ಸ್ನೇಹ, ಪವಿತ್ರತೆಯ ಸೂಚಕ ರಾಖಿ

ಸ್ನೇಹ, ಪವಿತ್ರತೆಯ ಸೂಚಕ ರಾಖಿ

ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಹಬ್ಬ – ಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವ ಇದೆ. 

ಶ್ರವಣ, ಪೂಜಾ-ಪಾಠಗಳು, ಧ್ಯಾನ-ಧಾರಣೆಗಳು, ಚಿಂತನೆಗಳ ಮಾಸವೇ ಶ್ರಾವಣ. ನಾಗಚೌತಿ, ನಾಗರಪಂಚಮಿ, ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ, ಗೋಕುಲಾಷ್ಟಮಿ, ನೂಲ ಹುಣ್ಣಿಮೆ ಹೀಗೆ ಪ್ರತಿ ದಿನವು ಹಬ್ಬ. 

ಈ ಎಲ್ಲ ಹಬ್ಬಗಳಲ್ಲಿ `ನೂಲ ಹುಣ್ಣಿಮೆ’ ಅಥವಾ `ರಕ್ಷಾ ಬಂಧನ’ ಒಂದು ಪ್ರಮುಖ ಹಬ್ಬ.

ರಕ್ಷಾ ಬಂಧನ ಭಾರತದ ಸಂಸ್ಕೃತಿ  ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ, ಅನೇಕ ಅಧ್ಯಾತ್ಮಿಕ ರಹಸ್ಯಗಳನ್ನು ಬೇಳಿಧಿಸುವ ಮತ್ತು ಸಾರ್ವತ್ರಿಕ ಸಹೋದರ-ಸಹೋದರಿ ಸಂಬಂಧವನ್ನು ನಮಗೆ ನೆನಪಿಸುವ ಕೊಡುಗೆಯಾಗಿದೆ. ರಾಖಿ ಕಟ್ಟುವ ಮೊದಲು, ಸಹೋದರಿಯು ಅಣ್ಣನ ಹಣೆಯ ಮೇಲೆ ಶ್ರೀಗಂಧದ ತಿಲಕವನ್ನು ಇಡುತ್ತಾಳೆ. ಇದು ಶುದ್ಧ, ಶೀತಲ ಮತ್ತು ಪರಿಮಳ ಯುಕ್ತ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ. ಬಲಗೈಯಿಂದ ತಿಲಕ ಮತ್ತು ರಾಖಿಯನ್ನೂ ಕಟ್ಟಲಾಗುತ್ತದೆ. ಈ ವಿಧಾನವು ಯಾವಾಗಲೂ ಸರಿ (ರೈಟ್) ಯಾಗಿ ಯೋಚಿಸಲು ಮತ್ತು ಸರಿ (ರೈಟ್‌)ಯಾಗಿ ಮಾಡಲು, ಅಂದರೆ ಉತ್ತಮ ಕಾರ್ಯಗಳನ್ನು ಮಾಡಲು ಪ್ರೇರಣೆ ನಿಡುತ್ತದೆ. ಋಣಾತ್ಮಕ ಪರಿಣಾಮಗಳಿಂದ ವ್ಯಕ್ತಿಯು ದುಃಖ ಮತ್ತು  ಸಂಕಟಗಳಿಂದ ಸುರಕ್ಷಿತವಾಗಿರುತ್ತಾನೆ. ರಾಖಿ ಕಟ್ಟಿದ ನಂತರ ಸಿಹಿಯನ್ನು ನಿಡಲಾಗುತ್ತದೆ. ಇದರ ಹಿಂದೆ ಪರಸ್ಪರ ಸಂಬಂಧಗಳನ್ನು ಮಧುರಗೊಳಿಸುವ ರಹಸ್ಯ ಅಡಗಿದೆ. 

