2 ಎಕರೆ ಜಾಗ ಒದಗಿಸಿದಲ್ಲಿ ದಾವಣಗೆರೆಗೆ ಐ.ಟಿ. ಪಾರ್ಕ್

2 ಎಕರೆ ಜಾಗ ಒದಗಿಸಿದಲ್ಲಿ ದಾವಣಗೆರೆಗೆ ಐ.ಟಿ. ಪಾರ್ಕ್

ಸಂಸದೆ ಡಾ. ಪ್ರಭಾ ಪ್ರಶ್ನೆಗೆ ಸಚಿವ ಜಿತಿನ್ ಭರವಸೆ

ನವದೆಹಲಿ, ಆ. 7- ದಾವಣಗೆರೆ ನಗರದಲ್ಲಿ 2 ಎಕರೆ ಜಾಗ ಹಾಗೂ  50 ಸಾವಿರ ಚದುರ ಅಡಿ ಪ್ರದೇಶದ ಕಟ್ಟಡ ಒದಗಿಸಿದಲ್ಲಿ ಐ.ಟಿ. ಪಾರ್ಕ್ ಸ್ಥಾಪಿಸಲು ಪರಿಶೀಲಿಸಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಜಿತಿನ್ ಪ್ರಸಾದ್ ಭರವಸೆ ನೀಡಿದ್ದಾರೆ.

ಲೋಕಸಭೆಯಲ್ಲಿ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಕೇಳಿದ ಪ್ರಶ್ನೆಗೆ ಉತ್ತರಿ ಸಿದ ಅವರು, ದಾವಣಗೆರೆಯಲ್ಲಿ ಈಗಾಗಲೇ ಎಸ್.ಟಿ.ಪಿ.ಐ. (ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ) ಉಪ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇದು 10 ಸಾವಿರ ಚದರಡಿ ಜಾಗ ಹೊಂದಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ 2 ಎಕರೆ ಪ್ರದೇಶ ಹಾಗೂ 50 ಸಾವಿರ ಚದುರ ಅಡಿ ಜಾಗದ ಕಟ್ಟಡ ಒದಗಿಸಿದರೆ ಮಾತ್ರ ಐ.ಟಿ. ಪಾರ್ಕ್ ಸ್ಥಾಪಿಸಬೇಕು ಎಂಬುದು ಕೇಂದ್ರ ಸರ್ಕಾರದ ಈಗಿರುವ ನೀತಿಯಾಗಿದೆ ಎಂದವರು ಹೇಳಿದರು.

ದಾವಣಗೆರೆಯಲ್ಲಿ ಈಗಿರುವ ಎಸ್.ಟಿ.ಪಿ.ಐ. ಉಪ ಕೇಂದ್ರದಲ್ಲಿ ಆರು ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಒಂದು ರಫ್ತು ಆಧರಿತ ಕಂಪನಿಯಾಗಿದೆ ಎಂದು ಸಚಿವರು ಹೇಳಿದರು.

ಹೊಸ ಐ.ಟಿ. ಹಬ್‌ಗಳಿಗೆ ಉತ್ತೇಜಿಸುವ ನೀತಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ರಾಜ್ಯಗಳೂ ಸಹ ಮೂಲಭೂತ ಸೌಲಭ್ಯ ಹಾಗೂ ಸಂಪರ್ಕ ವ್ಯವಸ್ಥೆಗಳನ್ನು ಕಲ್ಪಿಸಬೇಕಿದೆ ಎಂದು ತಿಳಿಸಿದರು.

ನವೋದ್ಯಮಿಗಳಿಗೆ ಮುಂದಿನ ಪೀಳಿಗೆಯ ಇನ್‌ಕ್ಯುಬೇಷನ್ ಕೇಂದ್ರಗಳನ್ನು ಒದಗಿಸಲು ಕೇಂದ್ರ ಸರ್ಕಾರ ಯೋಜನೆ ಹೊಂದಿದೆ. ಇದರ ಅನ್ವಯ ಟಿ.ಐ.ಡಿ.ಇ. ಯೋಜನೆ, ಆರ್ಥಿಕವಾಗಿ ಹಿಂದುಳಿದ ವಲಯಗಳಲ್ಲಿ ಉದ್ಯಮಗಳಿಗೆ ಉತ್ತೇಜನ ನೀಡುವ ಸಮೃದ್ಧಿ ಯೋಜನೆ ಹಾಗೂ ನವೋದ್ಯಮಿಗಳಿಗೆ ಉತ್ತೇಜನ ನೀಡುವ ಜೆನೆಸಿಸ್ ಯೋಜನೆಗಳನ್ನು ಹೊಂದಲಾಗಿದೆ ಎಂದು ಸಚಿವ ಪ್ರಸಾದ್ ಹೇಳಿದರು.

