ಪಡಿತರ ಚೀಟಿ ತಿದ್ದುಪಡಿಗೆ ‘ಸರ್ವರ್ ಬ್ಯುಸಿ’ ಸಮಸ್ಯೆ

ಹರಿಹರ, ಜ. 10- ನಗರದ ತಹಶೀಲ್ದಾರ್ ಕಚೇರಿಗೆ ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ಅಗಮಿಸುವ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಕಂಪ್ಯೂಟರ್‌ನಲ್ಲಿ ಸರ್ವರ್ ಬ್ಯುಸಿ ( ತಾಂತ್ರಿಕ ದೋಷ) ಸಮಸ್ಯೆ ಕಾಡುತ್ತಿದೆ.

ನಗರದ ತಹಶೀಲ್ದಾರ್ ಕಚೇರಿಯಲ್ಲಿ ಪಡಿತರ ಚೀಟಿ ತಿದ್ದುಪಡಿ ಮಾಡಲು ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ಮಾತ್ರ ಸಮಯ ನಿಗದಿ ಮಾಡಿದೆ. ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸುವ ಸಾರ್ವಜನಿಕರಿಗೆ ಈ ನಿರ್ಬಂಧ ಸಮಸ್ಯೆಯಾಗಿದೆ. ಕೇವಲ 6 ರಿಂದ 10 ಕಾರ್ಡುಗಳನ್ನು ಮಾತ್ರ ತಿದ್ದುಪಡಿ ಮಾಡುವುದರೊಳಗೆ ಸಿಸ್ಟಮ್ ಬ್ಯುಸಿ ಎಂದು ಪಡಿತರ ಚೀಟಿಯ ತಿದ್ದುಪಡಿ ಮಾಡುವುದನ್ನು ಸ್ಥಗಿತ ಗೊಳಿಸಲಾಗುತ್ತದೆ.

ಗ್ರಾಮಾಂತರ ಭಾಗದ ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ತಾಲ್ಲೂಕು ಕಚೇರಿಗೆ ಬಂದರೂ, ತಿದ್ದುಪಡಿ ಕಾರ್ಯ ಪೂರ್ಣವಾಗದೇ ನಿರಾಸೆಯಿಂದ ವಾಪಸ್ಸಾಗುವಂತಾಗಿದೆ.

ಈ ಸಮಸ್ಯೆ ಬಗ್ಗೆ ಮಾತನಾಡಿರುವ ಹಿಂಡಸಘಟ್ಟೆ ಚಂದ್ರಶೇಖರ್, ಮೂರು ದಿನಗಳಿಂದ ತಿದ್ದುಪಡಿಗೆ ಅಲೆದಾಡುತ್ತಿದ್ದೇವೆ. ಯಾವಾಗ ಬಂದರೂ ಸರ್ವರ್ ಸಮಸ್ಯೆ ಎಂದು ಹೇಳುತ್ತಿದ್ದಾರೆ ಎಂದರು.

ಬೆಳಿಗ್ಗೆ ಗ್ರಾಮದಿಂದ ಬಂದು ಸರತಿಯಲ್ಲಿ ಊಟಕ್ಕೆ, ಶೌಚಾಲಯಕ್ಕೂ ಸಹ ಹೋಗದೆ ನಿಂತರೂ ಸಹ ಪಡಿತರ ಚೀಟಿಯ ತಿದ್ದುಪಡಿ ಮಾಡಿಸುವುದಕ್ಕೆ ಆಗುತ್ತಿಲ್ಲ. ನಮ್ಮಿಂದ ಸಮಸ್ಯೆಯಿಲ್ಲ, ಸರ್ವರ್ ಬ್ಯುಸಿ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ ಎಂದರು. ಒಂದು ದಿನಕ್ಕೆ ಬಂದು ಹೋಗಲು 200 ರೂ. ಖರ್ಚಾಗುತ್ತದೆ. ನಾಲ್ಕು ದಿನ ಬಂದಿರುವುದಕ್ಕೆ ಎಂಟು ನೂರು ರೂ.ಖರ್ಚಾಗಿದೆ. ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಕಮಲಾಪುರದ ನೇತ್ರಾವತಿ ಮಾತನಾಡಿ, ಎರಡು ದಿನಗಳಿಂದ ಅಲೆದಾಡುತ್ತಿದ್ದೇನೆ. ಇನ್ನೇನು ನಮ್ಮ ಸರದಿ ಬಂತು ಎನ್ನುವಷ್ಟರಲ್ಲಿ, ಸರ್ವರ್ ಬ್ಯುಸಿ ನಾಳೆ ಬನ್ನಿ ಎಂದು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪುರುಷರು ಮತ್ತು ಮಹಿಳೆಯರು ಒಂದೇ ಸಾಲಿನಲ್ಲಿ ನಿಲ್ಲಬೇಕಿದೆ. ಮಹಿಳೆಯರಿಗೆ ಪ್ರತ್ಯೇಕ ಸಾಲು ರೂಪಿಸಬೇಕು. ಸಾರ್ವಜನಿಕರಿಗೆ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಬೇಕು ಎಂದವರು ಹೇಳಿದ್ದಾರೆ.

error: Content is protected !!