ದಾವಣಗೆರೆ, ಅ. 4 – ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಸ್ವಯಂ ನಿವೃತ್ತಿ ಘೋಷಿಸಿಕೊಂಡು ಉತ್ತರಾಧಿಕಾರಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಶ್ರೀಮಠದ ಸದ್ಭಕ್ತರ ಸಮಾಲೋಚನಾ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ತರಳಬಾಳು ಜಗದ್ಗುರುಗಳು ರೂಪಿಸಿಕೊಂಡಿರುವ ಏಕವ್ಯಕ್ತಿ ಟ್ರಸ್ಟ್ ಡೀಡ್ ರದ್ದುಗೊಳಿಸಬೇಕು. ಹಿರಿಯ ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ರೂಪಿಸಿದ್ದ ಬೈಲಾ ಯಥಾವತ್ತಾಗಿ ಜಾರಿಗೆ ತರಬೇಕು. ಇದಕ್ಕೆ ಒಪ್ಪದಿದ್ದರೆ ಭಕ್ತರು ಪಾದಯಾತ್ರೆ ಮೂಲಕ ಪ್ರತಿಭಟಿಸಲಿದ್ದಾರೆ ಎಂದು ನಿರ್ಧರಿಸಲಾಗಿದೆ.
ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ಅಪೂರ್ವ ರೆಸಾರ್ಟ್ನಲ್ಲಿ ನಡೆದ ಶ್ರೀಮಠದ ಸದ್ಭಕ್ತರ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ, ತರಳಬಾಳು ಜಗದ್ಗುರು ಹಾಗೂ ಸಾಣೇಹಳ್ಳಿ ಸ್ವಾಮೀಜಿಗಳಿಬ್ಬರೂ ಉತ್ತರಾಧಿಕಾರಿ ನೇಮಿಸಿ ನಿವೃತ್ತರಾಗಬೇಕು. ಈ ಬಗ್ಗೆ ತರಳಬಾಳು ಜಗದ್ಗುರುಗಳ ಬಳಿ ಮಾತನಾಡಲು ಆಗಸ್ಟ್ 18ರಂದು ತಮ್ಮ ನೇತೃತ್ವದ ನಿಯೋಗದಲ್ಲಿ ತೆರಳಲಾಗುವುದು ಎಂದು ತಿಳಿಸಿದರು.
ಮಠವು ಸಮಾಜದ ಆಸ್ತಿ. ತಮ್ಮ ಕಾಲಾ ನಂತರ ಈ ರೀತಿ ನಡೆಯಬೇಕು ಎಂದು ಯಾರೂ ಹೇಳಲಿಕ್ಕಾಗದು. ಉತ್ತರಾಧಿಕಾರಿ ನೇಮಿಸಿ ಪದತ್ಯಾಗ ಮಾಡಬೇಕು ಎಂದು ನಿಯೋಗದಲ್ಲಿ ತೆರಳಿ ತಿಳಿಸುತ್ತೇವೆ. ಅದಕ್ಕೆ ಒಪ್ಪದೇ, ಹಠ ಮಾಡಿ ನಾನೇ ಇರುತ್ತೇನೆ ಎಂದರೆ ಮುಂದಿನ ಉಪಾಯ ಮಾಡೋಣ ಎಂದು ಎಸ್ಸೆಸ್ ತಿಳಿಸಿದರು.
ಹತ್ತು ವರ್ಷಗಳ ಹಿಂದೆಯೇ ಪದತ್ಯಾಗ ಮಾಡುವುದಾಗಿ ತರಳಬಾಳು ಶ್ರೀಗಳು ಹೇಳಿದ್ದರು. ಆಗ ಹಳ್ಳಿಯ ಮುಗ್ಧ ಜನ ಪದತ್ಯಾಗ ಮಾಡುವುದು ಬೇಡ ಎಂದಿದ್ದರು. ನಂತರ ಶ್ರೀಗಳು ಎಂದೂ ಪದತ್ಯಾಗದ ಮಾತನಾಡಿಲ್ಲ. ಈಗ ಶ್ರೀಗಳ ಏಕವ್ಯಕ್ತಿ ಟ್ರಸ್ಟ್ ಡೀಡ್ ಬಗ್ಗೆ ಜನರಿಗೆ ಗೊತ್ತಾಗಿ ಪ್ರಶ್ನಿಸುತ್ತಿದ್ದಾರೆ ಎಂದರು.
