂಪರ್ಕಿಸುವ ಪ್ರಮುಖ ಎರಡು ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮತ್ತು ಹೊಸ ಸೇತುವೆ ನಿರ್ಮಾಣಕ್ಕೆ ಸಚಿವರಾದ ಸತೀಶ್ ಜಾರಕಿಹೊಳಿ, ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮೇಲೆ ಒತ್ತಡ ಹಾಕುತ್ತೇನೆಂದರು.
ಶ್ರೀ ಗುರು ಕರಿಬಸವೇಶ್ವರ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ವಾಸನದ ಜಿ.ನಂದಿಗೌಡ್ರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಗಾ.ಪ್ರಂ ಅಧ್ಯಕ್ಷೆ ಭಾರಿ ಸಿದ್ದೇಶ್, ಉಪಾಧ್ಯಕ್ಷೆ ಗೀತಾ ಸಂಜೀವರೆಡ್ಡಿ, ಗದ್ದಿಗೆ ಟ್ರಸ್ಟ್ ಕಮಿಟಿಯ ನಾಗರಾಜ್ ದಿಲ್ಲಿವಾಲ, ಪ್ರಕಾಶ್ ಕೋಟೇರ್, ಬಸವರಾಜ್ ಪಾಳ್ಯದ್, ಹೆಚ್.ವೀರನಗೌಡ, ವಿವೇಕಾನಂದ ಪಾಟೀಲ್, ಗದಿಗೆಪ್ಪ ಹೊಸಳ್ಳಿ, ಗದಿಗೆಯ್ಯ ಪಾಟೀಲ್ ಮತ್ತು ಗೋವಿನಹಾಳ್ ರಾಜಣ್ಣ, ವಕೀಲ ನಂದಿತಾವರೆ ತಿಮ್ಮನಗೌಡ, ಯುವ ಕಲಾವಿದ ಅಜೇಯ್, ಮಂಜು ದೊಡ್ಮನಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಗದ್ದಿಗೆ ಟ್ರಸ್ಟ್ ಕಮಿಟಿಯ ಜಿಗಳಿ ಇಂದೂಧರ್ ಸ್ವಾಗತಿಸಿದರು. ಪ್ರಾಧ್ಯಾಪಕ ದಾವಣಗೆರೆಯ ಜೋಷಿ ನಿರೂಪಿಸಿದರೆ, ಕ್ಯಾಷಿಯರ್ ಗಣೇಶ್ ವಂದಿಸಿದರು.