ಅಪ್ಪರ್ ಭದ್ರಾ ಬಗ್ಗೆ ಭಯಬೇಡ, ಅದು ಕನಸಾಗಿ ಉಳಿಯಲಿದೆ : ನರಸಿಂಹಪ್ಪ

ಅಪ್ಪರ್ ಭದ್ರಾ ಬಗ್ಗೆ ಭಯಬೇಡ, ಅದು ಕನಸಾಗಿ ಉಳಿಯಲಿದೆ : ನರಸಿಂಹಪ್ಪ

ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿಯ ಲಗಾನ್ ಟೀಮ್‌ನಿಂದ ಶಕ್ತಿ ಪ್ರದರ್ಶನ

ಶಿವಮೊಗ್ಗ, ಆ.1- ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಅಚ್ಚುಕಟ್ಟಿನ ರೈತರಿಗೆ ಭಯಬೇಡ. ಏಕೆಂದರೆ ಆ ಯೋಜನೆಗೆ ಕೇಂದ್ರ ಸರ್ಕಾರ ಅಷ್ಟೊಂದು ಅನುದಾನ ನೀಡಲ್ಲ. ಹಾಗಾಗಿ ಅದು ಪೂರ್ತಿಯಾಗಿ ಜಾರಿ ಆಗಲ್ಲ ಎಂದು ನೀರಾವರಿ ತಜ್ಞ ಪ್ರೊ. ಸಿ.ನರಸಿಂಹಪ್ಪ ಹೇಳಿದರು.

ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಗುರುವಾರ ಭಾರತೀಯ ರೈತ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಬಾಗಿನ ಅರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಪ್ಪರ್ ಭದ್ರಾ ಸಂಪೂರ್ಣವಾಗಿ ಜಾರಿಯಾಗುವುದು ಸುಲಭದ ಕೆಲಸವಲ್ಲ. ಆ ಯೋಜನೆ ಕನಸಾಗಿ ಉಳಿಯಲಿದೆ. ರಾಜ್ಯದಲ್ಲಿ ಅಕ್ರಮ ಪಂಪ್‌ಸೆಟ್‌ಗಳ ತೆರವಿಗಾಗಿ ಹೊಸ ಕಾನೂನು ಜಾರಿಯಾಗಲು ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರ ಹಿತಾಸಕ್ತಿ ಅರ್ಜಿಯೇ ಕಾರಣವಾಗಿದೆ.

ಸರ್ಕಾರ ಹೊಸ ಕಾನೂನನ್ನು ಪರಿ ಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಪ್ರೊ. ನರಸಿಂಹಪ್ಪ ಆಗ್ರಹಿಸಿದರು.

ಭದ್ರಾ ಡ್ಯಾಮ್‌ ಚಿಕ್ಕಮಗಳೂರು ಜಿಲ್ಲೆ ಯಲ್ಲಿದ್ದರೂ ಶೇ.70 ರಷ್ಟು ನೀರನ್ನು ದಾವಣಗೆರೆ ಜಿಲ್ಲೆಯ ರೈತರು ಬಳಕೆ ಮಾಡುತ್ತಿರುವುದರಿಂದ ದಾವಣಗೆರೆ ಜಿಲ್ಲೆಯವರನ್ನೇ ಭದ್ರಾ ಕಾಡಾ ಅಧ್ಯಕ್ಷರನ್ನಾಗಿ ನೇಮಿಸಬೇಕು. ಬೇರೆ ಜಿಲ್ಲೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಕೊನೆ ಭಾಗದ ರೈತರ ಸಮಸ್ಯೆ ಅವರಿಗೆ ಗೊತ್ತಾಗುವುದಿಲ್ಲ ಮತ್ತು ನೀರಿನ ವೇಳಾಪಟ್ಟಿ ನಿಗದಿ ಪಡಿಸಲು ಅವರಿಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ ಎಂದು ನರಸಿಂಹಪ್ಪ ಅಭಿಪ್ರಾಯಪಟ್ಟರು.

