ರಾಜ್ಯಕ್ಕೆ ಅನುದಾನ ನೀಡುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಾರತಮ್ಯ : ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರ ಬಂಧನ
ದಾವಣಗೆರೆ, ಆ.4- ಕೇಂದ್ರ ಬಿಜೆಪಿಯು ರಾಜ್ಯಕ್ಕೆ ಅನುದಾನ ನೀಡುವಲ್ಲಿ ಮಾಡಿದ ಅನ್ಯಾಯ ಹಾಗೂ ಭಾರತ್ ಅಕ್ಕಿ ಕೊಡದಿರುವು ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಭಾನುವಾರ ನಗರದ ಜಯದೇವ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬ್ಯಾರಿಕೇಡ್ ಹಾಕಿ, ಪೊಲೀಸರು ಸರ್ಪಗಾವಲಿನಿಂದ ಜಯದೇವ ವೃತ್ತದಲ್ಲೇ ತಡೆದು 63 ಜನ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಪ್ರತಿಭಟನಾ ನಿರತರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಚೊಂಬು ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ರಾಜ್ಯದಿಂದ ಬೃಹತ್ ಪ್ರಮಾಣದ ತೆರಿಗೆ ಕೇಂದ್ರಕ್ಕೆ ಹೋಗುತ್ತಿದ್ದರೂ ಬಜೆಟ್ನಲ್ಲಿ ರಾಜ್ಯವನ್ನು ಕಡೆಗಣಿಸಿದ ಬಿಜೆಪಿ, ತಮ್ಮ ಮಿತ್ರ ಪಕ್ಷಗಳ ರಾಜ್ಯಗಳಿಗೆ ಹೆಚ್ಚಿನ ಅನುದಾನ ಮೀಸಲಿಟ್ಟು ಕರ್ನಾಟಕಕ್ಕೆ ಮೋಸ ಮಾಡಿದೆ ಎಂದು ದೂರಿದರು.
ಈ ಹಿಂದೆ ಬಜೆಟ್ನಲ್ಲಿ ತಿಳಿಸಿದಂತೆ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ನೀಡುವುದಾಗಿ ಹೇಳಿ ಇಂದಿಗೂ ಕೊಟ್ಟಿಲ್ಲ ಮತ್ತು ಬಡವರಿಗೆ ಭಾರತ್ ಬ್ರ್ಯಾಂಡ್ ಅಕ್ಕಿ ಕೊಡುತ್ತೇವೆ ಎಂದು ಅದನ್ನೂ ನಿಲ್ಲಿಸಿದ್ದಾರೆ ಎಂದು ಗುಡುಗಿದರು.
ಕೇಂದ್ರ ಸರ್ಕಾರವು ತನ್ನ ಅಧಿಕಾರವನ್ನು ಭದ್ರ ಪಡಿಸಿಕೊಳ್ಳಲು ರಾಜ್ಯದ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ಸುರಿಯುತ್ತಿರುವುದರ ಬಗ್ಗೆ ರಾಜ್ಯದ ಜನ ಚಿಂತನೆ ಮಾಡಬೇಕಿದೆ ಎಂದರು.
ರಾಜ್ಯದಲ್ಲಿ ಸಿಎಂ ಹಾಗೂ ಡಿಸಿಎಂ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಇದನ್ನು ಕೆಡವಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಷಡ್ಯಂತ್ರ ನಡೆಸಿವೆ ಎಂದು ದೂರಿದರು.
ಮೈತ್ರಿ ಪಕ್ಷ ಮಾಡುತ್ತಿರುವ ಪಾದಯಾತ್ರೆ ಪಾಪದ ಪಾದಯಾತ್ರೆಯಾಗಿದ್ದು, ತಮ್ಮ ಪಾಪ ಕಳೆದು ಕೊಳ್ಳಲು ಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ನಿಷ್ಕಳಂಕ ವ್ಯಕ್ತಿ ಸಿದ್ದರಾಮಯ್ಯ ಅವರಿಗೆ ಕೆಟ್ಟ ಹೆಸರು ತರಲು ಹುನ್ನಾರ ನಡೆಸಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದರು.
ಮಂಡ್ಯದಿಂದ ವಲಸೆ ಬಂದ ಯಡಿಯೂರಪ್ಪ ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ. ಅಷ್ಟೊಂದು ಅಕ್ರಮ ಎಸಗಿದ ಇವರು ಸಿಎಂಗೆ ರಾಜೀನಾಮೆ ಕೇಳಲು ನಾಚಿಕೆ ಆಗಬೇಕು ಎಂದು ಗುಡುಗಿದರು.
ದೇಶದಲ್ಲಿ ಕಾಂಗ್ರೆಸ್ ಎದ್ದು ಬರುತ್ತಿದೆ. ಜನರು ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ ದಾವಣಗೆರೆ ದೂಡಾದಲ್ಲೂ ಬಿಜೆಪಿ ಮಾಡಿದ ಹಗರಣ ಮುಂದೆ ಹೊರಬರಲಿವೆ ಎಂದರು.
ಪಾಲಿಕೆ ಸದಸ್ಯ ಚಮನ್ಸಾಬ್ ಮಾತನಾಡಿ, ಬಿಜೆಪಿಯವರು ಗವರ್ನರ್ ಕಚೇರಿಯನ್ನು ಬಿಜೆಪಿ ಕಚೇರಿ ಎಂದು ರಾಜಕೀಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ನೆಲ ಕಚ್ಚಲಿದೆ ಎಂದು ಹೇಳಿದರು.
ಅಹಿಂದ ಮುಖಂಡ ಆನಂದಪ್ಪ ಮಾತನಾಡಿ, ಮೋದಿ ಅವರು ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳನ್ನು ಬಂಧಿಸುವ ಕಾರ್ಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಯಾವುದರಲ್ಲಿ ಬಂಧಿಸಬೇಕು ಎಂದು ತಿಳಿಯದ ಅವರು, ಇಂದು ಆಧಾರ ರಹಿತ ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಖಂಡ ಕೆ.ಜಿ. ಶಿವಕುಮಾರ್ ಮಾತನಾಡಿ, ಕೇಂದ್ರ ಸರ್ಕಾರವು ಬಜೆಟ್ ವಿಚಾರದಲ್ಲಿ ಮಲತಾಯಿ ಧೋರಣೆ ಮಾಡಿದೆ. ಚುನಾವಣೆ ನೆಪದಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ನೀಡಿ, ವಾಪಸ್ ಅಕ್ಕಿ ನೀಡಲು ಮುಂದಾಗಿಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯ ಎ. ನಾಗರಾಜ್, ಎಸ್. ಮಲ್ಲಿಕಾರ್ಜುನ್, ಪಾಲಿಕೆ ಮಹಾಪೌರ ವಿನಾಯಕ ಪೈಲ್ವಾನ್, ಮಂಜುನಾಥ್, ಗೋಣೆಪ್ಪ, ಶಾಂತಕುಮಾರ್, ಇಟ್ಟಿಗುಡಿ ಮಂಜುನಾಥ್, ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ, ಮಹಿಳಾ ಮುಖಂಡರು ಹಾಗೂ ಇತರರು ಇದ್ದರು.