ನವದೆಹಲಿ, ಆ. 2 – ಅಮೆರಿಕದಲ್ಲಿ ಆರೋಗ್ಯ ವಲಯಕ್ಕೆ ಜಿ.ಡಿ.ಪಿ.ಯ ಶೇ.17.9 ರಷ್ಟು ಅನುದಾನ ನೀಡಲಾಗುತ್ತಿದೆ. ಭಾರತದಲ್ಲಿ ಶೇ.2.5ರ ಗುರಿ ಸಹ ತಲುಪಲು ಸಾಧ್ಯವಾಗು ತ್ತಿಲ್ಲ. ಈ ರೀತಿ ವಿಶ್ವ ಗುರು ಆಗಲು ಸಾಧ್ಯವೇ? ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಲೋಕಸಭೆಯಲ್ಲಿ ಪ್ರಶ್ನಿಸಿದ್ದಾರೆ.
18ನೇ ಲೋಕಸಭೆಯಲ್ಲಿ ಮೊದಲ ಬಾರಿ ಮಾತನಾಡಿದ ಪ್ರಭಾ ಮಲ್ಲಿಕಾರ್ಜುನ್, ಬಜೆಟ್‌ನಲ್ಲಿ ಆರೋಗ್ಯ ವಲಯವನ್ನು ಕಡೆಗಣಿಸಲಾಗಿದ್ದು, ಕಡಿಮೆ ಅನುದಾನ ನೀಡಲಾಗಿದೆ ಎಂದು ವಿಷಾದಿಸಿದರು.
ಬ್ರೆಜಿಲ್‌ನಲ್ಲಿ ಆರೋಗ್ಯ ವಲಯಕ್ಕೆ ಜಿ.ಡಿ.ಪಿ.ಯ ಶೇ.10ರಷ್ಟು ಹಣ ಸಿಗುತ್ತಿದೆ. ನೆರೆಯ ಚೀನಾದಲ್ಲೂ ಶೇ.6.6ರಷ್ಟು ಸಿಗುತ್ತಿದೆ. ಆದರೆ, ಕೇಂದ್ರ ಸರ್ಕಾರ ತಾನೇ ಶೇ.2.5ರ ಗುರಿ ಹೊಂದಿ ದ್ದರೂ, ಈ ಬಾರಿ ಶೇ.2.1ರಷ್ಟು ಮಾತ್ರ ಸಿಗು ತ್ತಿದೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಭಾರತದಲ್ಲಿ ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಾಗುತ್ತಿದೆ. ಶಿಶು ಮರಣ ತಗ್ಗಿಸುವ ಗುರಿ ತಲುಪಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ಸವೈಕಲ್ ಕ್ಯಾನ್ಸರ್‌ಗೆ ಲಸಿಕೆ ಒದಗಿಸುತ್ತಿಲ್ಲ. ಜನರು ಆರೋಗ್ಯಕ್ಕಾಗಿ ಕೈಯಿಂದ ಹಣ ಖರ್ಚು ಮಾಡಿಕೊಂಡು ಬಡತನಕ್ಕೆ ಸಿಲುಕುತ್ತಿದ್ದಾರೆ. ಶೇ.63ರಷ್ಟು ಭಾರತೀಯರು ಈಗಲೂ ಆರೋಗ್ಯ ಸೇವೆಯ ವೆಚ್ಚವನ್ನು ತಾವೇ ಭರಿಸುವ ಪರಿಸ್ಥಿತಿ ಇದೆ ಎಂದವರು ಹೇಳಿದರು.
ಕನ್ನಡದಲ್ಲಿ ಮಾತು ಆರಂಭ, ದಾವಣಗೆರೆ ಜನತೆಗೆ ಕೃತಜ್ಞತೆ
ತಮ್ಮ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ‘ನಮ್ಮ ದಾವಣಗೆರೆ’ ಲೋಕಸಭಾ ಕ್ಷೇತ್ರದ ಎಲ್ಲ ಮತ ಬಾಂಧವರಿಗೆ ನನ್ನ ಆತ್ಮೀಯ ಕೃತಜ್ಞತೆಗಳು ಎಂದು ಹೇಳಿದರು.