ಅಪ್ಪರ್ ಭದ್ರಾ ಬಗ್ಗೆ ಭಯಬೇಡ, ಅದು ಕನಸಾಗಿ ಉಳಿಯಲಿದೆ : ನರಸಿಂಹಪ್ಪ - Janathavani

ಈ ಹಿಂದೆ ನಡೆದ ಭದ್ರಾ ನಾಲೆಗಳ ಆಧುನೀಕರಣ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಆ ಕೆಲಸವನ್ನು ಬೇಸಿಗೆ ಸಮಯದಲ್ಲಿ ಮಾಡಿದರೆ ಮಾತ್ರ ಕೊನೆ ಭಾಗದ ರೈತರಿಗೆ ನೀರು ತಲುಪುತ್ತದೆ.

ಕಾವೇರಿ ಡ್ಯಾಮ್ ನಮ್ಮ ಡ್ಯಾಮ್‌ಗಿಂತ ಸಣ್ಣ ಡ್ಯಾಮ್‌ ಆಗಿದ್ದರೂ ಸಹ ಸದಾ ಸುದ್ದಿಯಲ್ಲಿರುತ್ತದೆ. ನಮ್ಮ ಡ್ಯಾಮ್‌ ಸದ್ದಿಲ್ಲದೇ ಬಹಳ ಸೇಫಾಗಿದೆ ಮತ್ತು ಸುರಕ್ಷಿತವಾಗಿದೆ ಎಂದು ಪ್ರೊ. ನರಿಸಿಂಹಪ್ಪ ಹೇಳಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಭದ್ರಾ ಉಳಿವಿಗಾಗಿ ಪ್ರೊ. ನರಸಿಂಹಪ್ಪ ಮತ್ತು ಎಸ್.ಎ.ರವೀಂದ್ರನಾಥ್ ಅವರು ಕಳೆದ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟದ ಫಲವಾಗಿ ನಾವು-ನೀವೆಲ್ಲರೂ ಇಲ್ಲಿಗೆ ಬರುವಂತಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ರವೀಂದ್ರನಾಥ್ ಅವರ ನೇತೃತ್ವದಲ್ಲಿ ಒತ್ತಡ ಹಾಕಿ, ಭದ್ರಾ ನಾಲೆಗಳ ಆಧುನೀಕರಣಕ್ಕೆ 900 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ ಕೆಲಸ ಮಾಡಿಸಿದ್ದರಿಂದ ನಾಲೆಗಳಲ್ಲಿ ನೀರು ಹರಿಯುತ್ತಿದೆ. ಆದರೆ, ಈಗಿನ ಸರ್ಕಾರ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳನ್ನೂ ಸಹ ತೆಗೆಸಲು ಅನುದಾನ ನೀಡದೇ ರೈತರಿಗೆ ತೊಂದರೆ ಕೊಟ್ಟಿದೆ. ಕಾಲುವೆಗಳಲ್ಲಿ ಹೂಳು ತುಂಬಿಕೊಂಡು ನೀರು ಮುಂದಕ್ಕೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಚೇರಿಗಳಲ್ಲಿ ಇಂಜಿನಿಯರ್‌ಗಳಿಲ್ಲ. ಸುಳ್ಳು ಭರವಸೆ ನೀಡಿ, ಅಧಿಕಾರಕ್ಕೆ ಬಂದಿರುವ ಈ ಸರ್ಕಾರದಲ್ಲಿ ಒಂದೂ ಅಭಿವೃದ್ಧಿ ಕೆಲಸ ಆಗಿಲ್ಲ. ಇಂತಹ ಕೆಟ್ಟ ಸರ್ಕಾರ ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ರೇಣುಕಾಚಾರ್ಯ ಭವಿಷ್ಯ ನುಡಿದರು.

ಚನ್ನಗಿರಿ ಕ್ಷೇತ್ರದ ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಪೂರ್ತಿ ನೀರನ್ನು ತುಂಗಾದಿಂದಲೇ ಲಿಫ್ಟ್ ಮಾಡುವಂತಾಗಬೇಕು ಮತ್ತು ಭದ್ರಾ ಡ್ಯಾಮ್ ಸುರಕ್ಷತೆ ಬಗ್ಗೆ ಸರ್ಕಾರ ನಿಗಾವಹಿಸಿ, ತಂತ್ರಜ್ಞರನ್ನು ಕರೆಸಿ ಪರೀಕ್ಷೆ ಮಾಡಿಸಬೇಕೆಂದರು.