ಭಾರತಿಯರಾದ ನಾವು ವಿದೇಶಿಯರ ಅನುಕರಣೆಯಿಂದ ನಮ್ಮ ನಿಜವಾದ ಸಂಸ್ಕೃತಿಯನ್ನು ಮರೆತು ಸ್ನೇಹ, ಆತ್ಮೀಯತೆಯಿಂದ ದೂರ ಹೋಗುತ್ತಿದ್ದೇವೆ. ಕಾಮುಕ ವೃತ್ತಿಯಿಂದ ಅನೇಕ ನಾರಿಯರು ಇವತ್ತು ಅತ್ಯಾಚಾರ, ಅನ್ಯಾಯಕ್ಕೆ ಬಲಿಯಾಗುತ್ತಿದ್ದಾರೆ. ಆಧುನಿಕತೆಯ ವೇಷದಲ್ಲಿ ಸಮಾಜವು ಅಧೋಗತಿಗೆ ಹೋಗುತ್ತಿದೆ. ಪವಿತ್ರತೆಯ ಆಧಾರದಿಂದ ಈ ಪರಿಸ್ಥಿತಿಯನ್ನು ಬದಲಾಯಿಸಬಹುದು. ಪುರುಷರು ನಾರಿಯರನ್ನು  ನೋಡುವ ದೃಷ್ಟಿಯು ಪರಿರ್ವತನೆಯಾಗಬೇಕು. ಅವರನ್ನು ಸಬಲೆಯ ರೂಪದಲ್ಲಿ, ದೇವಿಯ ರೂಪಗಳಾದ ಶಕ್ತಿ, ಮಹಾಕಾಳಿ, ದುರ್ಗಾ ಮುಂತಾದ ರೂಪಗಳಲ್ಲಿ ಕಾಣಬೇಕು. `ಯತ್ರ ನಾರಿಸ್ಯ ಪೂಜ್ಯಂತೆ ರಮಂತೆ ತತ್ರ ದೇವತ’ ಎಂದು ಹೇಳಿಕೆಯನ್ನು ಸಾಕಾರ ಗೊಳಿಸಬೇಕು. ರಕ್ಷಾ ಬಂಧನ ಹಬ್ಬವು ಪ್ರಾಚೀನ ಕಾಲದಿಂದ ನಡೆದು ಬಂದ ಹಬ್ಬವಾಗಿದ್ದು, ವಿಶ್ವಕ್ಕೆ ಸ್ನೇಹ ಮತ್ತು ಮಮತೆಯ  ಸಂದೇಶ ನಿಡುತ್ತದೆ. 4-5 ನಿಮಿಷಗಳಲ್ಲಿ ಮುಗಿಯುವ ರಾಖಿ ಕಟ್ಟುವ ಈ ಕಾರ್ಯಕ್ರಮ, ಸೋದರ-ಸೋದರಿಯ ಬಾಲ್ಯದಿಂದ ಜೀವನದ ಕೊನೆ ಉಸಿರಿರುವರೆಗೆ ಪ್ರೀತಿಯ ಸಂಬಂಧ ಇರುತ್ತದೆ. ಕಟ್ಟಿರುವ ದಾರ ಹೋದರೂ ಹೃದಯದಲ್ಲಿ ಇರುವ ಸ್ನೆಹ ದೃಢವಾಗಿರುತ್ತದೆ.

ಸಂಕಟದ  ಸಮಯದಲ್ಲಿ ಮಾನವರೆಲ್ಲರೂ ನಾನಾ ಪ್ರಕಾರದ ರಕ್ಷಣೆಯನ್ನು ಬಯಸುತ್ತಾರೆ. 1) ತನುವಿನ ರಕ್ಷಣೆ, 2) ಮನಸ್ಸಿನ ರಕ್ಷಣೆ, 3) ಧನದ ರಕ್ಷಣೆ, 4)ಧರ್ಮ ಪವಿತ್ರತೆಯ ಅಥವಾ ಸತೀತ್ವದ ರಕ್ಷಣೆ, 5) ಆಪತ್ತುಗಳು ಹಾಗೂ ಸಂಕಟಗಳಿಂದ ರಕ್ಷಣೆ, 6) ಕಾಲ ಅಥವಾ ಮೃತ್ಯುವಿನ ಪಾಶದಿಂದ ರಕ್ಷಣೆ- ಇವು ಮುಖ್ಯವಾದವು. ಇದರಲ್ಲಿ ತನುವಿನ ರಕ್ಷಣೆಯನ್ನು ಮೃತ್ಯುವು ಸನ್ನಿಹಿತವಾದಾಗ ನಿಗದಿಯಾಗಿರುವ ಮೃತ್ಯುವಿನಿಂದ  ರಕ್ಷಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಮನಸ್ಸಿನ ರಕ್ಷಣೆಯನ್ನು ಮಾಯೆಯ ಬಂಧನಗಳಿಂದ ಅಥವಾ ತಾಮಸಿಕ ವಿಕಾರಗಳಿಂದ ಮುಕ್ತನಾಗಲು ಭಗವಂತನಿಗೆ ಶರಣು ಹೋಗ ಬೇಕಾಗುತ್ತದೆ.  ಆದ್ದರಿಂದಲೇ ವಿಷಯ ವಿಕಾರಗಳನ್ನು ನಾಶ ಮಾಡು, ಪಾಪವನ್ನು ಹರಿಸು ಎಂದು ಪತಿತ ಪಾವನ, ಪಾಪ ಕಟೇಶ್ವರನಾದ ಪರಮಾತ್ಮನಿಗೆ ಪ್ರಾರ್ಥನೆ ಮಾಡುತ್ತಾರೆ. ಧರ್ಮದ, ಪವಿತ್ರತೆಯ ಹಾಗೂ ಸತೀತ್ವದ ರಕ್ಷಣೆಯನ್ನು ಸರ್ವ ಸಮರ್ಥನಾದ ಭಗವಂತ ಒಬ್ಬನೇ ಮಾಡಲು ಸಾಧ್ಯವಿದೆ. ಇದಕ್ಕೆ ದ್ರೌಪದಿಯ ದೃಷ್ಟಾಂತವಿದೆ. ಕಾಲ ಅಥವಾ ಯಮನ ಪಾಶದಿಂದ ಪಾರು ಮಾಡುವವನೂ, ಕಾಲರಕಾಲ ಮಹಾಕಾಲ ಮಹಾಕಾಳೇಶ್ವರನೇ ಆಗಿದ್ದಾನೆ. ಯಾರನ್ನು ಈಶ್ವರನು ರಕ್ಷಣೆ ಮಾಡುತ್ತಾನೋ ಅವರಿಗೆ ಇಡೀ ಪ್ರಪಂಚವೇ ವೈರಿಯಾದರೂ ಅವರ ಕೂದಲನ್ನೂ ಕೊಂಕಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಭಕ್ತ ಮಾರ್ಕಂಡೇಯನ ದೃಷ್ಟಾಂತವಿದೆ.  ಸಾಂಸಾರಿಕ ಆಪತ್ತುಗಳು ಅಥವಾ ಲೌಕಿಕ ಸಂಕಟಗಳಿಂದಲೂ ರಕ್ಷಣೆಯನ್ನು ಈಶ್ವರನು ಹೊರತು ಅನ್ಯರಾರಿಂದಲೂ ಸಾಧ್ಯವಿಲ್ಲ. ಆದ್ದರಿಂದಲೇ ಅವನಿಗೆ ದುಃಖಹರ್ತಾ, ಸುಖಕರ್ತಾ, ವಿಘ್ನವಿನಾಶಕ ಎಂದು ಕರೆಯುತ್ತಾರೆ. 

ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವ, ಸಬ್‌ಕಾ ಮಾಲೀಕ ಏಕ್ ನಾಗಿರುವ, ಸರ್ವರ ರಕ್ಷಕ ಭಗವಂತನ ಜೊತೆಗೆ ಸಂಬಂಧದ ಬಂಧನವೇ ರಕ್ಷಾ ಬಂಧನ. ಅವನನ್ನು ತಿಳಿದು, ಅವನನ್ನೇ ನೆನೆಯುತ್ತಾ, ನಾವೆಲ್ಲರೂ ಅವನ ಮಕ್ಕಳು ಎಂದು ನಡೆದಾಗ `ವಸು ದೈವ ಕುಟುಂಬಕಂ’ ಆಗುವುದು. ನಾವು ಎಲ್ಲರು ಭಗವಂತನ ಮಕ್ಕಳು ಸಹೋದರ-ಸಹೋದರಿಯರು. ನಮ್ಮ ಪವಿತ್ರ ಸ್ನೇಹದ ಸೂಚಕವೇ ರಾಖಿ. 

ಮಸ್ತಕದಲ್ಲಿ ಇಡುವ ತಿಲಕ ಆತ್ಮ ಜ್ಯೋತಿಯ ಪ್ರತೀಕ, ಬಾಯಿ ಸಿಹಿ ಮಾಡುವುದೆಂದರೆ ಮಧುರವಾದ ನುಡಿಗಳನ್ನು ನುಡಿಯುವುದು, ರಾಖಿಯಲ್ಲಿ ಇರುವ ದಾರವು ನಿಯಮ ಹಾಗೂ ಸಂಯಮದ ಸೂಚಕ, ದುರ್ಗುಣ, ದುಶ್ಚಟಗಳನ್ನು ಬಿಡುವುದು ಕಾಣಿಕೆಯ ಅರ್ಥವಾಗಿದೆ. ಹಾಗಾದರೆ ಬನ್ನಿ, ನಾವೆಲ್ಲರೂ ಶ್ರೀರಕ್ಷೆಯಲ್ಲಿ ಬಂಧಿತರಾಗಿ ಇತರೆ ಅನೇಕ ಬಂಧನಗಳನ್ನು ಸ್ನೇಹದ ಸಂಬಂಧದಲ್ಲಿ ಪರಿವರ್ತಿತಿಸಿ ಜಾತಿ, ಮತ, ಭಾಷೆ. ಭೇದಗಳನ್ನು ಮರೆತು, ಸಹೋದರತ್ವದ ಭಾವನೆಯಿಂದ ಜೀವನದಲ್ಲಿ ಸುಖ-ಶಾಂತಿಯನ್ನು ಪಡೆಯೋಣ.

‘ಮನಸ್ಸಿನ ಭಾವನೆಯ ಹಬ್ಬವಾಗಿದೆ ರಾಖಿ,

ಪರಮಪಿತನ ರಕ್ಷಣೆಯ ಸಂಕೇತವಾಗಿದೆ ರಾಖಿ,

ಪವಿತ್ರತೆಯ ಕೊಡುಗೆ ಯಾಗಿದೆ ರಾಖಿ,

ಶ್ರೇಷ್ಠ ನಡವಳಿಕೆಯ ಆಧಾರವಾಗಿದೆ ರಾಖಿ.’

– ವಿಶ್ವಾಸ್ ಸೋಹೋನಿ

ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್, 

ಮೊ. 94839 37106.

error: Content is protected !!