ದಾವಣಗೆರೆ, ಆ. 1- ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಮುಖ್ಯ. ಬಿತ್ತಿದ ಬೀಜಕ್ಕೆ ನೀರು, ಗೊಬ್ಬರ ಹೇಗೆ ಅವಶ್ಯವೋ ಹಾಗೆಯೇ ನೀತಿಗೆ ಧರ್ಮವೂ ಅಷ್ಟೇ ಅವಶ್ಯಕ ಎಂದು ಬಾಳೆ ಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆಯವರು ಸಂಘಟಿಸಿದ್ದ ಜನಜಾಗೃತಿ ಧರ್ಮ ಸಮಾವೇಶದ 3ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ಭಗವಂತನಿತ್ತ ಸಂಪತ್ತು ನಿಜವಾದ ಬಾಳಿನ ಸಂಪತ್ತು. ಭಕ್ತ ಭಗವಂತನೆಡೆಗೆ ಹೋದಾಗ ಜೀವನ ಪಾವನ ಪುನೀತ. ದೇವರ ಮೇಲಿನ ನಂಬಿಕೆ ಮನುಷ್ಯನ ಬಾಳಿಗೆ ಶಾಶ್ವತ ನಂದಾದೀಪ ಎಂದು ನುಡಿದರು.
ದೇವರು ಎಲ್ಲರಲ್ಲೂ ಇರುತ್ತಾನೆ. ಆದರೆ ಎಲ್ಲರೂ ದೇವರಲ್ಲಿ ಇಲ್ಲ. ಶ್ರಮದ ಕಾಯಕದಿಂದಲೇ ಚೈತನ್ಯ ಪ್ರಾಪ್ತಿಯಾಗುತ್ತದೆ. ಕ್ರಿಯಾಶೀಲ ಬದುಕು ಶ್ರೇಯಸ್ಸಿಗೆ ಕಾರಣ. ಬದುಕಿನ ಹಿರಿಮೆ ರಹಸ್ಯ ಬೋಧಿಸುವುದೇ ನಿಜವಾದ ಧರ್ಮ ಎಂದು ಹೇಳಿದರು.
ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಬಾಳಬೇಕೆಂದು ವೀರಶೈವ ಧರ್ಮ ನಿರೂಪಿಸಿದೆ. ಧರ್ಮ ಮತ್ತು ದರ್ಶನಗಳ ಅರಿವು ಪ್ರಾಪ್ತಿಯಾಗಲು ಶ್ರೀ ಗುರುವಿನ ಬೋಧಾಮೃತ ಅವಶ್ಯಕ. ಸತ್ಯ ಶುದ್ಧವಾದ ತತ್ವ, ಸಿದ್ಧಾಂತಗಳನ್ನು ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನೆಗಳನ್ನು ಅರಿತುಕೊಂಡು ಬಾಳಬೇಕು ಎಂದರು.
ಹಂಪಸಾಗರ ನವಲಿ ಹಿರೇಮಠದ ಶ್ರೀ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಹೊರಗಿನ ಕತ್ತಲೆ ಕಳೆಯಲು ಸೂರ್ಯನ ಬೆಳಕು ಬೇಕು. ಬದುಕಿನ ಅಜ್ಞಾನ ಕಳೆಯಲು ಗುರುವಿನ ಜ್ಞಾನ ಬೋಧಾಮೃತ ಬೇಕು. ವೀರಶೈವ ಧರ್ಮದಲ್ಲಿ ಅರಿವನ್ನು ನೀಡುವ ಗುರುವಿಗೆ ಮೊದಲ ಸ್ಥಾನ ಇದೆ ಎಂದರು.
ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬದುಕಿಗೆ ಭಗವಂತ ಕೊಟ್ಟ ಕೊಡುಗೆ ಅಪಾರ. ಅವನಂಥ ದಾನಿ ಇನ್ನೊಬ್ಬನಿಲ್ಲ. ಗುರು, ಧರ್ಮ, ದೇವರನ್ನು ಮರೆಯಬಾರದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಪಂಚ ಪೀಠಗಳಲ್ಲಿ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವುದು ರಂಭಾಪುರಿ ಪೀಠ ಮಾತ್ರ. ಶ್ರೀಗಳ ಆಶೀರ್ವಾದ ಇಂದು ಜಗತ್ತಿಗೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ವರ್ಷ ಪೂರ್ತಿ ಧರ್ಮ ಜಾಗೃತಿ ಕಾರ್ಯಕ್ರಮಗಳ ಮೂಲಕ ಎಲ್ಲರನ್ನೂ ಸಂಘಟಿಸುತ್ತಾ, ಮಾರ್ಗದರ್ಶನ ನೀಡುತ್ತಿರುವ ಶ್ರೀಗಳ ಕಾರ್ಯ ಶ್ಲ್ಯಾಘನೀಯವಾದದ್ದು. ನಾವೆಲ್ಲಾ ಶ್ರೀಗಳು ತೋರಿಸಿಕೊಟ್ಟ ದಾರಿಯಲ್ಲಿ ಮುನ್ನಡೆಯೋಣ ಎಂದರು.
ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ್ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ತಿಳಿಸಿ, ಅವರನ್ನು ಜಾಗೃತಿಗೊಳಿಸಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ ಎಂದರು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡುತ್ತಾ, ಇಂತಹ ಧರ್ಮ ಜಾಗೃತಿ ಸಮಾರಂಭಗಳಿಗೆ ಹಿರಿಯರು ಮಾತ್ರ ಆಗಮಿಸುತ್ತಿದ್ದಾರೆ. ಇದರ ಜೊತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕರೆ ತರುವ ಅಗತ್ಯವಿದೆ ಎಂದರು. ಆಗ ಮಾತ್ರ ನಾಡಿನ ಪರಂಪರೆ ತಿಳಿಯುತ್ತದೆ ಎಂದರು.
`ಸಾಧನೆಯ ಶಿಖರ’ ಪ್ರಶಸ್ತಿ ಸ್ವೀಕರಿಸಿದ, ಯುಪಿಎಸ್ಸಿಯಲ್ಲಿ 101ನೇ ರಾಂಕ್ ಪಡೆದ ವಿದ್ಯಾರ್ಥಿನಿ ಕು.ಸೌಭಾಗ್ಯ ಬೀಳಗಿಮಠ ಮಾತನಾಡುತ್ತಾ, ಸಾಧನೆ ಸಾಧಕನ ಸೊತ್ತು. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಕಠಿಣ ಪರಿಶ್ರಮ, ಗುರಿಯೊಂದಿಗೆ ಮುನ್ನಡೆದಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅದಕ್ಕೆ ಅತ್ಯಂತ ಬಡ ಕುಟುಂಬದಿಂದ ಬಂದ ನಾನೇ ಉದಾಹರಣೆ ಎಂದರು.
ಕಳೆದ ಐದು ವರ್ಷದ ಹಿಂದೆ ರಂಭಾಪುರಿ ಜಗದ್ಗುರುಗಳ ಆಷಾಢ ಮಾಸದ ಪೂಜೆಯಲ್ಲಿ ಶ್ರೀಗಳ ಮಾತುಗಳೂ ಸಹ ನನ್ನ ಸಾಧನೆಗೆ ಪ್ರೇರಣೆಯಾಗಿದ್ದವು ಎಂದು ನೆನಪಿಸಿಕೊಂಡರು.
ಚನ್ನಗಿರಿ ಶ್ರೀ ಕೇದಾರ ಶಿವಶಾಂತವೀರ ಶಿವಾಚಾರ್ಯರು, ತಾವರೆಕೆರೆ ಶ್ರೀ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಹೆಚ್.ಸಿ.ಜಯಮ್ಮ, ಕಾಂಗ್ರೆಸ್ ಮುಖಂಡ ಎ. ನಾಗರಾಜ್ ಉಪಸ್ಥಿತರಿದ್ದರು.
ಎಸ್.ಜೆ.ವಿ.ಪಿ.ಕಾಲೇಜು ಉಪಾಧ್ಯಕ್ಷ ಡಿ.ಎಂ.ಹಾಲಸ್ವಾಮಿ, ನಿರ್ದೇಶಕ ಎನ್.ಎಚ್.ಪಾಟೀಲ್, ವೀ.ಲಿಂ.ಮಹಾಸಭಾ ನಗರ ಘಟಕದ ಅಧ್ಯಕ್ಷ ಶಂಭು ಉರೇಕೊಂಡಿ, ಬಿ.ಜೆ.ರಮೇಶ್, ಎಂ.ಗುಡ್ಡಪ್ಪ, ಮಾಗಾನಹಳ್ಳಿ ಗಿರೀಶ್, ಎಂ.ಬಸವರಾಜ್, ಚನ್ನವೀರಸ್ವಾಮಿ ಇತರರು ಗುರುರಕ್ಷೆ ಪಡೆದರು.
ಡಿ.ವಿ.ಆರಾಧ್ಯಮಠ ಸ್ವಾಗತಿಸಿದರು. ಗುರುಶಾಂತ ಸೋಗಿ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಸಲ್ಲಿಸಿದರು. ಪುಷ್ಪಾ ವಾಲಿ ನಿರೂಪಿಸಿದರು.
ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಮತ್ತು ಶ್ರೀ ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದೇವರಮನೆ ಶಿವರಾಜ್ ಅವರು ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.
ಬೆಳಿಗ್ಗೆ ಲೋಕ ಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜ ನೆರವೇರಿಸಿ ಆಶೀರ್ವದಿಸಿದರು.