ನಂತರ ಆರೋಗ್ಯ ವಲಯದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ, ಕಡಿಮೆ ಅನುದಾನ, ಆರೋಗ್ಯ ವಲಯದ ಕಡೆಗಣನೆ, ಕೇವಲ ಅಲಂಕಾರಿಕ ಕ್ರಮಗಳು, ದೂರದೃಷ್ಟಿ ಯೋಜನೆಗಳ ಕೊರತೆ, ಶ್ರಮಿಕ ವರ್ಗದವರಿಗೆ ಆರೋಗ್ಯ ಸಮಸ್ಯೆಯಿಂದ ಆಗುವ ಆರ್ಥಿಕ ಹೊರೆ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದರು. ಕೊನೆಯದಾಗಿ, ಹಲ್ವಾ ಬಗ್ಗೆ ಗೊತ್ತಿಲ್ಲ. ಆದರೆ, ಕರ್ನಾಟಕದ ಸಿಹಿ ತಿನಿಸಾದ ಮೈಸೂರು ಪಾಕ್ ಅನ್ನು ನನ್ನ ಕಡೆಯಿಂದ ಎಲ್ಲ ಸಭೆಗಳಲ್ಲಿ ಒದಗಿಸುತ್ತೇನೆ ಎಂದು ಹೇಳಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಬಜೆಟ್ ಹಲ್ವಾ’ ಅನ್ನು ಕೆಲವೇ ವರ್ಗದವರಿಗೆ ಸೀಮಿತಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದನ್ನು ಪ್ರಭಾ ಪರೋಕ್ಷವಾಗಿ ಪ್ರಸ್ತಾಪಿಸಿದಂತಿತ್ತು.
ಉದ್ಯಮಿಗಳು ಆರೋಗ್ಯಕ್ಕೆ ನೆರವಾಗಲಿ
ಅಜೀಂ ಪ್ರೇಮ್ಜಿ ಪ್ರತಿಷ್ಠಾನವು ಕರ್ನಾಟಕದಲ್ಲಿ ಮೂರು ವರ್ಷಗಳ ಕಾಲ ಶಾಲೆಗಳಿಗೆ ಮೊಟ್ಟೆ ಒದಗಿಸಲು 1,500 ಕೋಟಿ ರೂ.ಗಳನ್ನು ನೀಡಿದೆ. ಇದೇ ರೀತಿ ಇತರೆ ಉದ್ಯಮಿಗಳೂ ಸಹ ನೆರವು ನೀಡುವಂತೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸಬೇಕು. §ಎ¬ ಇಂದ ಹೆಸರು ಆರಂಭವಾಗುವ ಉದ್ಯಮಿಗಳನ್ನು ಸಂಪರ್ಕಿಸಿದರೆ ಯಾರಾದರೂ ಸಿಗಬಹುದು ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ರಾಯಚೂರಿಗೆ ಎಐಐಎಂಎಸ್ ನೀಡಲು ಆಗ್ರಹ
ಕರ್ನಾಟಕದ ರಾಯಚೂರು ಆಕಾಂಕ್ಷಿ ಜಿಲ್ಲೆಯಾಗಿದೆ. ಇತರೆ ವಲಯಗಳಿಗೆ ಹೋಲಿಸಿದರೆ ಇಲ್ಲಿ ತಲಾ ವರಮಾನ ಕಡಿಮೆ. ಇಲ್ಲಿ ಎಐಐಎಂಎಸ್ ಸ್ಥಾಪಿಸುವಂತೆ ಕರ್ನಾಟಕ ಸರ್ಕಾರ ಮನವಿ ಸಲ್ಲಿಸಿದೆ. ಇದಕ್ಕೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಒತ್ತಾಯಿಸಿದರು.
