ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ಸೆಂ ಸೂಚನೆ
ದಾವಣಗೆರೆ, ಜು. 30- ಜಿಲ್ಲಾಸ್ಪತ್ರೆಯ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸು ವಂತೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 2024-25ನೇ ಸಾಲಿನ ಮೊದಲ ತ್ರೈ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯ ಸಚಿವರು ಜಿಲ್ಲೆಗೆ ಬಂದಾಗ ಚಿಗಟೇರಿ ಆಸ್ಪತ್ರೆ ಹೊಸ ಬ್ಲಾಕ್ ನಿರ್ಮಾಣಕ್ಕೆ 18 ಕೋಟಿ ಮಂಜೂರು ಮಾಡಿದ್ದಾರೆ. ಹಳೇ ಆಸ್ಪತ್ರೆಯಲ್ಲಿ ಹೊರ ರಾಂಪ್ ನಿರ್ಮಿಸಬೇಕಿದೆ. ವಾಟರ್ ಟ್ಯಾಂಕ್ ನಿರ್ಮಾಣವೂ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ಲಾನನ್ನು ತಂದು ತೋರಿಸಿ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲು ಜಿಲ್ಲಾ ಸರ್ಜನ್ಗೆ ತಿಳಿಸಿದರು.
ಈ ವರ್ಷ ಜಿಲ್ಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 16 ರಿಂದ 23 ನೇ ಸ್ಥಾನಕ್ಕಿಳಿದಿದ್ದು ಫಲಿತಾಂಶ ಸುಧಾರಣೆಗಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಮತ್ತು ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವಂತಹ ವಿಷಯಗಳಿದ್ದಲ್ಲಿ, ಆಯಾ ಕ್ಷೇತ್ರದ ಶಾಸಕರ ಗಮನಕ್ಕೆ ತರಬೇಕು ಮತ್ತು ಶೈಕ್ಷಣಿಕ ಗುಣಮಟ್ಟ ಉತ್ತಮಪಡಿಸಲು ಯೋಜನೆ ರೂಪಿಸಿ, ಅನುಷ್ಠಾನ ಮಾಡಲು ಉಪನಿರ್ದೇಶಕರಿಗೆ ಸೂಚನೆ ನೀಡಿ, ಶಿಕ್ಷಣ ಇಲಾಖೆ ಆಯುಕ್ತಾಲಯಕ್ಕೆ ನಡೆಸಲಾದ ಪತ್ರ ವ್ಯವಹಾರದ ಪ್ರತಿಯನ್ನು ಶಾಸಕರುಗಳಿಗೆ ನೀಡಲು ತಿಳಿಸಿದರು.
ಅಧಿಕಾರಿಗಳ ನಡೆಗೆ ಶಾಸಕರ ಅಸಮಾಧಾನ
ಸಭೆಯಿಂದ ಎದ್ದು ಹೊರಟ ದೇವೇಂದ್ರಪ್ಪ, ಕೈ ಹಿಡಿದು ಕೂರಿಸಿದ ಶಾಂತನಗೌಡ
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಆರಂಭದಲ್ಲಿಯೇ ಶಾಸಕರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದರು.
ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳ ನಡೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸಭೆಯಿಂದ ಹೊರಹೋಗುವುದಾಗಿ ಹೇಳಿ ಎದ್ದು ನಿಂತರು.
ಈ ವೇಳೆ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಅವರು ದೇವೇಂದ್ರಪ್ಪ ಅವರ ಕೈ ಹಿಡಿದು ಸಮಾಧಾನ ಮಾಡಿ ಮತ್ತೆ ಕೂರಿಸಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಹ ಸಭೆಯಿಂದ ಹೊರ ಹೋಗದಂತೆ ಹೇಳುತ್ತಾ, ಯಾವ ಅಧಿಕಾರಿ ಅಗೌರವ ತೋರಿಸುತ್ತಾರೆ ಹೇಳಿ ಕ್ರಮ ಕೈಗೊಳ್ಳೋಣ ಎಂದರು.
ನಾನೂ ಸಹ 2 ಲಕ್ಷ ಮತಗಳನ್ನು ಪಡೆದು ಗೆದ್ದು ಬಂದಿದ್ದೇನೆ. ನಮ್ಮ ಮೇಲೂ ಜವಾಬ್ದಾರಿ ಇರುತ್ತದೆ. ನಮ್ಮದು ಅತಿ ಹಿಂದುಳಿದ ತಾಲ್ಲೂಕು. ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಆದರೆ ಅಧಿಕಾರಿಗಳು ಮಾತು ಕೇಳುವುದಿಲ್ಲ ಎಂದು ಶಾಸಕ ದೇವೇಂದ್ರಪ್ಪ ಸಚಿವರ ಎದುರು ದೂರಿದರು.
