ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾಕಿರಣ: ರಂಭಾಪುರಿ ಜಗದ್ಗುರುಗಳು

ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾಕಿರಣ: ರಂಭಾಪುರಿ ಜಗದ್ಗುರುಗಳು

ಎಸ್.ಎಸ್. ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ. ಕೆ.ಸಿ. ಶಿವಮೂರ್ತಿ ಅವರಿಗೆ `ವೈದ್ಯ ಚಿಂತಾಮಣಿ’ ಬಿರುದನ್ನಿತ್ತು ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ದಾವಣಗೆರೆ, ಜು. 30- ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾಕಿರಣ. ಮನುಷ್ಯ ಯಾವಾಗಲೂ ಸುಖವನ್ನು ಅಪೇಕ್ಷಿಸುತ್ತಾನೆ. ಸುಖದ ಮೂಲ ಧರ್ಮದ ಆಚರಣೆಯಲ್ಲಿದೆ ಎಂದು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ  ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

ನಗರದ ಶ್ರೀ ಅಭಿನವ ರೇಣುಕ ಮಂದಿರದ ಸಭಾಂಗಣದಲ್ಲಿ ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆ ವತಿಯಿಂದ ಇಂದು ಆರಂಭಗೊಂಡಿರುವ 5 ದಿನಗಳ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ, ಜನ ಜಾಗೃತಿ ಧರ್ಮ ಸಮಾವೇಶದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ದೊಡ್ಡ ದೊಡ್ಡ ಮಾತುಗಳಿಂದ ಮನುಷ್ಯ ದೊಡ್ಡವನಾಗುವುದಿಲ್ಲ. ದೊಡ್ಡ ಮನಸ್ಸು, ಉನ್ನತ ಗುಣಗಳಿಂದ ದೊಡ್ಡಸ್ತಿಕೆ ಪ್ರಾಪ್ತವಾಗುತ್ತದೆ. ಅರಿತು ಬಾಳುವುದರಲ್ಲಿ ಬದುಕಿನ ಉತ್ಕರ್ಷತೆ ಇದೆ. ಮನುಷ್ಯನಲ್ಲಿ ಸದ್ಗುಣ ಮತ್ತು ದುರ್ಗುಣ ಎರಡೂ ಇವೆ. ಸದ್ಗುಣಿಗಳ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುತ್ತದೆ. ದುರ್ಜನರ ಸಂಗದಲ್ಲಿ  ಬಾಳಿದರೆ ಬದುಕು ವಿನಾಶಗೊಳ್ಳುತ್ತದೆ ಎಂದು ಹೇಳಿದರು.

ವೀರಶೈವ ಧರ್ಮ ಸಿದ್ಧಾಂತದಲ್ಲಿ ಜೀವನ ವಿಕಾಸದ ಅಧ್ಯಾತ್ಮ ತತ್ವಗಳನ್ನು ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ್ದಾರೆ.  ಧರ್ಮ, ನೀತಿ, ಒಳ್ಳೆಯ ಮಾತುಗಳನ್ನು ಅಳವಡಿಸಿಕೊಂಡರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿಯನ್ನು ಯಾರೂ ಮರೆಯಬಾರದು. ಮೂಲ ಮರೆತರೆ ಜೀವನದಲ್ಲಿ ಅವನತಿ ನಿಶ್ಚಿತ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಂಚಪೀಠಗಳಲ್ಲಿ ರಂಭಾಪುರಿ ಪೀಠ ಅತ್ಯಂತ ಶ್ರೇಷ್ಠವಾದುದು. ಜಗದ್ಗುರು ಡಾ. ವೀರ ಸೋಮೇಶ್ವರ ಸ್ವಾಮೀಜಿ ಪೀಠವನ್ನು ಸಾಕಷ್ಟು ಅಭಿವೃದ್ಧಿಗೊಳಿಸುವ ಜೊತೆಗೆ ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿರುವುದು ಶ್ಲ್ಯಾಘನೀಯ ಎಂದರು.

ಎಲ್ಲಾ ತ್ಯಾಗಗಳನ್ನು ಮಾಡಿ ಸಮಾಜೋದ್ಧಾರಕ್ಕಾಗಿ ಅವತರಿಸಿ ಬಂದಿದ್ದಾರೆ. ತಮ್ಮ ಹರಿತವಾದ ಲೇಖನಗಳ ಮೂಲಕ, ಧಾರ್ಮಿಕ ಸಭೆ-ಸಮಾರಂಭಗಳ ಮೂಲಕ ಧರ್ಮ, ಸಂಸ್ಕೃತಿ, ಸಂಸ್ಕಾರಗಳನ್ನು ಬಿತ್ತುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ ಎಂದು ಹೇಳಿದರು.

ಗುರು-ಹಿರಿಯರು, ಹೆತ್ತ ತಂದೆ-ತಾಯಿಗಳನ್ನು ಸದಾ ಸ್ಮರಿಸುತ್ತಾ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಕಾಲು ಜಾರಿ ಆಗುವ ಅಪಾಯಕ್ಕಿಂತ ನಾಲಿಗೆ ಜಾರುವುದರಿಂದ ಆಗುವ ಅನಾಹುತ ಹೆಚ್ಚು ಎಂದರು.

ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಡಾ.ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,  ಜೀವನದಲ್ಲಿ  ದೇವರು, ಧರ್ಮ, ಗುರುಗಳು ಎಂಬ ಮೌಲ್ಯಗಳು ಮಾನವನ ನಂಬಿಕೆಗೆ ಇಂಬನ್ನು ನೀಡಿವೆ. ಭಾರತದ ಧರ್ಮ ಭೂಮಿಯಲ್ಲಿ ಮಾತ್ರ ಮನುಷ್ಯ ಸಂತಸದ ಬಾಳನ್ನು ಕಟ್ಟಿಕೊಡಲು ತುಂಬಾ ಸುಲಭದ ಸೂತ್ರ ಕಂಡುಕೊಂಡಿದ್ದಾನೆ ಎಂದರು. ವೀರಶೈವ ಧರ್ಮ ಪರಂಪರೆ ಪ್ರಾಚೀನವಾದುದು. ಈ ಧರ್ಮ ಕೊಟ್ಟಂತಹ ಸಂದೇಶ ಮತ್ತು ಕಾಯಕದಿಂದ ಜೀವನದ ಉಜ್ವಲತೆ ಕಾಣಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕಣ್ವಕುಪ್ಪಿ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅತಿಯಾದ ವೈಚಾರಿಕತೆಯ ದುಷ್ಪರಿಣಾಮದಿಂದ ಅನೇಕ ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ವೀರಶೈವ ಧರ್ಮದ ಮೂಲ ವಿಚಾರ ಧಾರೆಗಳನ್ನು ಅನುಸರಿಸಿ ಬಾಳಬೇಕೆಂದು ಹಿತ ನುಡಿದರು.

ಎಸ್.ಎಸ್. ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ. ಕೆ.ಸಿ. ಶಿವಮೂರ್ತಿ ಅವರಿಗೆ `ವೈದ್ಯ ಚಿಂತಾಮಣಿ’ ಬಿರುದನ್ನಿತ್ತು ರಂಭಾಪುರಿ ಶ್ರೀಗಳು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಕೆ.ಸಿ. ಶಿವಮೂರ್ತಿ ಅವರು, ಜನರಲ್ಲಿ ಸದ್ಭಾವನೆ, ಧರ್ಮ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸತತ 26 ವರ್ಷಗಳಿಂದ ಹಮ್ಮಿಕೊಂಡು ಬರಲಾಗುತ್ತಿದ್ದು, ಶ್ರೀಗಳ ಸಮಾಜ ಸೇವಾ ಕಾರ್ಯ ಪ್ರಶಂಸನೀಯ ಎಂದರು.

ಎಸ್.ಎಸ್. ಆಸ್ಪತ್ರೆ ಸಹ ಕಳೆದ 25 ವರ್ಷಗಳಿಂದ ಬಡ ಮಕ್ಕಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡುತ್ತಾ ಬಂದಿದೆ. ಸಾರ್ವಜನಿಕರೂ ಸಹ ಬಾಪೂಜಿ ಸಂಸ್ಥೆಯ ಉಚಿತ ತಪಾಸಣೆ, ಚಿಕಿತ್ಸೆಗಳ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.

ಹಾರನಹಳ್ಳಿ ಶಿವಯೋಗೀಶ್ವರ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು ಉಪಸ್ಥಿತರಿದ್ದರು. ಚನ್ನಗಿರಿ ಹಿರೇಮಠದ ಡಾ. ಕೇದಾರ ಶಿವಶಾಂತವೀರ ಸ್ವಾಮೀಜಿ, ಹಾರನಹಳ್ಳಿ ಶ್ರೀ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಮತ್ತು ಶ್ರೀ ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದೇವರಮನೆ ಶಿವರಾಜ್ ಅವರು ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.

ಪಾಲಿಕೆ ಸದಸ್ಯೆ ಶಿವಲೀಲಾ ಎನ್.ಎಂ. ಕೊಟ್ರಯ್ಯ, ಡಿಹೆಚ್‌ಯುಸಿ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಕೆ.ಎಂ. ರುದ್ರಮುನಿ, ಮ್ಯಾನೇಜರ್ ಪರಮೇಶ್ವರಪ್ಪ, ಶಿವಾನಿ ಮೆಡಿಕಲ್ಸ್ ಡಿ.ಕೆ.ಮಾಲತೇಶ್, ಗುತ್ತಿಗೆದಾರ ಲಿಂಗರಾಜ ಬಸಾಪುರ, ಮಂಜುಳ ಹೆಚ್.ಆರ್., ಐಗೂರು ಪ್ರಭು, ಚಂದ್ರಕಾಂತ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೂ ಹಾಗೂ ದಾನಿಗಳಿಗೂ ಶ್ರೀ ರಂಭಾಪುರಿ ಜಗದ್ಗುರುಗಳು ಗೌರವ ಶ್ರೀರಕ್ಷೆ ನೀಡಿದರು. ರಾಜಶೇಖರ ಗುಂಡಗಟ್ಟಿ ಮತ್ತಿತರರಿದ್ದರು.

ಹರಿಹರದ ಕಾಂತರಾಜ್ ಹಾಗೂ ವೀರೇಶ್ ಬಡಿಗೇರ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.  ಜಯದೇವ ದೇವರಮನೆ ಸ್ವಾಗತಿಸಿದರು.
ಪ್ರೊ.ಮಲ್ಲಯ್ಯ ನಿರೂಪಿಸಿದರು. ಹರೀಶ್ ಎನ್.ಕೆ. ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಸಲ್ಲಿಸಿದರು.

error: Content is protected !!