ಮಠದ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನ ಪ್ರಶ್ನಿಸುವ ಭಕ್ತರ ಮೇಲೆ ಕೇಸ್ ಎಂದು ಆಕ್ಷೇಪ
ರಾಣೇಬೆನ್ನೂರಿನಲ್ಲಿರುವ ಇಂಜಿನಿಯರಿಂಗ್ ಕಾಲೇಜು ಹಾಗೂ ದಾವಣಗೆರೆ ಯಲ್ಲಿರುವ ಮಠದ ವಸತಿ ಶಾಲೆ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳು ಮುಚ್ಚಿವೆ. ಹಲವಾರು ಶಿಕ್ಷಣ ಸಂಸ್ಥೆಗಳು ಸ್ಥಗಿತಗೊಂಡಿವೆ. ಹಲವು ಕಲ್ಯಾಣ ಮಂಟಪಗಳು ದುಸ್ಥಿತಿಯಲ್ಲಿವೆ ಎಂದು ಸಭೆಯಲ್ಲಿ ಮಾತನಾಡಿದ ಹಲವರು ಬೇಸರ ವ್ಯಕ್ತಪಡಿಸಿದರು.
ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಮಾತನಾಡಲು ಹಲವು ಬಾರಿ ಮುಖಂಡರು ತೆರಳಿದರೂ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸ್ಪಷ್ಟವಾದ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಮಾತನಾಡಿದವರಿಗೆ ಮಠದ ಬಾಗಿಲು ಮುಚ್ಚುತ್ತಿದೆ. ಸಮಾಜಕ್ಕಾಗಿ ಪ್ರಾಮಾಣಿಕವಾಗಿ ಅಭಿಪ್ರಾಯ ತಿಳಿಸುವವರನ್ನೂ ದೂರವಿಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ವಾಟ್ಸ್ಆಪ್ಗಳಲ್ಲಿ ಮಠದ ವಿಷಯಗಳ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಕಾರಣದಿಂದಾಗಿ, ಇತರೆ ಸಮಾಜಗಳ ಎದುರು ಗೌರವಕ್ಕೆ ಕುಂದಾಗುತ್ತಿದೆ.
ತರಳಬಾಳು ಜಗದ್ಗುರು ಹಾಗೂ ಸಾಣೇಹಳ್ಳಿ ಶ್ರೀಗಳನ್ನು ಸಮಾಜ ತನ್ನ ಎರಡು ಕಣ್ಣು ಎಂದು ಭಾವಿಸಿದೆ. ಆದರೆ, ಉಭಯ ಶ್ರೀಗಳ ನಡುವೆ ವೈಮನಸ್ಸು ಉಂಟಾಗಿದೆ. ಇದು ಸಮಾಜದ ಎಲ್ಲರಿಗೂ ಬೇಸರ ತಂದಿದೆ ಎಂದು ತಿಳಿಸಲಾಯಿತು.
ತರಳಬಾಳು ಜಗದ್ಗುರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಎಸ್. ಸಿದ್ದಯ್ಯ ಅವರ ಮೇಲೆ ಆರೋಪ ಹೊರಿಸಿ ಮಠದಿಂದ ದೂರ ಮಾಡಲಾಗಿದೆ. ಮಠದ ಕಾರ್ಯನಿರ್ವಹಣೆ ಪ್ರಶ್ನಿಸುವ ಭಕ್ತರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಸಾಧು ಸದ್ಧರ್ಮ ವೀರಶೈವ ಸಂಘವನ್ನು ದುರ್ಬಲಗೊಳಿಸಲಾಗಿದೆ. ಅದರ ಸದಸ್ಯರು ಕಾಲವಾದ ನಂತರ ಹೊಸ ಸದಸ್ಯರ ನೇಮಕ ಪ್ರಕ್ರಿಯೆ ಸಮರ್ಪಕವಾಗಿಲ್ಲ. ಸಂಘಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಿಸಬೇಕು ಎಂದೂ ಒತ್ತಾಯಿಸಲಾಯಿತು.