ಜಿಲ್ಲಾಧಿಕಾರಿಗಳು ಸೇರಿದಂತೆ ಇಲಾಖೆಯ ಅಧಿಕಾರಿಗಳು ಸೌಜನ್ಯಕ್ಕಾದರೂ ನನ್ನನ್ನು ಭೇಟಿಯಾಗುವುದಿಲ್ಲ. ಇತ್ತೀಚೆೆಗೆ ಜಿಲ್ಲಾಧಿಕಾರಿಗಳು ಜಗಳೂರಿಗೆ ಬಂದಿದ್ದರೂ ನನ್ನನ್ನು ಭೇಟಿ ಮಾಡಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ನಮ್ಮ ಯಾವುದೇ ಕೆಲಸಗಳಿಗೆ ಸ್ಪಂದಿಸುವುದಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಹ ಅಧಿಕಾರಿಗಳ ನಡೆಯಿಂದಾಗಿ ರಾಜೀನಾಮೆ ಕೊಡಬೇಕೆನ್ನುವಷ್ಟು ಬೇಜಾರಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು ನನ್ನ ವ್ಯಾಪ್ತಿಗೆ ಬರುತ್ತವೆ. ಇಲ್ಲಿಯವರೆಗೆ ಯಾವ ಸಭೆಯ ಬಗ್ಗೆಯೂ ನನಗೆ ಆಹ್ವಾನ ಬಂದಿಲ್ಲ ಎಂದರು.
ಎಲ್ಲಾ ಅಧಿಕಾರಿಗಳ ಸಭೆ ಕರೆದು ಪ್ರೋಟೋಕಾಲ್ ನಂತೆ ಅಧಿಕಾರಿಗಳನ್ನು ಆಹ್ವಾನಿಸಲು ಸೂಚಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, `ನಿಮ್ಮ ಸರ್ಕಾರ ಇದ್ದಾಗ ಮಾಡುತ್ತಿದ್ದ ಪದ್ಧತಿ ಹಾಗೆಯೇ ಮುಂದುವರೆದಿದೆ. ಈಗ ಅದನ್ನು ನಾವು ಸರಿಪಡಿಸಬೇಕಿದೆ’ ಎಂದು ನವೀನ್ಗೆ ಕುಟುಕಿದರು.
ಶಾಸಕರುಗಳಿಗೆ ಗೌರವ ನೀಡುವಂತೆ, ಯೋಜನೆಗಳ ಕುರಿತು ಶಾಸಕರುಗಳೊಂದಿಗೆ ಚರ್ಚಿಸುವಂತೆ ಸಚಿವ ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚಿಸಿದರು.
ಪಶುಸಂಗೋಪನಾ ಅಧಿಕಾರಿಗೆ ವಿಪ ಸದಸ್ಯ ಭೋಜೇಗೌಡ ತರಾಟೆಗೆ
ಮುಂದಿನ 23 ವಾರಗಳವರೆಗೆ ಜಾನುವಾರುಗಳಿಗೆ ಆಗುವ ಮೇವು ಲಭ್ಯವಿರುವುದಾಗಿ ಹೇಳಿ, ಮತ್ತೆ ಮೇವಿನ ಲಭ್ಯತೆ ನಿರೀಕ್ಷಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿರುವ ಕುರಿತು ಪಶು ಸಂಗೋಪನಾ ಇಲಾಖೆ ಅಧಿಕಾರಿಯನ್ನು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅನುಪಾಲನವಾ ವರದಿಯಲ್ಲಿ ನಿರೀಕ್ಷೆ ಎಂಬ ಪದಗಳು ಬರಬಾರದು. ಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಬನ್ನಿ ಎಂದರು.
ಸೋಮವಾರ ಭದ್ರೆಗೆ ಬಾಗಿನ: ಎಸ್ಸೆಸ್ಸೆಂ
ಬರುವ ಸೋಮವಾರ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು. ಜಿಲ್ಲೆಯ ಎಲ್ಲಾ ಶಾಸಕರು ಈ ವೇಳೆ ಪಾಲ್ಗೊಳ್ಳಲಿದ್ದಾರೆೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಸಭೆಯಲ್ಲಿ ಮೂವರು `ಮೈತ್ರಿ’ ವಿಪ ಸದಸ್ಯರು
ಏನ್ ಎಲ್ಲಾ ಮಾತಾಡ್ಕಂಡು ಬಂದ್ರಾ ? ಎಂದ ಸಚಿವ ಮಲ್ಲಿಕಾರ್ಜುನ್
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಸಚಿವರೊಂದಿಗೆ ಶಾಸಕರು ಕುಳಿತು ಕೊಳ್ಳಲು ಅವಕಾಶವಿರಲಿಲ್ಲ. ಆದರೆ ಈ ಹಿಂದಿನ ಸಭೆಗಳಲ್ಲಿಯೂ ಈ ನಿಯಮ ಪಾಲಿಸದ ಕಾರಣ ಅದೇ ಪದ್ಧತಿ ಮುಂದುವರೆದಿತ್ತು.
