ಆಶಾಗಳ ಪ್ರೋತ್ಸಾಹ ಧನವನ್ನು 15 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಆಗ್ರಹ
ದಾವಣಗೆರೆ, ಜು.31- ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಮಾಸಿಕ ಪ್ರೋತ್ಸಾಹ ಧನವನ್ನು 15 ಸಾವಿರ ರೂ.ಗಳಿಗೆ ನಿಗದಿ ಪಡಿಸಬೇಕೆಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಒತ್ತಾಯಿಸಿದರು.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಎಐಯುಟಿಯುಸಿ ನೇತೃತ್ವದಲ್ಲಿ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವೇ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾಗ ಆಶಾ ಕಾರ್ಯಕರ್ತೆಯರ ಸೇವೆಯನ್ನು ಪ್ರಪಂಚವು ಗುರುತಿಸಿದೆ. ಆದರೆ ಇಂದಿನ ದಿನಗಳಲ್ಲಿ ಅವರ ಶ್ರಮಕ್ಕೆ ತಕ್ಕ ಪ್ರೋತ್ಸಾಹ ಧನ ಸರ್ಕಾರದಿಂದ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರ ಒಗ್ಗಟ್ಟನ್ನು ಅವರ ಸೀರೆಯ ಬಣ್ಣದಲ್ಲಿ ಕಾಣಬಹುದಾಗಿದೆ. ಆದ್ದರಿಂದ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವವರೆಗೂ ಕಾರ್ಮಿಕರೆಂದು ಗುರುತಿಸಬೇಕು ಮತ್ತು ಸಾರ್ವಜನಿಕ ಆರೋಗ್ಯವನ್ನು ಬಲಪಡಿಸಲು ಅಗತ್ಯ ಇರುವಷ್ಟು ಬಜೆಟನ್ನು ಒದಗಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಮಟ್ಟದ ಸಮ್ಮೇಳನ..!
ಕಲಬುರ್ಗಿಯಲ್ಲಿ ಸೆಪ್ಟೆಂಬರ್ 14 ಮತ್ತು 15ರಂದು ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಅಂದು 10 ಸಾವಿರ ಆಶಾ ಕಾರ್ಯಕರ್ತೆಯರು ಭಾಗವಹಿಸುವ ನಿರೀಕ್ಷೆ ಹೊಂದಿದ್ದೇವೆ.
ವಿಶ್ವ ಮಟ್ಟದ ಡಬ್ಲ್ಯುಎಚ್ಒ ಸಂಸ್ಥೆಯು ಭಾರತದ ಆಶಾ ಕಾರ್ಯಕರ್ತೆಯರ ಸೇವೆಗೆ ಗೌರವಿಸಿ `ಸಾಮೂಹಿಕ ಆರೋಗ್ಯ ನಾಯಕರು’ ಎಂಬ ಬಿರುದು ನೀಡಿರುವುದು ಹೆಮ್ಮೆಯ ವಿಚಾರ.
– ಡಿ. ನಾಗಲಕ್ಷ್ಮೀ, ರಾ.ಸಂ.ಆ.ಕಾ.ಸಂ ಕಾರ್ಯದರ್ಶಿ
ಹಕ್ಕೊತ್ತಾಯಗಳು..
- ಸಾಮಾಜಿಕ ಸೇವಾ ಭದ್ರತೆ ಖಾತ್ರಿ ಪಡಿಸಬೇಕು.
- ಸೇವಾ ನಿವೃತ್ತಿಯಾದ ಆಶಾಗಳಿಗೆ 3 ಲಕ್ಷ ಇಡಿಗಂಟು ನೀಡಬೇಕು.
- ಸೇವಾ ದಿನಗಳಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ 2ಲಕ್ಷ ರೂ. ಪರಿಹಾರ ನೀಡಬೇಕು.
- ಆಶಾಗಳದ್ದಲ್ಲದ ಕೆಲಸವನ್ನು ಮಾಡಿಸುವುದು ನಿಲ್ಲಿಸಬೇಕು.
- ಮತ್ತಿತತರೆ ಹಲವು ಬೇಡಿಕೆಗಳನ್ನು ಮಂಡಿಸಿದರು.
ಸರ್ಕಾರಕ್ಕೆ ಪ್ರೋತ್ಸಾಹ ಧನ ಹೆಚ್ಚಿಸುವಂತೆ ಸಂಘದ ವತಿಯಿಂದ ಸಾಕಷ್ಟು ಬಾರಿ ಸಭೆ ನಡೆಸಿ ಮನವಿ ಮಾಡಿದ್ದರೂ ಸರ್ಕಾರ ಜಾರಿಕೊಳ್ಳುವ ಕೆಲಸ ಮಾಡುತ್ತಿತ್ತು. ಆದರೆ ಇದೀಗ 12 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಸರ್ಕಾರ ಒಪ್ಪಿದೆ ಎಂದು ತಿಳಿಸಿದರು.
ಸರ್ಕಾರವು ಈ ಸಲ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದಲ್ಲಿ ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರು ಒಗ್ಗಟ್ಟಿನಿಂದ ಸರ್ಕಾರದ ವಿರುದ್ಧ ಹೋರಾಟ ಮಾಡಲು ಸಿದ್ದರಾಗೋಣ ಎಂದು ಮನವಿ ಮಾಡಿದರು.
ಸಿಎಚ್‌ಒ ನೌಕರರ ಸಂಘದ ಜಿಲ್ಲಾಧ್ಯಕ್ಷ ವಸಂತ ಕುಮಾರ್ ಮಾತನಾಡಿ, ಆಶಾ ಕೆಲಸಗಾರರು ಆರೋಗ್ಯ ಕ್ಷೇತ್ರದಲ್ಲಿ ಮಾತ್ರ ಕಾರ್ಯನಿರ್ವಹಿಸದೇ ಸಾಮಾಜಿಕ ಭದ್ರತೆಗಾಗಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕುಕ್ಕುವಾಡ, ದಾವಣಗೆರೆ ತಾಲ್ಲೂಕು ಸಮಿತಿ ಅಧ್ಯಕ್ಷರಾದ ಲಲಿತಮ್ಮ, ಕಾರ್ಯದರ್ಶಿ ಹಾಲಮ್ಮ, ಜಗಳೂರು ಸಮಿತಿಯ ಗೌರವಾಧ್ಯಕ್ಷೆ ಲೀಲಾವತಿ, ಅಧ್ಯಕ್ಷೆ ತಿಪ್ಪಮ್ಮ, ಮುಖಂಡರಾದ ಲಕ್ಷ್ಮಿದೇವಿ, ಮಂಜಮ್ಮ, ಕರಿಬಸಮ್ಮ, ಜ್ಯೋತಿ ಇತರರಿದ್ದರು.