ಪೋಕ್ಸೋ ಕಾಯ್ದೆ : ಸಂತ್ರಸ್ತರಿಗೆ ತ್ವರಿತ ನ್ಯಾಯ, ಸೌಲಭ್ಯ

ಪೋಕ್ಸೋ ಕಾಯ್ದೆ : ಸಂತ್ರಸ್ತರಿಗೆ ತ್ವರಿತ ನ್ಯಾಯ, ಸೌಲಭ್ಯ

ಅಧಿಕಾರಿಗಳಿಗೆ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಸೂಚನೆ

ದಾವಣಗೆರೆ,ಆ.21- ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಸಂತ್ರಸ್ತರಿಗೆ ತುರ್ತು ಮತ್ತು ಮಧ್ಯಂತರ ಪರಿಹಾರ ಸೇರಿದಂತೆ ಅವರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಗರಿಷ್ಠ ಪ್ರಮಾಣದಲ್ಲಿ ಸಿಗಬೇಕು ಮತ್ತು ಅವರಿಗಿರುವ ಕಾನೂನಿನ ಅವಕಾಶಗಳ ಮಾಹಿತಿ ದೊರಕಿಸಲು ಇಲಾಖೆ ಮುಂದಾಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು. 

ಅವರು ಜಿಲ್ಲಾ ನ್ಯಾಯಾಲಯದ ಸಭಾಂಗಣ ದಲ್ಲಿ ನಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಿವಿಧ ಇಲಾಖೆ ಅಧಿಕಾರಿಗಳ ದ್ವೈ ಮಾಸಿಕ ಸಭೆ, ಪೋಕ್ಸೋ, ಜಿಲ್ಲಾ ವಿಶೇಷ ಕಾರ್ಯಪಡೆ, ಬಾಲ ನ್ಯಾಯ ಸಮಿತಿ, ಮಾನವ ಕಳ್ಳಸಾಗಣೆ ತಡೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೋಕ್ಸೋ ಕಾಯಿದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ತ್ವರಿತ ನ್ಯಾಯದ ಜೊತೆಗೆ ಎಲ್ಲಾ ಸೌಲಭ್ಯಗಳು ದೊರಕುವಂತಾಗಬೇಕು.‌ ಮತ್ತು ಮಕ್ಕಳಿಗೆ ತಮ್ಮ ರಕ್ಷಣಾ ಕಾಯ್ದೆಗಳು ಸೇರಿದಂತೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಅರಿವು ಮೂಡಿಸಲು ನುರಿತ ವಕೀಲರ ತಂಡಗಳನ್ನು ರಚಿಸಿ ಶಾಲೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಬಾಲ ನ್ಯಾಯ ಮಂಡಳಿಗೆ ಸಭೆಗಳನ್ನು ನಡೆಸಲು ಸುಸಜ್ಜಿತವಾದ ಸಭಾಂಗಣದ ಕೊರತೆ ನೀಗಿಸಲು ಜಿಲ್ಲಾಡಳಿತ ಮುಂದಾಗಿದ್ದು ಇದು ಆಶಾದಾಯಕ ಬೆಳವಣಿಗೆಯಾಗಿದೆ. ಜಿಲ್ಲೆಗೆ ಇತರೆ ರಾಜ್ಯಗಳಿಂದ ಉದ್ಯೋಗ ಹರಸಿ ಇಲ್ಲಿಗೆ ಚಿಕ್ಕ ಮಕ್ಕಳೊಂದಿಗೆ ವಲಸೆ ಬಂದಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಇದಕ್ಕಾಗಿ ಮಕ್ಕಳು ಕಲಿಕೆಯಿಂದ ಹೊರಗುಳಿಯ ಬಾರದೆಂದು ವಾಹನದ ಮೂಲಕ ಮೊಬೈಲ್ ಶಾಲೆ ಆರಂಭಿಸಲು  ಮುಂದಾಗಿದೆ. ಇದರಿಂದ ವಲಸಿಗರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸುವ ರಚನಾತ್ಮಕ ಕಾರ್ಯಕ್ರಮವಾಗಿದೆ ಎಂದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿನ ಅಂಗನವಾಡಿ, ಹಾಸ್ಟೆಲ್ ಸುಧಾರಣೆಗಾಗಿ ನಾನು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಸೇರಿ ಜಂಟಿ ಸುತ್ತೋಲೆಗಳ ಮೂಲಕ ನಿರ್ದೇಶನ ನೀಡಲಾಗಿದೆ. ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನೀಗಿಸಲು ಮತ್ತು ಔಷಧ ಪೂರೈಕೆಗೆ ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುತ್ತದೆ. ಜನನ ಮತ್ತು ಮರಣ ನೋಂದಣಿಯಲ್ಲಾಗುತ್ತಿರುವ ಲೋಪಗಳನ್ನು ಸರಿಪಡಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇದ್ದ ಗೌರವಧನ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದ್ದು ಹಲವು ಸುಧಾರಣಾ ಕ್ರಮ ಕೈಗೊಳ್ಳಲಾಗಿದ್ದು ಸಾರ್ವಜನಿಕ ದೃಷ್ಟಿಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದರು. 

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರಣ್ಣವರ ಮಾತನಾಡಿ, ಪೋಕ್ಸೋ ಪರಿಹಾರ, ಬಾಲ ನ್ಯಾಯದಾನ, ಮಕ್ಕಳಿಗೆ ಕಾನೂನು ಅರಿವು, ಹಾಸ್ಟೆಲ್, ಅಂಗನವಾಡಿಗಳ ಸುಧಾರಣೆ, ಡೆಂಗ್ಯು ಚಿಕಿತ್ಸೆ ಸಕಾಲದಲ್ಲಿ ಸಿಗಬೇಕೆಂದು ತಿಳಿಸಿ, ಜನನ ಮತ್ತು ಮರಣ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಬಂದಾಗ ಇಲ್ಲಿ ನಡೆಯುವ ಪ್ರಕ್ರಿಯೆಗಳ ಕುರಿತು ಗಮನ ಸೆಳೆದರು. 

ಸಭೆಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ್, ಪಾಲಿಕೆ ಆಯುಕ್ತೆ ರೇಣುಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸರ್ಕಾರಿ ಅಭಿಯೋಜಕರು ಉಪಸ್ಥಿತರಿದ್ದರು.

error: Content is protected !!