ಸಿದ್ಧರಾಮೇಶ್ವರ ದೇವರ ರಥೋತ್ಸವದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ದಾವಣಗೆರೆ, ಆ. 5- ಕಾಯಕ ನಿಷ್ಠೆಯೇ ಸಿದ್ಧರಾಮ ಸಂಸ್ಕೃತಿಯ ಮೂಲಾಧಾರ. ತನ್ನ ಅಮೋಘ ವ್ಯಕ್ತಿತ್ವ ದಿಂದಾಗಿ ಬದುಕಿದ್ದಾಗಲೇ ದಂತ ಕಥೆಯಾದವರು. ಹೊಸ ಸಂಸ್ಕೃತಿ ಯೊಂದಕ್ಕೆ ದಾರಿಯಾದವರು ಸಿದ್ಧರಾಮರು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನುಡಿದರು.
ನಗರದ ವೆಂಕಾಭೋವಿ ಕಾಲೋನಿಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠ ದಾವಣಗೆರೆ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 62 ನೇ ರಥೋತ್ಸವ, ಲಿಂ. ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿಯವರ 22 ನೇ ಸಂಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜನಾನುರಾಗಿ ಕಾರ್ಯಗಳ ಮೂಲಕ ಅಂದಿನ ಕನ್ನಡ ನಾಡಿನ ಜನ ಮಾನಸದಲ್ಲಿ ಜೀವಂತವಾಗಿದ್ದ ಸಿದ್ಧರಾಮರು ಸಮ ಕಾಲೀನ ಜನರಿಗೆ ಗುರುವಾಗಿ, ಉತ್ತರ ಕಾಲೀನ ಜನರಿಗೆ ದೇವರಾಗಿ ದರ್ಶನ ನೀಡುತ್ತಾರೆ ಎಂದರು.
ಸಿದ್ಧರಾಮರ ವ್ಯಕ್ತಿತ್ವ ಅಸಾಧಾರಣ ವಾದುದು. ಒಂದು ಪರಂಪರೆಯನ್ನು ಕಟ್ಟುವಲ್ಲಿನ ಬದ್ಧತೆ, ಪ್ರಸಿದ್ಧಿ ಹಾಗೂ ಅವರ ದೈವತ್ವದ ಗುಣ ಒಂದು ಸಂಸ್ಕೃತಿಯನ್ನು ಹುಟ್ಟು ಹಾಕಿತು. ಸಿದ್ಧರಾಮ ಅವರದು ಶ್ರಮಿಕ ಪರಂಪರೆ. ಕನ್ನಡವೇ ಸಿದ್ಧರಾಮರ ಉಸಿರು. ಈ ಮಣ್ಣಿನ ಭಾಷೆ, ಬಯಲ ಧರ್ಮ ಅವರ ಮಾಧ್ಯಮವಾಯಿತು ಎಂದು ಹೇಳಿದರು.
ಜನರನ್ನು ಪ್ರೀತಿಯಿಂದ ಕಾಣುವ ಜನಮುಖಿ ವ್ಯಕ್ತಿತ್ವ. ಸಮಾಜದ ಕಷ್ಟಕೋಟಲೆಗಳಿಗೆ ತುಡಿಯುವ, ಸ್ಪಂದಿಸುವ ತಾಯಿ ಹೃದಯ. ನೋಂದವರನ್ನು, ಮಹಿಳೆಯರನ್ನು, ಅಶಕ್ತರನ್ನು ಪ್ರೀತಿಯಿಂದ ಕಾಣುವ ಅವರಿಗೆ ಬದುಕನ್ನು ಕಲ್ಪಿಸಿಕೊಡುವ ಅಂತಃಕರಣ ಅವರಲ್ಲಿತ್ತು ಎಂದರು.
ದೇಹವನ್ನೇ ದೇಗುಲವಾಗಿಸಿಕೊಂಡ, ಶರಣ ಸಂಸ್ಕೃತಿಯನ್ನು ಒಪ್ಪಿಕೊಂಡು ತನ್ನ ತನವನ್ನು ಉಳಿಸಿಕೊಂಡು ಮೇರು ಮಟ್ಟಕ್ಕೆ ಬೆಳದದ್ದು ಸಿದ್ಧರಾಮರ ಸಂಸ್ಮೃತಿ ಎಂದು ಹೇಳಿದರು.
ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಮಾತನಾಡಿ, ಸಿದ್ಧರಾಮರ ಆದ್ಯ ಉದ್ದೇಶವೇ ವ್ಯಕ್ತಿಗತ ಪರಿವರ್ತನೆ. ವ್ಯಕ್ತಿ ಪರಿವರ್ತನೆಗೊಂಡರೆ, ಸಹಜವಾಗಿಯೇ ಸಮುದಾಯದ ಪರಿವರ್ತನೆಗೆ ಸಿದ್ಧರಾಮ ಒಂದು ಉಜ್ವಲ ನಿದರ್ಶನ. ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದ ಭಕ್ತ ಸಮುದಾಯವೆಲ್ಲ ಸ್ವಾಭಾವಿಕವಾಗಿಯೇ ಸಿದ್ಧರಾಮ ಶರಣರ ಮಾರ್ಗವನ್ನು ಅನುಸರಿಸಲಿ ಎಂದು ಹಿತ ನುಡಿದರು.
ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಶುಷ್ಕ ಆಚರಣೆಗಳು, ಮೂಢನಂಬಿಕೆಗಳು, ಕಂದಾಚಾರಗಳು, ಡಾಂಭಿಕ ಆಚರಣೆಗಳು, ನಡೆ-ನುಡಿಯಲ್ಲಿ ಹೊಂದಾಣಿಕೆಯಿಲ್ಲದ ನೈತಿಕ ಹೀನಸ್ಥಿತಿ, ದೀನ-ದಲಿತರ ಶೋಷಣೆಗಳನ್ನು ಕಂಡು ಅವರ ಮನಸ್ಸು ಮರುಗಿತು. ಸರ್ವಜೀವಿಗಳಿಗೆ ಒಳಿತನ್ನು ಉಂಟು ಮಾಡುವ ಸಂಕಲ್ಪದಿಂದ ಸಿದ್ಧರಾಮರು ತರ-ತಮ ಭಾವವಿಲ್ಲದ ಸಮಾನತೆಯ ಸುಂದರ ಸಮಾಜವನ್ನು ನಿರ್ಮಿಸಲು ನಿರ್ಧರಿಸಿದರು ಎಂದರು.
ಅಂಧಾನುಕರಣೆ, ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಗಳ ವಿರುದ್ಧ ಸಮರವನ್ನೇ ಸಾರಿದರು. ದಯೆ, ಕರುಣೆಗಳೇ ಧರ್ಮದ ಹೃದಯವೆಂದು ಒತ್ತಿ ಹೇಳಿದ ಶ್ರೀಗಳು, ಮಾನವೀಯತೆ, ಅನುಕಂಪಗಳು ಧರ್ಮದ ತಳಹದಿಗಳಾಗಿರಬೇಕೆಂದು ಮನವರಿಕೆ ಮಾಡಿಕೊಟ್ಟರು.
ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಸಿದ್ಧರಾಮನ ಜೀವನವನ್ನು ಗಮನಿಸಿದಾಗ, ಅವನಿಗೆ ಆತ್ಮಜ್ಞಾನಿ ಅಲ್ಲಮಪ್ರಭುವಿನ ದರ್ಶನವಾಗುವವರೆಗೆ, ನಾಥ ಪರಂಪರೆ ಚಿಂತನೆಯ ಪಾರಮಾರ್ಥ, ಇಹ-ಪರ, ಸ್ವರ್ಗ-ನರಕ, ಮಡಿ-ಮೈಲಿಗೆ, ಪೂರ್ವಜನ್ಮ- ಪುನರ್ಜನ್ಮ, ವರ್ಣ-ವರ್ಗ, ಸ್ತ್ರೀ-ಪುರುಷ, ಶಾಂತಿ-ಸಮಾರಾಧನೆ, ತೀರ್ಥಯಾತ್ರೆ, ಹೋಮ-ಹವನ, ಪೂಜೆ-ಹರಕೆ, ಗುಡಿ-ಗುಂಡಾರ ಇಂತಹ ಅರ್ಥಹೀನ ಪದ್ಧತಿ ಮತ್ತು ಆಚರಣೆಗಳೇ ಧರ್ಮವೆಂಬ ನಂಬಿಕೆಯಲ್ಲಿದ್ದರು ಎಂದರು.
