ಹರಿಹರ, ಜು.30- ಅನುಭವ ಇಲ್ಲದ ಕೆಲವರು, ಲಿಂಗಾಯತರು ಹಿಂದೂಗಳಲ್ಲ ಎಂದು ಹೇಳಿಕೊಂಡು ಹೋಗುತ್ತಿರುವು ದು ಹಾಸ್ಯಾಸ್ಪದ ಸಂಗತಿ ಯಾಗಿದೆ ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ಅವರು ರಾಣೇಬೆನ್ನೂರು ನಗರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮಾತನಾಡಿದರು. ಸಮಾಜದಲ್ಲಿ ಕೆಲವು ವ್ಯಕ್ತಿಗಳು ಬಸವಣ್ಣನವರು ಹಿಂದೂ ಅಲ್ಲ, ಲಿಂಗಾಯತರು ಹಾಗೂ ವೀರಶೈವರು ಹಿಂದೂವಿನ ಹೊರತಾದವರು ಎಂದು ಗೊಂದಲಗಳ ಹೇಳಿಕೆ ಯನ್ನು ನೀಡಿ ಸಮಾಜದಲ್ಲಿ ಅಶಾಂತಿ ವಾತಾವರಣವನ್ನು ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ವೀರಶೈವರು, ಲಿಂಗಾಯತರು ನಾವೆಲ್ಲರೂ ಹಿಂದೂವಿನ ಒಂದು ಭಾಗವಾಗಿದ್ದು, ವಿಶಾಲವಾದ ವೃಕ್ಷದ ಒಂದು ಟೊಂಗೆ ಇದ್ದಂತೆ. ಲಿಂಗಾಯತರು, ಜೈನರು, ಸಿಕ್ಕರು ಹಿಂದೂಗಳೇ, ಅದರಂತೆ ವೀರಶೈವ ಲಿಂಗಾಯತರು ಹಿಂದೂಗಳು. ಆದರೆ ಅಲ್ಪ ಜ್ಞಾನಿಗಳು, ಆಳವಾಗಿ ಅಧ್ಯಯನ ಮಾಡದೇ ಇರುವವರು ಮತ್ತು ಸಮಾಜದ ಬಗ್ಗೆ ಅನುಭವ ಇಲ್ಲದವರು ಸಮಾಜದಲ್ಲಿ ಗೊಂದಲವನ್ನು ಉಂಟುಮಾಡುತ್ತ ಸಾಗಿದ್ದಾರೆ.
ಬಸವಣ್ಣನವರ ಹತ್ತಿರ ಇದ್ದಿದ್ದು, ಗುಣಾಕಾರವೇ ಹೊರತು ಭಾಗಕಾರ ಅಲ್ಲ ಮತ್ತು ಬಸವಣ್ಣನವರು ಹೇಳಿದ್ದು ವ್ಯವಕಲನವಲ್ಲ ಅದು ಸಂಕಲನ ಹಾಗಾಗಿ ನಾವೆಲ್ಲರೂ ಒಂದು ಎಂಬ ಭಾವದಲ್ಲಿ ಹೋಗಬೇಕು. ನಾವು ಬಸವ ತತ್ವ ಆರಾಧನೆ ಮಾಡುತ್ತಿದ್ದೇವೆ ಅಂದರೆ ಅಕ್ಕಮಹಾದೇವಿ ಭಕ್ತನ ಮುಖದ ದರ್ಪಣದಲ್ಲಿ ಲಿಂಗವನ್ನು ಕಾಣಬೇಕು ಎಂದರು. ನಾವು ಗೊಂದಲ ಮಾಡಿಕೊಳ್ಳಬಾರದು, ಎಲ್ಲರೂ ಒಂದೇ ಎಂಬ ಭಾವದಲ್ಲಿ ಸಾಗಿ ಜೋಡಿಸುವ ನಿಟ್ಟಿನಲ್ಲಿ ಪರಿವರ್ತನೆ ಆಗಬೇಕು ಎಂದು ಹೇಳಿದರು.