ನಾನು ಅಭಿವೃದ್ಧಿ ಪುಸ್ತಕ ಬಿಡುಗಡೆ ಮಾಡುವೆ, ನಿಮ್ಮ ದಾಖಲೆ ತೋರಿಸಿ

ನಾನು ಅಭಿವೃದ್ಧಿ ಪುಸ್ತಕ ಬಿಡುಗಡೆ ಮಾಡುವೆ, ನಿಮ್ಮ ದಾಖಲೆ ತೋರಿಸಿ

ವಿಪಕ್ಷ ನಾಯಕರಿಗೆ ಹರಿಹರ ಶಾಸಕ ಎಸ್. ರಾಮಪ್ಪ ಸವಾಲು

ಹರಿಹರ, ಜ. 11 – ನಾನು ಕೆಲಸ ಮಾಡಿಲ್ಲ ಎಂದು ಹೇಳುವ ವಿರೋಧ ಪಕ್ಷದ ನಾಯಕರು, ತಮ್ಮ ಅವಧಿಯಲ್ಲಿ ಎಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ ಎಂಬ ದಾಖಲೆ ತೋರಿಸಲಿ. ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಕುರಿತ ಪುಸ್ತಕವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ಎಸ್. ರಾಮಪ್ಪ ಸವಾಲು ಹಾಕಿದ್ದಾರೆ.

ನಗರದ ಬೆಂಕಿನಗರದ 23-24 ನೇ ವಾರ್ಡಿನಲ್ಲಿ ಎಸ್.ಎಫ್.ಸಿ. ವಿಶೇಷ ಅನುದಾನ 2 ಕೋಟಿ ಮತ್ತು ನಗರೋತ್ಥಾನ ಅಡಿಯಲ್ಲಿ 36 ಲಕ್ಷ ರೂಪಾಯಿ ಚರಂಡಿ, ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ವಿರೋಧ ಪಕ್ಷದವರು ತಮ್ಮ ಪಕ್ಷಕ್ಕೆ ಸೇರುವಂತೆ 10 ಕೋಟಿ ರೂಪಾಯಿ ಹಣವನ್ನು ನನ್ನ ಮನೆಗೆ ತಂದು ಕೊಡುವುದಕ್ಕೆ ಮುಂದಾಗಿದ್ದರು. ಜೊತೆಗೆ ಇನ್ನೂ 20 ಕೋಟಿಯನ್ನು ಮುಂದಿನ ದಿನಗಳಲ್ಲಿ ಕೊಡುವುದಾಗಿ ಹೇಳಿದ್ದರು. ಆದರೆ, ನಾನು ಹಣಕ್ಕೆ ಆಸೆ ಪಡಲಿಲ್ಲ ಎಂದು ರಾಮಪ್ಪ ಹೇಳಿದರು.

ನಗರದ ಅಭಿವೃದ್ಧಿಗೆ ಬಿಡುಗಡೆ ಆಗಿದ್ದ 8 ಕೋಟಿ ರೂ. ಹಣವನ್ನು ವಾಪಸು ಪಡೆಯ ಲಾಗಿತ್ತು. ಅದನ್ನು ಹೋರಾಟ ಮಾಡಿ ಬಿಡುಗಡೆ ಮಾಡಿಸಿ, ಪ್ರತಿಯೊಂದು ವಾರ್ಡಿಗೆ 18 ಲಕ್ಷ ರೂಪಾಯಿ ಕಾಮಗಾರಿ ಮಾಡಲಾ ಗುತ್ತಿದೆ ಎಂದವರು ತಿಳಿಸಿದರು. ನಗರದ ಮಾಜೇನಹಳ್ಳಿ ಗ್ರಾಮ ದೇವಸ್ಥಾನದ ಪಕ್ಕದಲ್ಲಿ ಸೇತುವೆಯ ನಿರ್ಮಾಣ ಮತ್ತು ನಗರಸಭೆ ನೂತನ ಕಟ್ಟಡದ ಕಾಮಗಾರಿ ಮಾಡಲಾಗುವುದು. ಸುಮಾರು 19 ಕೋಟಿ ರೂ. ಅನುದಾನದಲ್ಲಿ ನಗರದಲ್ಲಿನ ಪ್ರಮುಖ ಎಲ್ಲಾ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು ಎಂದರು.

ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ಶಾಸಕರು ಹೋರಾಟ ಮಾಡಿ ವಾಪಸ್‌ ಹೋಗಿದ್ದ 8 ಕೋಟಿ ರೂ. ಹಣವನ್ನು ತರುವ ಜೊತೆಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ. ಹೊಸ ವರ್ಷದಲ್ಲಿ ಬಂಪರ್ ಬಹುಮಾನ ದೊರೆತಂತಾಗಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷರಾದ ಶಾಹೀನಾ ಬಾನು ದಾದಾಪೀರ್ ಭಾನುವಳ್ಳಿ ಮಾತ ನಾಡಿ, ನಗರದ 23-24 ನೇ ವಾರ್ಡಿನ ಜನರು ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಗಳನ್ನು ಅನುಭವಿಸುತ್ತಿದ್ದರು. ಇಲ್ಲಿನ ರಸ್ತೆ, ಚರಂಡಿ ಕಾಮಗಾರಿಗೆ 2 ಕೋಟಿ ರೂ. ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದ್ದು ಶ್ಲ್ಯಾಘನೀಯ ಎಂದರು.

ಪೌರಾಯುಕ್ತ ಐಗೂರು ಬಸವರಾಜ್ ಮಾತನಾಡಿ, ವಿವಿಧ ಅನುದಾನಗಳ ಮೂಲಕ ಪ್ರತಿ ವಾರ್ಡಿನಲ್ಲಿ ಸುಮಾರು 70 ಲಕ್ಷ ರೂಪಾಯಿ ಕಾಮಗಾರಿಗಳನ್ನು ಅತಿ ಶೀಘ್ರದಲ್ಲಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎಂ. ಎಸ್. ಬಾಬುಲಾಲ್, ಪಕ್ಕೀರಮ್ಮ, ಅಬ್ದುಲ್ ಅಲಿಂ. ಸುಮಿತ್ರಾ, ಸಿದ್ದೇಶ್, ಎಸ್.ಎಂ. ವಸಂತ್, ಮಲೇಬೆನ್ನೂರು ಸದಸ್ಯರಾದ ರಿಯಾಜ್ , ನಯಾಜ್, ಮುಖಂಡರಾದ ದಾದಾಪೀರ್ ಭಾನುವಳ್ಳಿ, ನೂರಿ ಪಾಟೀಲ್, ನಜೀರ್ ಸಾಬ್, ದಾದಾಪೀರ್ ಸಾಬ್, ಆದಪ್ ಸಾಬ್, ಗುತ್ತಿಗೆದಾರ ಕೆ.ಬಿ. ಮಂಜುನಾಥ್, ಬಾಷಾ, ಸದ್ದಮ್ ಆರೋಗ್ಯ ಇಲಾಖೆಯ ಗುರುಪ್ರಸಾದ್ ಮತ್ತಿತರರು ಹಾಜರಿದ್ದರು. 

error: Content is protected !!