ದೇಶಕ್ಕೆ ಉನ್ನತ ಗುಣಮಟ್ಟದ ವೈದ್ಯಕೀಯ ಕೇಂದ್ರಗಳ ತುರ್ತು ಅಗತ್ಯವಿದೆ. ನಾವು 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸೇತುವೆಗಳನ್ನು ನಿರ್ಮಿಸಬಹುದಾದರೆ, ವಿಶ್ವ ದರ್ಜೆಯ ಆಸ್ಪತ್ರೆಗಳನ್ನು ನಿರ್ಮಿಸಲು ಏಕೆ ಸಾಧ್ಯವಾಗುತ್ತಿಲ್ಲ? ಎಂಬ ಬಗ್ಗೆ ಯೋಚಿಸಬೇಕಿದೆ ಎಂದು ಹೇಳಿದರು.
ಕೊರೊನಾ ಸಮಯದಲ್ಲಿ ಆದ ಅನಾಹುತಗಳಿಂದ ಸರ್ಕಾರ ಯಾವುದೇ ಪಾಠ ಕಲಿತಿಲ್ಲ. ಈಗಲೂ ನಮ್ಮ ಆರೋಗ್ಯ ಮೂಲಭೂತ ವ್ಯವಸ್ಥೆ ಕೊರೊನಾದಂತಹ ಪರಿಸ್ಥಿತಿ ಎದುರಿಸಲು ಸಾಧ್ಯವಾಗದ ರೀತಿಯಲ್ಲಿದೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಜನಸಮೂಹ ಆರೋಗ್ಯವಂತವಾಗಿದ್ದಾಗ ಹಾಗೂ ಆರೋಗ್ಯದ ಸಂಶೋಧನೆ ಮತ್ತು ಮೂಲಭೂತ ಸೌಲಭ್ಯದಲ್ಲಿ ಹೆಚ್ಚಿನ ಹೂಡಿಕೆ ಆದಾಗ ಮಾತ್ರ ಕೊರೊನಾದಂತಹ ಪರಿಸ್ಥಿತಿ ಎದುರಿಸಲು ಸಾಧ್ಯ. ಆದರೆ, ಈಗ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಅದು ಸಾಧ್ಯವಾಗದು ಎಂದರು.
ಬಜೆಟ್‌ನಲ್ಲಿ ಆರೋಗ್ಯ ವಲಯಕ್ಕೆ ತೆಗೆದುಕೊಂಡಿರುವ ಕ್ರಮಗಳು ಕೇವಲ ಅಲಂಕಾರಿಕವಾಗಿವೆ. ಇದರಿಂದ ಆರೋಗ್ಯ ವಲಯದ ರೂಪಾಂತರಣವಾಗುವುದಿಲ್ಲ. ಕೇವಲ ವಿಶ್ವಗುರು ಎಂದು ಹೇಳುವುದರಿಂದ ವಿಶ್ವ ಗುರು ಆಗುವುದಿಲ್ಲ. ವಿಶ್ವಗುರು ಆಗಲು ಮನಸ್ಸು, ಬುದ್ಧಿ ಹಾಗೂ ಬಜೆಟ್ ಅನುದಾನ ಬೇಕಿದೆ. ಆರೋಗ್ಯ ವಲಯದ ಬಗ್ಗೆ ಸಮಗ್ರ ಮರು ಆಲೋಚನೆಯ ಅಗತ್ಯವಿದೆ. ಕೇಂದ್ರ ಸರ್ಕಾರ ದೂರದೃಷ್ಟಿಯ ಸುಧಾರಣೆಗಳಿಗೆ ಮುಂದಾಗಬೇಕಿದೆ ಎಂದವರು ಒತ್ತಾಯಿಸಿದರು.