ಸಚಿವರೊಟ್ಟಿಗೆ ಹೊನ್ನಾಳಿ, ಜಗಳೂರು, ಚನ್ನಗಿರಿ, ಮಾಯಕೊಂಡ ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳು ಸೇರಿದಂತೆ 13 ಗಣ್ಯರಿಗೆ ವೇದಿಕೆ ಮೇಲೆ ಆಸನ ಹೊಂದಿಸಲು ಜಿಲ್ಲಾ ಪಂಚಾಯ್ತಿ ಸಿಬ್ಬಂದಿಗಳು ಪರದಾಡಬೇಕಾಯಿತು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಈ ವಿಷಯ ಪ್ರಸ್ತಾಪಿಸಿದರು. ನಿಯಮದ ಪ್ರಕಾರ ಸಭೆಯಲ್ಲಿ ಶಾಸಕರು ಕೆಳಗಡೆ ಆಸೀನರಾಗಬೇಕು.
ಆದರೆ ಅಧ್ಯಕ್ಷರು ನಮಗೆ ಮೇಲೆಯೇ ಅವಕಾಶ ನೀಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.
ಶಾಸಕ ಶಾಂತನಗೌಡ ಅವರು ನಾವೆಲ್ಲಾ ಕೆಳಗೆ ಕೂರುತ್ತೇವೆ. ಹೊರ ಭಾಗದಿಂದ ಬಂದವರಿಗೆ ಮೇಲೆ ಕೂರಲು ಅವಕಾಶ ಕಲ್ಪಿಸಿಕೊಡುತ್ತೇವೆಂದು ಕೆಳಗೆ ಹೋರಟಿದ್ದರು. ನಾನೇ ಎಲ್ಲರೂ ಜೊತೆ ಕೂರೋಣ ಎಂದು ಹೇಳಿದ್ದಕ್ಕೆ ಎಲ್ಲರೂ ಕುಳಿತಿದ್ದಾರೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿಪ ಸದಸ್ಯ ಭೋಜೇಗೌಡರಿಗೆ ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ನ ವಿಪ ಸದಸ್ಯರೂ ಸಭೆಗೆ ಬಂದಿದ್ದೀರಿ. ಎಲ್ಲರೂ ಮಾತನಾಡಿಕೊಂಡು ಬಂದಿದ್ದೀರೇನು? ಎಂದು ಸಚಿವರು ಮುಗುಳ್ನಗುತ್ತಾ ಪ್ರಶ್ನಿಸಿದಾಗ, ಹೌದು, ಮಲ್ಲಣ್ಣ ಊಟಕ್ಕೆ ಹಾಕಿಸ್ತಾರೆ ಎಂದು ಬಂದಿದ್ದೇವೆ ಎಂದು ಭೋಜೇಗೌಡ್ರು ಚಟಾಕಿ ಹಾರಿಸಿದರು.
ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯ ಭರ್ತಿ ಹಂತಕ್ಕೆ ತಲುಪಿದ್ದು ರೈತರಲ್ಲಿ ಆಶಾ ಭಾವನೆಯನ್ನು ಮೂಡಿಸಿದ್ದು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಯಾವುದೇ ಅಧಿಕಾರಿಗಳು ಜಿಲ್ಲೆಗೆ ಹೊಸದಾಗಿ ಬಂದಾಗ ಸಂಬಂಧಿಸಿದ ಶಾಸಕರನ್ನು ಸಂಪರ್ಕಿಸಿ ಆಯಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳು, ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕಾಮಗಾರಿಗಳನ್ನು ಅನುಷ್ಟಾನ ಮಾಡುವಾಗ ಶಾಸಕರ ಗಮನಕ್ಕೆ ತರಬೇಕು ಮತ್ತು ಇದರ ಶಂಕುಸ್ಥಾಪನೆ, ಉದ್ಘಾಟನೆಯನ್ನು ಕೈಗೊಳ್ಳುವಾಗ ಇವರನ್ನು ಆಹ್ವಾನಿಸಬೇಕು ಮತ್ತು ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವಾಗಲೂ ಮಾಹಿತಿ ನೀಡಬೇಕು, ಈ ಬಗ್ಗೆ ಜಿಲ್ಲಾಧಿಕಾರಿಗಳು ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಲು ಸೂಚನೆ ನೀಡಿದರು.
ಸಭೆಯಲ್ಲಿ ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಕೆ.ಎಸ್.ನವೀನ್, ಡಾ. ಧನಂಜಯ್ ಸರ್ಜಿ, ಡಿ.ಟಿ.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಡಿ.ಬಸವರಾಜು, ಶ್ರೀಮತಿ ಶೋಭಾ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.