ಪ್ರಸಕ್ತ ಐ.ಟಿ. ಉದ್ಯಮಗಳು ದೇಶದ 7 ಮಹಾನಗರಗಳಲ್ಲಿ ಕೇಂದ್ರೀಕೃತವಾಗಿವೆ. ಸರ್ಕಾರ ಐ.ಟಿ. ಉದ್ಯಮಗಳನ್ನು 2 ಹಾಗೂ 3ನೇ ಹಂತದ ನಗರಗಳಿಗೆ ತರುವ ಪ್ರಯತ್ನ ನಡೆಸಿದೆ. ಇದರಿಂದಾಗಿ ಬೆಂಗಳೂರು ಹಾಗೂ ಹೈದರಾಬಾದ್ ರೀತಿಯ ಮಹಾನಗರಗಳಲ್ಲಿನ ಒತ್ತಡ ಕಡಿಮೆಯಾಗಲಿದೆ ಹಾಗೂ ಐ.ಟಿ. ಕ್ರಾಂತಿ ಸಣ್ಣ ನಗರಗಳ ಮೂಲಕ ಎಲ್ಲ ಜನರಿಗೆ ತಲುಪಲಿದೆ ಎಂದು ಸಚಿವರು ತಿಳಿಸಿದರು.

ಸರ್ಕಾರ ದೇಶದಲ್ಲಿ 65 ಎಸ್.ಟಿ.ಪಿ.ಐ. ಕೇಂದ್ರಗಳನ್ನು ತೆರೆದಿದೆ. ಇವುಗಳಲ್ಲಿ 57 ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿವೆ ಎಂದೂ ಸಚಿವರು ಹೇಳಿದರು.

ಇದಕ್ಕೂ ಮುಂಚೆ  ಮಾತನಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ದಾವಣಗೆರೆ ನಗರವು ಕರ್ನಾಟಕದ ಮಧ್ಯ ಭಾಗದಲ್ಲಿದೆ. ಇಲ್ಲಿ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಸುಮಾರು 15 ಇಂಜಿನಿಯರಿಂಗ್ ಕಾಲೇಜುಗಳು 150 ಕಿ.ಮೀ. ವ್ಯಾಪ್ತಿಯಲ್ಲಿದ್ದು, ಸಾವಿರಾರು ಇಂಜಿನಿಯರಿಂಗ್ ಪದವೀಧರರಿದ್ದಾರೆ ಎಂದರು.

ಈ ಭಾಗದಲ್ಲಿ ಕೌಶಲ್ಯ ಹೆಚ್ಚಾಗಿದ್ದರೂ ಉದ್ಯೋಗಾವಕಾಶ ಕಡಿಮೆ. ಹೀಗಾಗಿ ಉದ್ಯೋಗಕ್ಕಾಗಿ ಬೆಂಗಳೂರಿನಂತಹ ನಗರಗಳಿಗೆ ತೆರಳಬೇಕಿದೆ. ಮೂಲಭೂತ ಸೌಲಭ್ಯ, ಶಿಕ್ಷಣ ಹಾಗೂ ಸಂಪರ್ಕ ವ್ಯವಸ್ಥೆ ಇರುವ ದಾವಣಗೆರೆ ಐ.ಟಿ. ಹಬ್ ಸ್ಥಾಪನೆಗೆ ಸೂಕ್ತ ತಾಣವಾಗಿದೆ. ಇಲ್ಲಿ ಐ.ಟಿ. ಹಬ್ ಸ್ಥಾಪಿಸಲು ಕಂಪನಿಗಳಿಗೆ ಹಣಕಾಸು ನೆರವು ನೀಡುವ ಅಗತ್ಯದ ಬಗ್ಗೆ ಸರ್ಕಾರ ಗಮನ ಹರಿಸಲಿದೆಯೇ? ಎಂದು ಪ್ರಶ್ನಿಸಿದರು.

error: Content is protected !!