ಹರಿಹರ ಕ್ಷೇತ್ರದ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಭದ್ರಾ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಸಲು ಸರ್ಕಾರ ತಕ್ಷಣ ಮುಂದಾಗುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು   ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ, ಭದ್ರಾ ಡ್ಯಾಮ್ ಬಗ್ಗೆ ಈಗ ಎಲ್ಲರಿಗೂ ಗೊತ್ತಾಗಿದ್ದು, ಡ್ಯಾಮ್‌ನಲ್ಲಿ ಎಷ್ಟು ಟಿಎಂಸಿ ನೀರಿದೆ ಎಂಬ ಬಗ್ಗೆಯೂ ನಮ್ಮ ರೈತರು ತಿಳಿದುಕೊಂಡಿದ್ದಾರೆ. ಇದಕ್ಕಾಗಿ ನಾನು ಮತ್ತು ನರಸಿಂಹಪ್ಪ ಅವರು 50 ವರ್ಷ ಹೋರಾಟ ಮಾಡುತ್ತಾ, ದಾವಣಗೆರೆ ಜಿಲ್ಲೆ ಜನರಿಗೆ ಭದ್ರಾ ಡ್ಯಾಮ್‌ ತೋರಿಸಿದ್ದೇವೆ. ಡ್ಯಾಮ್ ತುಂಬಿರುವುದು ಖುಷಿ ತಂದಿದೆ. ಅಪ್ಪರ್ ಭದ್ರಾ ವಿಚಾರದಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಾಗಿರಬೇಕೆಂದು ಕರೆ ನೀಡಿದರು.

ದಾವಣಗೆರೆ ಉತ್ತರ ಕ್ಷೇತ್ರದ ಮುಖಂಡ ಲೋಕಿಕೆರೆ ನಾಗರಾಜ್, ಬಿಜೆಪಿ ಮುಖಂಡ ಕೊಳೇನಹಳ್ಳಿ ಸತೀಶ್ ಮಾತನಾಡಿದರು.

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಬಸವರಾಜ ನಾಯ್ಕ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎ.ಹೆಚ್.ಶಿವಯೋಗಿ ಸ್ವಾಮಿ, ಮಾಜಿ ಮೇಯರ್ ಬಿ.ಜಿ.ಅಜಯ್‌ಕುಮಾರ್, ಬಿಜೆಪಿ ಮುಖಂಡ ಎಲ್.ಎನ್.ಕಲ್ಲೇಶ್, ದೂಡಾ ಮಾಜಿ ಅಧ್ಯಕ್ಷ ಕೆ.ಎಂ.ಸುರೇಶ್, ಭದ್ರಾವತಿ ಕ್ಷೇತ್ರದ ಬಿಜೆಪಿ ಮುಖಂಡ ಮಂಗೋಟಿ ರುದ್ರಪ್ಪ, ಜಿ.ಪಂ. ಮಾಜಿ ಅಧ್ಯಕ್ಷರಾದ ಪ್ರೇಮಾ ಲೋಕೇಶ್ವರಪ್ಪ, ಮಾಜಿ ಮೇಯರ್ ಗುರುನಾಥ್, ಸಂಗನಗೌಡ, ಕುಬೇರಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕಡ್ಲೇಬಾಳು ಧನಂಜಯ, ಅನಿಲ್‌ನಾಯ್ಕ, ಐರಣಿ ಅಣ್ಣಪ್ಪ, ಮಂಗೇನಹಳ್ಳಿ ಲೋಹಿತ್, ಯಲವಟ್ಟಿ ಯೋಮಕೇಶ್ವರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಡಾ ಪ್ರಕಾಶ್, ಶಿರಮಗೊಂಡನಹಳ್ಳಿಯ ಎಸ್.ಎ.ವಿಜಯಕುಮಾರ್, ಎ.ಬಿ.ಕರಿಬಸಪ್ಪ, ಜಿ.ಗುಡ್ಡಪ್ಪ, ದೀಟೂರು ನಿರಂಜನ್, ಕುಣೆಬೆಳಕೆರೆ ಮಲ್ಲೇಶಪ್ಪ, ಬೇವಿನಹಳ್ಳಿ ಮಹೇಶ್ವರಪ್ಪ, ಕೊಮಾರನಹಳ್ಳಿಯ ಮಡಿವಾಳರ ಬಸವರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!