ಮಠದ ಒಳಿತಿಗಾಗಿ ಇಂದು ಸಭೆ ಕರೆಯಲಾಗಿದೆ. ಆದರೆ, ಈ ಸಭೆ ಅಸಂತುಷ್ಟ ರಾಜಕಾರಣಿಗಳ ಸಭೆ ಎಂಬ ರೀತಿಯಲ್ಲಿ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಆಕ್ಷೇಪಿಸಿ ಪತ್ರ ಬರೆದಿದ್ದಾರೆ. ಈ ಸಭೆಗೆ ಯಾರೂ ಹೋಗಬಾರದು ಎಂದು ತಡೆಯುವ ಪ್ರಯತ್ನ ಮಾಡಿದ್ದಾರೆ. ಸಮಾಜದ ಅಧ್ಯಕ್ಷರು ನೇಮಕಗೊಂಡವರೇ ಹೊರತು ಆಯ್ಕೆಯಾದವರಲ್ಲ ಎಂದೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ನಿಯೋಗದಲ್ಲಿ ರಾಜಣ್ಣ ಬೇಡ!
ತರಳಬಾಳು ಜಗದ್ಗುರುಗಳನ್ನು ಭೇಟಿ ಮಾಡುವ ನಿಯೋಗಕ್ಕೆ ಉದ್ಯಮಿ ಅಣಬೇರು ರಾಜಣ್ಣ ಬೇಡ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ನಾನೂ ಹಾಗೂ ಮೂರ್ನಾಲ್ಕು ಜನ ನಿಯೋಗದಲ್ಲಿ ತೆರಳುತ್ತೇವೆ ಎಂದು ಶಿವಶಂಕರಪ್ಪ ಹೇಳಿದರು.
ನಿಯೋಗದಲ್ಲಿ ನಾನು ಬೇಡವಾ? ಎಂದು ರಾಜಣ್ಣ ಪ್ರಶ್ನಿಸಿದರು. ಆಗ ಶಿವಶಂಕರಪ್ಪನವರು, ನೀನು ಬೇಡ. ನಿನಗೂ-ಅವರಿಗೂ ಆಗುವುದಿಲ್ಲ ಎಂದರು.
ಹರ್ಕಂಡು ಬಹಳ ದಿನ ಆಯಿತು: ಎಸ್ಸೆಸ್
ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನಡುವೆ ಒಡಕಾಗಿದೆ. ಅವರು ಇರಲಿ, ಇವರು ಬೇಡ ಎನ್ನುವುದು ಸರಿಯಲ್ಲ. ಇಬ್ಬರೂ ಉತ್ತರಾಧಿಕಾರಿ ನೇಮಿಸಲಿ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
`ಇಬ್ಬರೂ ಹರ್ಕಂಡು ಬಹಳ ದಿನ ಆಯಿತು. ಎರಡೂ ಕಡೆಯೂ ಮರಿ ಮಾಡಿ, ಇಬ್ಬರೂ ಹೊರ ಹೋಗುವುದು ಒಳ್ಳೆಯದು’ ಎಂದರು.
ಈ ನಡುವೆ ಸಭೆಯಲ್ಲಿದ್ದವರೊಬ್ಬರು ಹರಳಕಟ್ಟ ಮಠದ ಶ್ರೀ ಪ್ರಕಾಶ ಸ್ವಾಮೀಜಿ ಅವರೂ ಹೊರ ಹೋಗಲಿ ಎಂದರು. ಆಗ ಶಿವಶಂಕರಪ್ಪನವರು, ಅವರಿಗೆ ಸ್ವಾಮೀಜಿ ಆಗುವುದೇ ಇಷ್ಟವಿರಲಿಲ್ಲ ಎಂದು ಮುಗುಳ್ನಗುತ್ತಾ ಹೇಳಿದರು.
