ಸಿದ್ದೇಶ್ವರಗೆ ಎಸ್ಸೆಸ್ ತಿರುಗೇಟು
ದಾವಣಗೆರೆ, ಜು. 31 – ನನ್ನ ಮಗ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಜಿಂಕೆ ಪ್ರಕರಣದಲ್ಲಿ ಅತ್ತಿರುವುದಾಗಿ ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಹೇಳಿರುವುದನ್ನು ತಳ್ಳಿ ಹಾಕಿರುವ ಶಾಸಕ ಶಾಮನೂರು ಶಿವಶಂಕರಪ್ಪ, ನಾವು ಸೆಡ್ಡು ಹೊಡೆಯುವ ಜನರೇ ಹೊರತು ಅಳುವವರಲ್ಲ ಎಂದಿದ್ದಾರೆ.
ದೂಡಾ ಅಧ್ಯಕ್ಷರಾಗಿ ದಿನೇಶ್ ಕೆ. ಶೆಟ್ಟಿ ಅಧಿಕಾರ ವಹಿಸಿಕೊಳ್ಳುವ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಂಕೆ ಪ್ರಕರಣದಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಅತ್ತಿದ್ದೇನೆ ಎಂದು ಸಿದ್ದೇಶ್ವರ ಹೇಳಿದ್ದಾರೆ. ನಾವು ಅಳುವ ಜನ ಅಲ್ಲ, ಸೆಡ್ಡು ಹೊಡೆಯುವ ಜನ ಎಂದು ತಿರುಗೇಟು ನೀಡಿದರು.
ಸಿದ್ದೇಶ್ವರ ಮಾತನಾಡುವುದಿದ್ದರೆ ಎದುರಿನಲ್ಲಿ ಬಂದು ಮಾತನಾಡಲಿ. ಮಾತನಾಡಲು ಸಿದ್ಧವಿದ್ದೇನೆ. ಅವರು ಪೈಲ್ವಾನರನ್ನು – ಗೂಂಡಾಗಳನ್ನು ಪಕ್ಕದಲ್ಲಿಟ್ಟುಕೊಂಡಿದ್ದರೆ ಏನೂ ನಡೆಯುವುದಿಲ್ಲ ಎಂದೂ ಶಿವಶಂಕರಪ್ಪ ಹೇಳಿದರು.
ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರಿಗೆ ಬೈದಿಲ್ಲ ಎಂದು ಮಾಜಿ ಸಂಸದ ಹೇಳಿದ್ದಾರೆ. ಅವರಿಗೆ ಪತ್ರಿಕೆಯಲ್ಲಿ ಬಂದಿರುವ ವರದಿಗಳನ್ನು ತೋರಿಸುತ್ತೇನೆ. ಅವರು ಅಲ್ಲೊಂದು, ಇಲ್ಲೊಂದು ಮಾತನಾಡುತ್ತಾರೆ. ಚುನಾ ವಣೆಗೆ ಮುಂಚೆ ದುಡ್ಡಿಲ್ಲ ಎಂದು ಹೇಳಿ ಯಡಿಯೂರಪ್ಪ ನವರಿಂದ 5-10 ಕೋಟಿ ರೂ. ತೆಗೆದುಕೊಂಡು ಬಂದಿರುವುದು ನಮಗೆಲ್ಲ ಗೊತ್ತಿದೆ ಎಂದೂ ಹೇಳಿದರು.
ಈಗಾಗಲೇ ಸಿದ್ದೇಶ್ವರ ಜಿಲ್ಲೆಯ ಬಿಜೆಪಿಯನ್ನು ಎರಡು ಭಾಗ ಮಾಡಿದ್ದಾರೆ. ಮುಂದೆ ನಾಲ್ಕು ಭಾಗ ಮಾಡಲಿದ್ದಾರೆ ಎಂದು ಎಸ್ಸೆಸ್ ಲೇವಡಿ ಮಾಡಿದರು.
ಈ ಹಿಂದೆ ಬಿಜೆಪಿಯವರು ಕಾಂಗ್ರೆಸ್ನಲ್ಲಿದ್ದವರನ್ನು ಕರೆದುಕೊಂಡು ಬಂದು ಒಂದೇ ದಿನದಲ್ಲಿ ದೂಡಾ ಅಧ್ಯಕ್ಷರನ್ನಾಗಿ ಮಾಡಿದ್ದರು. ನಾವು ಅಂತಹ ಖದೀಮ ಕೆಲಸ ಮಾಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದ ಇದ್ದು, ಸಾಮಾನ್ಯ ಕಾರ್ಯಕರ್ತರಾಗಿದ್ದವರಿಗೆ ದೂಡಾ ಅಧ್ಯಕ್ಷ ಸ್ಥಾನ ನೀಡಿದ್ದೇವೆ ಎಂದರು.
ಹಿಂದಿನ ಒಬ್ಬ ದೂಡಾ ಅಧ್ಯಕ್ಷ ಪತ್ನಿ ತಂಗಿಯ ಹೆಸರಿಗೆ ಮೊದಲು ದೂಡಾ ನಿವೇಶನ ಕೊಟ್ಟು, ನಂತರ ತನ್ನ ಹೆಸರಿಗೆ ಮಾಡಿಕೊಂಡು ದೊಡ್ಡ ಕಟ್ಟಡ ಕಟ್ಟಿದ್ದಾರೆ. ದಿನೇಶ್ ಶೆಟ್ಟಿ ಅಂತಹ ಕೆಲಸ ಮಾಡುವುದಿಲ್ಲ, ಬೇರೆಯವರು ಅಂತಹ ಕೆಲಸ ಮಾಡಲು ಅವಕಾಶವನ್ನೂ ಕೊಡುವುದಿಲ್ಲ ಎಂದು ಶಿವಶಂಕರಪ್ಪ ಹೇಳಿದರು.