ನಾಟಕೋತ್ಸವದ ಉದ್ಘಾಟನೆಯಲ್ಲಿ ಜಿ.ಬಿ. ವಿನಯ್ ಕುಮಾರ್ ವ್ಯಾಕುಲತೆ
ದಾವಣಗೆರೆ, ಆ. 21 – ಡಾ. ಚಂದ್ರಶೇಖರ್ ಕಂಬಾರ್ ಅವರ ಬೋಳೆಶಂಕರ ನಾಟಕವನ್ನು ಪ್ರಸ್ತುತ ಪಡಿಸುವುದರ ಮೂಲಕ ಮಕ್ಕಳಲ್ಲಿ ಅದ ರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿ ಗಳಲ್ಲಿ ಕಲೆ ಮತ್ತು ರಂಗಕಲೆಯ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಶ್ಲ್ಯಾ ಘನೀಯ ಎಂದು ಇನ್ಸ್ಸೈಟ್ಸ್ ಐಎಎಸ್, ಐಪಿಎಸ್ ತರಬೇತಿ ಕೇಂದ್ರದ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ಅನ್ವೇಷಕರು ಆರ್ಟ್ಸ್ ಫೌಂಡೇಷನ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರ ಸಹಕಾರದೊಂದಿಗೆ 6ನೇ ಶೈಕ್ಷಣಿಕ ರಂಗ ಯಾತ್ರೆಯನ್ನು ಪದವಿ ಪೂರ್ವ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಡಾ. ಚಂದ್ರಶೇಖರ್ ಕಂಬಾರ್ ಅವರ ‘ಬೋಳೆಶಂಕರ’ ನಾಟಕವನ್ನು ವಿನ್ಯಾಸಿಸಿ ನಿರ್ದೇಶಿಸಿದ ಎಸ್.ಎಸ್. ಸಿದ್ದರಾಜು ಅವರ ಎರಡು ದಿನದ ನಾಟಕೋತ್ಸವವನ್ನು ಉದ್ದೇಶಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ನಗರಗಳಲ್ಲಿ ಅಥವಾ ಹಳ್ಳಿಗಳಲ್ಲಿ ಕಲೆ, ಸಾಹಿತ್ಯ ಇವುಗಳ ಮೇಲೆ ಹೆಚ್ಚಿನ ಆಸಕ್ತಿ ಬರುವ ಹಾಗೆ ಈ ರೀತಿಯ ಹೆಚ್ಚು ಕಾರ್ಯಕ್ರಮಗಳನ್ನು ಆಗಾಗ್ಗೆ ಹಮ್ಮಿಕೊಳ್ಳಬೇಕು. ಇಂದಿನ ಯುವ ಜನಾಂಗದಲ್ಲಿ ಕಲೆ, ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವುದರ ಜೊತೆಗೆ ಸಾಮಾಜಿಕ ಕಳಕಳಿ ಹಾಗೂ ರಾಜಕೀಯ ಪ್ರಜ್ಞೆ ಮೂಡಿಸುವುದು ಕೂಡ ಅನಿವಾರ್ಯತೆ ಇದೆ ಎಂದರು.
ಕಲೆಯನ್ನು ಒಂದು ಮಾಧ್ಯಮವಾಗಿ ಉಪಯೋಗಿಸಿಕೊಂಡು ಅದರಲ್ಲೂ ಬೀದಿ ನಾಟಕಗಳ ಮೂಲಕ ಹಾಗೂ ನಾಟಕದ ವಸ್ತುವಾಗಿ ರಾಜಕೀಯ ವಿಷಯವನ್ನು ತೆಗೆದುಕೊಂಡು, ಹೆಚ್ಚಿನದಾಗಿ ಹೇಗೆ ಹೊಸಬರು ರಾಜಕೀಯದಲ್ಲಿ ಪ್ರವೇಶ ಮಾಡಬಹುದು, ಯಾಕೆ ಅವರು ಮಾಡಬೇಕು ಜೊತೆಗೆ ಈಗಿನ ದಿನಗಳಲ್ಲಿ ಮೌಲ್ಯಾಧಾರಿತ ರಾಜಕಾರಣ ನಶಿಸಿ ಹೋಗುತ್ತಿದ್ದು, ಅದರ ವಿರುದ್ಧ ಏಕೆ ನಾವು ಧ್ವನಿ ಎತ್ತಬೇಕು, ಯಾಕೆ ನಾವು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳಬೇಕು, ಇವುಗಳನ್ನೂ ಕೂಡ ನಾಟಕಗಳಿರಬಹುದು ಅಥವಾ ಇನ್ಯಾವುದೇ ಕಲೆಗಳಿರಬಹುದು ಅದರ ಮೂಲಕ ನಾವು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ವೃತ್ತಿರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸರ್ ಎಂ.ವಿ. ವಿಜ್ಞಾನ ಪದವಿ ಪೂರ್ವ ಕಾಲೇಜು ಕಾರ್ಯದರ್ಶಿ ಎಸ್.ಜೆ. ಶ್ರೀಧರ್, ದಿ ಟೀಮ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಕೆ. ಎಂ ಮಂಜಪ್ಪ, ಶಾಲ ಶಿಕ್ಷಣ (ಪದವಿ ಪೂರ್ವ) ಇಲಾಖೆ ಉಪ ನಿರ್ದೇಶಕ ಎಸ್.ಜಿ. ಕರಿಸಿದ್ದಪ್ಪ ಉಪಸ್ಥಿತರಿದ್ದರು.