ಸಭೆಯ ನಿರ್ಣಯಗಳು
ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ನಿವೃತ್ತಿ ಘೋಷಿಸಿಕೊಂಡು ಉತ್ತರಾಧಿಕಾರಿ ಆಯ್ಕೆ ಮಾಡಬೇಕು
ಸಾಧು ಸದ್ಧರ್ಮ ವೀರಶೈವ ಸಂಘವು ಸ್ಥಗಿತಗೊಂಡಿದ್ದು, ಹೊಸದಾಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು
ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಏಕವ್ಯಕ್ತಿ ಡೀಡ್ ರದ್ದುಗೊಳಿಸಿ, ಹಿರಿಯ ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಬೈಲಾ ಯಥಾವತ್ತಾಗಿ ಜಾರಿಗೆ ತರಬೇಕು
ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ತನ್ನದೇ ಆದ ಛಾಪು ಮೂಡಿಸಿರುವ ತರಳಬಾಳು ಮಠವನ್ನು ಹಾಳು ಮಾಡಲು ಬಿಡಲಾಗದು.
ಇಂದು ಕರೆಯಲಾಗಿದ್ದ ಸಭೆಗೆ ನಾನು ಹೋಗಬಾರದು ಎಂದು ಹೊರಗಿನವರೂ ಹೇಳಿದ್ದರೂ, ನನ್ನ ಮನೆಯವರೂ ಹೇಳಿದ್ದರು. ಗುರುಗಳ ಮಾತಿನಂತೆ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದೇವೆ. ಆದರೆ, ಈಗ ಸಮಾಜದ ಹಿತದೃಷ್ಟಿಯಿಂದ ಈ ಸಭೆ ನಡೆಸಬೇಕಾಗಿದೆ.
– ಶಾಸಕ ಶಾಮನೂರು ಶಿವಶಂಕರಪ್ಪ
ಗುರು ಹಾಗೂ ಶಿಷ್ಯರು ಪರಸ್ಪರರ ಮೇಲೆ ಅಂಜಿ ನಡೆಯಬೇಕು ಎಂಬ ತತ್ವದ ಮೇಲೆ ತರಳಬಾಳು ಮಠ ನಡೆದುಕೊಂಡು ಬಂದಿತ್ತು. ಆದರೆ, ಈಗ ಶಿಷ್ಯರ ಮೇಲೆ ಪ್ರಕರಣಗಳನ್ನು ದಾಖಲಿಸುವ ಮೂಲಕ ಗುರುಗಳು ಅಂಜಿಸುತ್ತಿದ್ದಾರೆ. ವಾಟ್ಸ್ಆಪ್ನಲ್ಲಿ ಮೆಸೇಜ್ ಕಳಿಸುವವರನ್ನು ಅಂಜಿಸಿ ಮುಷ್ಠಿಯಲ್ಲಿಟ್ಟುಕೊಳ್ಳಲಾಗದು.
– ಮಾಜಿ ಸಚಿವ ಬಿ.ಸಿ. ಪಾಟೀಲ್
ಮಠಕ್ಕೆ ಹಠಾತ್ತನೆ ಯಾರನ್ನೋ ಉತ್ತರಾಧಿಕಾರಿ ನೇಮಿಸ ಲಾಗದು. ಮಠ ನಿರ್ವಹಿಸಲು ಅಗತ್ಯ ಶಿಕ್ಷಣ ಹಾಗೂ ಕಾರ್ಯನಿರ್ವಹಣೆ ಕಲಿಸಬೇಕು. ಇದೆಲ್ಲ ಒಂದೇ ದಿನದಲ್ಲಿ ಸಾಧ್ಯವಾಗದು. ಉತ್ತರಾಧಿಕಾರಿ ನೇಮಕ ಜಗದ್ಗುರುಗಳ ಮಾರ್ಗದರ್ಶನದಲ್ಲೇ ಆಗಬೇಕು. ಆದರೆ, ಅವರು ತಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನಾದರೂ ಹೇಳುತ್ತಿಲ್ಲ.
– ಮಾಜಿ ಶಾಸಕ ವಡ್ನಾಳ್ ರಾಜಣ್ಣ
ಸಾಧು ಸದ್ಧರ್ಮ ವೀರಶೈವ ಸಂಘದಲ್ಲಿ 50 ವರ್ಷಗಳಿಂದ ಸದಸ್ಯನಾಗಿದ್ದೇನೆ. ಗುರುಗಳು ಅವರಿಗೆ ಬೇಕಾದವರನ್ನು ನೇಮಿಸಿಕೊಂಡು, ನಾಲ್ಕು ಗೋಡೆಗಳ ನಡುವೆ ಸಮಾಜದ ಅಧ್ಯಕ್ಷರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಇದು ತಪ್ಪು.