ಆದರೆ ಶರಣ ಸಿದ್ಧಾಂತದ ಗುರು-ಲಿಂಗ-ಜಂಗಮದ ಅರಿವಾದ ನಂತರ, ಕಾಯಕ, ದಾಸೋಹ, ಅನುಭಾವಗಳು ಅರ್ಥವಾದಾಗ ಅವರು ಪೂರ್ಣ ಪರಿವರ್ತನೆಗೊಳ್ಳುತ್ತಾನೆ ಎಂದು ಹೇಳಿದರು.
ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಅನ್ನದಾನಿ ಭಾರತೀಯ ಅಪ್ಪಣ್ಣ ಸ್ವಾಮೀಜಿ, ಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಮೇದಾರ ಕೇತೇಶ್ವರ ಸ್ವಾಮೀಜಿ, ಕೊರಟಿಕೆರೆಯ ಶ್ರೀ ಮಹಾಲಿಂಗ ಸ್ವಾಮೀಜಿ, ಹೊನಕಲ್ಲಿನ ಶ್ರೀ ಬಸವ ರಮಾನಂದ ಸ್ವಾಮೀಜಿ, ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮೀಜಿ, ಚನ್ನೇನಹಳ್ಳಿಯ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ, ಗುರುಮಠಕಲ್ಲಿನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶ್ರೀ ಭೃಂಗೇಶ್ವರ ಸ್ವಾಮೀಜಿ, ತಿಳುವಳ್ಳಿ ಬಸವ ನಿರಂಜನ ಸ್ವಾಮೀಜಿ, ಕಲ್ಕೆರೆ ತಿಪ್ಪೇರುದ್ರ ಸ್ವಾಮೀಜಿ, ಅಗಡಿಯ ಗುರುಲಿಂಗ ಸ್ವಾಮೀಜಿ ಸೇರಿದಂತೆ ಇನ್ನಿತರರು ಸಮ್ಮುಖ ವಹಿಸಿದ್ದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಮಾಜಿ ನಿರ್ದೇಶಕ ಕಾಳಘಟ್ಟ ಹನುಮಂತಪ್ಪ, ಭೋವಿ ಗುರುಪೀಠದ ಧರ್ಮದರ್ಶಿ ಹೆಚ್.ಜಯಣ್ಣ, ಯುವ ಮುುಖಂಡ ಜಿ.ಬಿ. ವಿನಯ್ ಕುಮಾರ್, ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಹೆಚ್. ಗೋಪಾಲ್, ಎ. ನಾಗರಾಜ್, ಅಯೂಬ್ ಪೈಲ್ವಾನ್, ಗಡಿಗುಡಾಳ್ ಮಂಜುನಾಥ, ಟಿ. ಮಂಜುನಾಥ್, ಶ್ರೀನಿವಾಸ್, ಉಮಾ, ಶಿವಶಂಕರ್ ಶಿಲ್ಪಿ, ರಾಜಣ್ಣ, ದಶರಥ, ಎಸ್.ಜಿ. ಸೋಮಶೇಖರ್, ಜಿ. ರವಿಕುಮಾರ್, ಜಿ. ಶೇಖರಪ್ಪ, ಹರಪನಹಳ್ಳಿ ವೀರಭದ್ರಪ್ಪ, ಅರ್ಜುನ್ ಜಗಳೂರು, ವೀರೇಶ್, ಚಾಮರಾಜ, ದಿನೇಶ್ ನ್ಯಾಮತಿ, ಪ್ರವೀಣ್, ಮಂಜಪ್ಪ ಮತ್ತಿತರರು ಭಾಗವಹಿಸಿದ್ದರು.