– ಉದ್ಯಮಿ ಅಣಬೇರು ರಾಜಣ್ಣ
ಸಮಾಜದ ಮುಖಂಡ ಹಾಗೂ ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ವಿಲ್ ಬರೆಯುವ ಮೂಲಕ ಮಠದ ಉತ್ತರಾಧಿಕಾರಿ ನೇಮಿಸಲಾಗದು. ಮಠದ ಚಿಂತನೆ ಹಾಗೂ ಸದ್ಭಕ್ತರ ಬಗ್ಗೆ ಉತ್ತರಾಧಿಕಾರಿಗೆ ತಿಳಿದಿರಬೇಕು. ಇದನ್ನೆಲ್ಲ ತಿಳಿಯಲು ಉತ್ತರಾಧಿಕಾರಿಗೆ ಸಮಯ ಬೇಕು. ಹೀಗಾಗಿ ತಕ್ಷಣವೇ ಉತ್ತರಾಧಿಕಾರಿ ನೇಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಧು ವೀರಶೈವ ಸಮಾಜದ ಮುಖಂಡ ಅಣಬೇರು ರಾಜಣ್ಣ, ತರಳಬಾಳು ಜಗದ್ಗುರುಗಳು ಉತ್ತರಾಧಿಕಾರಿ ನೇಮಕ ಹಾಗೂ ಏಕವ್ಯಕ್ತಿ ಟ್ರಸ್ಟ್ ಡೀಡ್ ರದ್ದುಗೊಳಿಸಲು ಒಪ್ಪದೇ ಇದ್ದರೆ ಸಮಾಜದ 50 ಸಾವಿರಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಮಠಕ್ಕೆ ತೆರಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
1990ರ ವೇಳೆಯೇ ಏಕವ್ಯಕ್ತಿ ಟ್ರಸ್ಟ್ ಡೀಡ್ ಮಾಡಿಕೊಳ್ಳಲಾಗಿತ್ತು. ಈ ವಿಷಯ ಇತ್ತೀಚೆಗೆ ಸಮಾಜದ ಮುಖಂಡರಿಗೆ ತಿಳಿದಿದೆ ಎಂದೂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಟಿ. ಗುರುಸಿದ್ದನಗೌಡ್ರು, ವಡ್ನಾಳ್ ರಾಜಣ್ಣ, ಶಿವಮೊಗ್ಗದ ರುದ್ರೇಗೌಡ ಹಾಗೂ ಬೆನಕಪ್ಪ, ಬ್ಯಾಡಗಿ ಮಾಜಿ ಶಾಸಕ ಸುರೇಶ್ ಪಾಟೀಲ್, ಶಿವಮೊಗ್ಗದ ಮಾಜಿ ಶಾಸಕ ಚಂದ್ರಶೇಖರಪ್ಪ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಆನಗೋಡು ನಂಜುಂಡಪ್ಪ, ಹೆಚ್.ಎಂ. ಓಂಕಾರಪ್ಪ, ಮಹೇಶ್ ಚಟ್ನಹಳ್ಳಿ, ಜೆ.ಆರ್. ಷಣ್ಮುಖಪ್ಪ, ಮಾಜಿ ಕುಲಪತಿ ಕೆ.ಬಿ. ಸಿದ್ದಪ್ಪ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಡಿ.ಸಿ. ರಾಜಪ್ಪ, ಶ್ರೀನಿವಾಸ ಮೆಳ್ಳೇಕಟ್ಟೆ, ಸಂತೋಷ್ ಮೆಳ್ಳೇಕಟ್ಟೆ, ನಾಗರಾಜ ಬಣಕಾರ ಕುರುಡಿ, ವಿಶ್ವನಾಥ ಮಂಡಲೂರು, ಚೇತನ್ ಎಲೆಬೇತೂರು, ಬಸವಲಿಂಗಪ್ಪ ಕಲಪನಹಳ್ಳಿ, ನಾಗರಾಜ ಪಲ್ಲಾಗಟ್ಟೆ, ಹಿರೇಮೇಗಳಗೇರಿ ಟಿ.ಎಂ. ಶಿವಮೂರ್ತಯ್ಯ ಮತ್ತಿತರರು ಉಪಸ್ಥಿತರಿದ್ದರು.